ಟೋಕಿಯೊ: ಒಲಿಂಪಿಕ್ಸ್‌ನಲ್ಲಿ ಭಾರತ ಸೇಲಿಂಗ್ ಪಟುಗಳ ಅಭಿಯಾನ ಭಾನುವಾರ ಆರಂಭವಾಗಲಿದೆ. ಇದೇ ಮೊದಲ ಬಾರಿ ದೇಶದ ನಾಲ್ವರು ಸ್ಪರ್ಧಿಗಳು ಕ್ರೀಡಾಕೂಟಕ್ಕೆ ಟಿಕೆಟ್ ಗಿಟ್ಟಿಸಿದ್ದು ಉತ್ತಮ ಸಾಮರ್ಥ್ಯ ತೋರುವ ನಿರೀಕ್ಷೆ ಮೂಡಿಸಿದ್ದಾರೆ.
ಭಾನುವಾರ ನೇತ್ರಾ ಕುಮನನ್ ಅವರು ಲೇಸರ್ ರೇಡಿಯಲ್ ರೇಸ್‌ನಲ್ಲಿ ಕಣಕ್ಕಿಳಿಯಲಿದ್ದರೆ, ವಿಷ್ಣು ಸರವಣನ್ ಅವರು ಲೇಸರ್ ಒಂದನೇ ರೇಸ್‌ನಲ್ಲಿ ಸ್ಪರ್ಧಿಸಲಿದ್ದಾರೆ.
ಕರ್ನಾಟಕದ ಗಣಪತಿ ಚೆಂಗಪ್ಪ ಮತ್ತು ವರುಣ್ ಥಕ್ಕರ್ ಕ್ರೀಡಾಕೂಟಕ್ಕೆ ಅರ್ಹತೆ ಗಳಿಸಿರುವ ಇನ್ನಿಬ್ಬರು ಸ್ಪರ್ಧಿಗಳು. ಕೇಂದ್ರ ಸರ್ಕಾರದ ಟಾಪ್ಸ್ ಯೋಜನೆಯಡಿ ಯೂರೋಪ್‌ನ ವಿವಿಧ ದೇಶಗಳಲ್ಲಿ ಸೇಲಿಂಗ್ ಪಟುಗಳು ತರಬೇತಿ ಪಡೆದಿದ್ದಾರೆ.
ಏಷ್ಯನ್ ಅರ್ಹತಾ ಚಾಂಪಿಯನ್‌ಷಿಪ್ ಮುಸಾನಾ ಓಪನ್ ಮೂಲಕ ಕ್ರೀಡಾಕೂಟಕ್ಕೆ ಟೋಕಿಯೊ ಟಿಕೆಟ್ ಗಿಟ್ಟಿಸಿರುವ ನೇತ್ರಾ, ಒಲಿಂಪಿಕ್ಸ್ ಪ್ರವೇಶ ಪಡೆದ ಭಾರತದ ಮೊದಲ ಮಹಿಳಾ ಸೇಲಿಂಗ್ ಪಟುವಾಗಿದ್ದಾರೆ. ಸರವಣನ್, ಗಣಪತಿ ಹಾಗೂ ವರುಣ್ ಅವರು ಒಮನ್‌ನಲ್ಲಿ ನಡೆದ ಏಷ್ಯನ್ ಅರ್ಹತಾ ಟೂರ್ನಿಯಲ್ಲಿ ತೋರಿದ ಉತ್ತಮ ಸಾಮರ್ಥ್ಯದಿಂದಾಗಿ ಕ್ರೀಡಾಕೂಟಕ್ಕೆ ಅರ್ಹರಾಗಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.