ಪ್ರಾತಿನಿಧಿಕ ಚಿತ್ರ
ನವದೆಹಲಿ: ಅಲ್ಬೇನಿಯಾದಲ್ಲಿ ನಡೆಯಲಿರುವ ದ್ವಿತೀಯ ಶ್ರೇಣಿಯ ಕುಸ್ತಿ ಪಂದ್ಯಾವಳಿಗೆ ಭಾರತದ ತಂಡ ಭಾಗವಹಿಸುವ ವಿಷಯದಲ್ಲಿ ಭಾರತೀಯ ಕುಸ್ತಿ ಒಕ್ಕೂಟವು (WFI) ಕಾಲಮಿತಿಯೊಳಗೆ ಪ್ರಸ್ತಾವ ಸಲ್ಲಿಸಲು ವಿಫಲವಾಗಿದೆ ಎಂದು ಅನುಮತಿ ನೀಡಲು ಕ್ರೀಡಾ ಸಚಿವಾಲಯ ನಿರಾಕರಿಸಿದೆ.
ಸಚಿವಾಲಯ ಹಾಗೂ ಡಬ್ಲೂಎಫ್‌ಐ ನಡುವಿನ ಮುಸುಕಿನ ಗುದ್ದಾಟ ಮುಂದುವರಿದಿದ್ದು, ಇದರಿಂದ ಝಗ್ರೇಬ್, ಕ್ರೊಯೇಷಿಯಾದಲ್ಲಿ ನಡೆದ ಪ್ರಥಮ ಶ್ರೇಣಿ ಸರಣಿಯ ಪಂದ್ಯಗಳನ್ನು ಕುಸ್ತಿಪಟುಗಳು ತಪ್ಪಿಸಿಕೊಂಡಿದ್ದಾರೆ. ಇದೀಗ ದ್ವಿತೀಯ ಶ್ರೇಣಿಯ ಟಿರಾನಾ ಕ್ರೀಡಾಕೂಟವು ಫೆ. 26ರಿಂದ ಮಾರ್ಚ್ 2ರವರೆಗೆ ಆಯೋಜನೆಗೊಂಡಿದೆ.
ಭಾರತೀಯ ಕುಸ್ತಿ ಫೆಡರೇಷನ್ ಅನ್ನು ಕ್ರೀಡಾ ಸಚಿವಾಲಯವು 2023ರ ಡಿಸೆಂಬರ್‌ನಲ್ಲಿ ಅಮಾನತಿನಲ್ಲಿರಿಸಿದೆ. ಆದರೂ ಅಂತರರಾಷ್ಟ್ರೀಯ ವೇದಿಕೆಯಲ್ಲಿ ಫೆಡರೇಷನ್‌ಗೆ ಈಗಲೂ ಮಾನ್ಯತೆ ಇದೆ. ಆದರೆ ಜ. 30ರಂದು ಈ ಟೂರ್ನಿಯ ಕುರಿತು ಭಾರತೀಯ ಕ್ರೀಡಾ ಪ್ರಾಧಿಕಾರಕ್ಕೆ ಫೆಡರೇಷನ್ ಪ್ರಸ್ತಾವ ಕಳುಹಿಸಿತ್ತು. ಕೇವಲ ಒಂದು ತಿಂಗಳು ಇರುವಾಗ ಪ್ರಸ್ತಾವ ಕಳುಹಿಸಲಾಗಿದ್ದು, ಇದಕ್ಕೆ ಅನುಮತಿ ನೀಡಲು ಸಾಧ್ಯವಿಲ್ಲ ಎಂದು ಸಚಿವಾಲಯ ಹೇಳಿದೆ.
ಆದರೆ ಸಚಿವಾಲಯದ ಆರೋಪವನ್ನು ನಿರಾಕರಿಸಿರುವ ಫೆಡರೇಷನ್, ಬಹಳಾ ಮೊದಲೇ ಪ್ರಸ್ತಾವ ಸಲ್ಲಿಸಲಾಗಿತ್ತು ಎಂದಿದೆ. ‘ಜ. 30ರಂದು ನಾವು ಪ್ರಸ್ತಾವ ಸಲ್ಲಿಸಿದ್ದೆವು. ಸಭೆಯ ನಡಾವಳಿ ಸಲ್ಲಿಸುವಂತೆ ಪ್ರಾಧಿಕಾರ ಕೇಳಿತ್ತು. ನಂತರ ಅವರಿಂದ ಯಾವ ಪ್ರತಿಕ್ರಿಯೆಯೂ ಬಂದಿಲ್ಲ. ಆದರೆ, ಈ ಹಿಂದೆ ಪಂದ್ಯಾವಳಿ ಆರಂಭಕ್ಕೂ ಒಂದು ವಾರ ಮೊದಲು ಕಳುಹಿಸಿದ ಪ್ರಸ್ತಾವಗಳನ್ನು ಕೊನೆ ಗಳಿಗೆಯಲ್ಲಿ ಅನುಮತಿಸಿದ ಉದಾಹರಣೆಗಳು ಇವೆ’ ಎಂದು ಫೆಡರೇಷನ್ ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.