ADVERTISEMENT

2025ರ ಹಿನ್ನೋಟ | ಅಥ್ಲೆಟಿಕ್ಸ್‌, ಕಬಡ್ಡಿ, ಸ್ಕ್ವಾಷ್‌, ಕೊಕ್ಕೊ, ಬಾಕ್ಸಿಂಗ್‌

​ಪ್ರಜಾವಾಣಿ ವಾರ್ತೆ
Published 26 ಡಿಸೆಂಬರ್ 2025, 22:30 IST
Last Updated 26 ಡಿಸೆಂಬರ್ 2025, 22:30 IST
ನೀರಜ್ ಚೋಪ್ರಾ
ನೀರಜ್ ಚೋಪ್ರಾ   

ನೀರಜ್‌ ‘ಏಳು–ಬೀಳು’: ಭಾರತದ ಜಾವೆಲಿನ್‌ ಥ್ರೋ ತಾರೆ ನೀರಜ್ ಚೋಪ್ರಾ ಅವರು ಮೇ 16ರಂದು ನಡೆದ ದೋಹಾ ಡೈಮಂಡ್ ಲೀಗ್‌ನಲ್ಲಿ ಜಾವೆಲಿನ್‌ ಅನ್ನು 90.23 ಮೀಟರ್‌ ದೂರ ಎಸೆದು, ವೈಯಕ್ತಿಕ ಶ್ರೇಷ್ಠ ಸಾಧನೆ ಪ್ರದರ್ಶಿಸಿದರು. ಆದರೆ, ಸತತ ಎರಡನೇ ಬಾರಿ ವಿಶ್ವ ಚಾಂಪಿಯನ್ ಕಿರೀಟ ಧರಿಸುವ ಅವರ ಕನಸು ಭಗ್ನವಾಯಿತು. ಟೋಕಿಯೊದಲ್ಲಿ ಸೆಪ್ಟೆಂಬರ್‌ನಲ್ಲಿ ನಡೆದ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಎಂಟನೇ ಸ್ಥಾನ ಪಡೆದರು. ಭಾರತದವರೇ ಆದ ಯುವ ಅಥ್ಲೀಟ್ ಸಚಿನ್ ಯಾದವ್ ನಾಲ್ಕನೇ ಸ್ಥಾನ ಪಡೆದು ಸ್ವಲ್ಪದರಲ್ಲೇ ಕಂಚಿನ ಪದಕ ತಪ್ಪಿಸಿಕೊಂಡರು. 

ಅನಿಮೇಶ್ ರಾಷ್ಟ್ರೀಯ ದಾಖಲೆ: ಜಾರ್ಖಂಡ್‌ನ ಅಥ್ಲೀಟ್ ಅನಿಮೇಶ್ ಕುಜೂರ್ ಅವರು 100 ಮೀ ಓಟದಲ್ಲಿ ದಾಖಲೆ (10.18 ಸೆಕೆಂಡು) ಬರೆದರು. ಆ ಮೂಲಕ ದೇಶದ ಅಗ್ರಮಾನ್ಯ ಓಟಗಾರನಾಗಿ ಹೊರಹೊಮ್ಮಿದರು. 200 ಮೀ. ಓಟದಲ್ಲಿಯೂ ರಾಷ್ಟ್ರೀಯ ದಾಖಲೆಯನ್ನು (20.40 ಸೆಕೆಂಡು) ತಮ್ಮದಾಗಿಸಿಕೊಂಡರು.

ಮರಳಿದ ಮೀರಾಬಾಯಿ ಒಂದು ವರ್ಷದ ನಂತರ ಸ್ಪರ್ಧಾಕಣಕ್ಕೆ ಮರಳಿದ ಮೀರಾಬಾಯಿ ಚಾನು ಅವರು ಅಹಮದಾಬಾದ್‌ನಲ್ಲಿ ಆಗಸ್ಟ್‌ನಲ್ಲಿ ನಡೆದ ಕಾಮನ್‌ವೆಲ್ತ್ ವೇಟ್‌ ಲಿಫ್ಟಿಂಗ್‌ನಲ್ಲಿ ಚಿನ್ನದ ಪದಕ ಜಯಿಸಿದರು. ಅವರು ವಿಶ್ವ ವೇಟ್‌ಲಿಫ್ಟಿಂಗ್‌ ಚಾಂಪಿಯನ್‌ಷಿಪ್‌ನ ಮಹಿಳೆಯರ 48 ಕೆ.ಜಿ. ವಿಭಾಗದಲ್ಲಿ ಬೆಳ್ಳಿ ಪದಕ ಗೆದ್ದುಕೊಂಡರು.

ADVERTISEMENT

ಕೊಕ್ಕೊ– ಭಾರತದ್ದೇ ಮೇಲುಗೈ: ಭಾರತ ಪುರುಷರ ಮತ್ತು ಮಹಿಳಾ ತಂಡಗಳು ದೆಹಲಿಯಲ್ಲಿ ನಡೆದ ಚೊಚ್ಚಲ ಕೊಕ್ಕೊ ವಿಶ್ವಕಪ್‌ ಟೂರ್ನಿಯಲ್ಲಿ ಚಾಂಪಿಯನ್‌ ಆಗಿ ಪಾರಮ್ಯ ಮೆರದವು.

ಕಬಡ್ಡಿ ವಿಶ್ವಕಪ್‌ ಉಳಿಸಿಕೊಂಡ ವನಿತೆಯರು: ಭಾರತ ವನಿತೆಯರ ಕಬಡ್ಡಿ ತಂಡವು ನವೆಂಬರ್‌ನಲ್ಲಿ ತೈವಾನ್‌ ತಂಡವನ್ನು ಮಣಿಸಿ ಸತತ ಎರಡನೇ ಬಾರಿಗೆ ವಿಶ್ವಕಪ್ ಕಿರೀಟವನ್ನು ಮುಡಿಗೇರಿಸಿಕೊಂಡಿತು. ಭಾರತ ತಂಡದಲ್ಲಿ ಕರ್ನಾಟಕದ ಧನಲಕ್ಷ್ಮಿ‌ ಪೂಜಾರಿ ಇದ್ದರು.

ಶೀತಲ್ ದೇವಿ ಹೆಗ್ಗಳಿಕೆ: ವಿಶ್ವ ಆರ್ಚರಿ ಚಾಂಪಿಯನ್‌ಷಿಪ್‌ನಲ್ಲಿ ಕೈಗಳ ಸಹಾಯವಿಲ್ಲದೇ ಚಿನ್ನ ಗೆದ್ದ ವಿಶ್ವದ ಮೊದಲ ಮಹಿಳಾ ಸ್ಪರ್ಧಿ ಎಂಬ ಹೆಗ್ಗಳಿಕೆಗೆ ಭಾರತದ ಶೀತಲ್ ದೇವಿ ಪಾತ್ರರಾದರು. ಅವರು ದಕ್ಷಿಣ ಕೊರಿಯಾದ ಗ್ವಾಂಗ್‌ಜುನಲ್ಲಿ ಸೆಪ್ಟೆಂಬರ್‌ನಲ್ಲಿ ನಡೆದ ವಿಶ್ವ ಪ್ಯಾರಾ ಆರ್ಚರಿ ಚಾಂಪಿಯನ್‌ಷಿಪ್‌ನಲ್ಲಿ ಈ ಸಾಧನೆ ಮಾಡಿದರು.

ಕಾಮನ್‌ವೆಲ್ತ್‌ಗೆ ಅಹಮದಾಬಾದ್‌ ಆತಿಥ್ಯ: 2030ರ ಕಾಮನ್‌ವೆಲ್ತ್ ಕ್ರೀಡಾಕೂಟ ಆತಿಥ್ಯದ ಅವಕಾಶ ಭಾರತಕ್ಕೆ ಲಭಿಸಿದೆ. ಕೂಟವು ಅಹಮದಾಬಾದ್‌ನಲ್ಲಿ ನಡೆಯಲಿದೆ.

ನೂತನ ಕ್ರೀಡಾ ನೀತಿ: ಭಾರತ ಸರ್ಕಾರವು ಬಹುನಿರೀಕ್ಷಿತ ನೂತನ ಕ್ರೀಡಾ ಕಾಯಿದೆ ಜಾರಿಗೆ ಸಿದ್ಧಗೊಂಡಿದೆ. ಇದರಿಂದಾಗಿ ಕ್ರೀಡಾ ಫೆಡರೇಷನ್‌ಗಳ ಕಾರ್ಯನಿರ್ವಹಣೆಯ ವೈಖರಿ ಬದಲಾಗುವ ನಿರೀಕ್ಷೆ ಮೂಡಿದೆ. ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯೂ ಸೇರಿದಂತೆ ಬಹುತೇಕ ಎಲ್ಲ ಫೆಡರೇಷನ್‌ಗಳು ಈ ಕಾಯಿದೆಗೆ ಒಳಪಡಲಿವೆ.

ನೀರಜ್ ಚೋಪ್ರಾ
ಅನಿಮೇಶ್ ಕುಜೂರ್
ಮೀರಾಬಾಯಿ ಚಾನು
ವಿಶ್ವ ಚಾಂಪಿಯನ್‌ ಭಾರತ ಸ್ಕ್ವಾಷ್‌ ತಂಡ
ಶೀತಲ್‌ ದೇವಿ
ಸಚಿನ್ ಯಾದವ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.