ADVERTISEMENT

ಒಲಿಂಪಿಕ್ಸ್ ಅರ್ಹತಾ ಟೂರ್ನಿ: ಟೋಕಿಯೊ ಟಿಕೆಟ್ ತಪ್ಪಿಸಿಕೊಂಡ ಕುಸ್ತಿಪಟುಗಳು

ಒಲಿಂಪಿಕ್ಸ್ ಅರ್ಹತಾ ಟೂರ್ನಿ: ಸೆಮಿಯಲ್ಲಿ ಸೋತ ಸುನಿಲ್‌ ಕುಮಾರ್‌

ಪಿಟಿಐ
Published 9 ಏಪ್ರಿಲ್ 2021, 12:19 IST
Last Updated 9 ಏಪ್ರಿಲ್ 2021, 12:19 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಆಲ್ಮಾಟಿ, ಕಜಕಸ್ತಾನ: ಗ್ರೀಕೊ ರೋಮನ್ ವಿಭಾಗದಲ್ಲಿ ಭಾರತದ ಪ್ರಮುಖ ಕುಸ್ತಿಪಟುವಾಗಿರುವ ಸುನಿಲ್ ಕುಮಾರ್ ಅವರು ಟೋಕಿಯೊ ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯುವಲ್ಲಿ ವಿಫಲರಾಗಿದ್ದಾರೆ. ಇಲ್ಲಿ ನಡೆಯುತ್ತಿರುವ ಏಷ್ಯನ್ ಅರ್ಹತಾ ಬೌಟ್‌ನ ಸೆಮಿಫೈನಲ್‌ನಲ್ಲಿ ಸುನಿಲ್ ಸೇರಿದಂತೆ ನಾಲ್ವರು ಸೋಲು ಅನುಭವಿಸಿದರು.

ಈ ಟೂರ್ನಿಯಲ್ಲಿ ಫೈನಲ್ ತಲುಪಿದವರಿಗೆ ಮಾತ್ರ ಟೋಕಿಯೊ ಟಿಕೆಟ್ ಗಳಿಸುವ ಅವಕಾಶವಿತ್ತು. 87 ಕೆಜಿ ವಿಭಾಗದಲ್ಲಿ ಸ್ಪರ್ಧಿಸಿದ್ದ, ಏಷ್ಯನ್ ಚಾಂಪಿಯನ್ ಸುನಿಲ್‌, ಮೊದಲ ಬೌಟ್‌ನಲ್ಲಿ 7–0ಯಿಂದ ಕಿರ್ಗಿಸ್ತಾನದ ಸುಖ್ರೊಬ್‌ ಅಬ್ದುಲ್‌ಖಯೆವ್ ಅವರನ್ನು ಮಣಿಸಿದ್ದರು. ಆದರೆ ನಾಲ್ಕರ ಘಟ್ಟದ ಹಣಾಹಣಿಯಲ್ಲಿ ಕಠಿಣ ಸವಾಲು ಎದುರಿಸಿದ ಅವರು 5–9ರಿಂದ ಆತಿಥೇಯ ದೇಶದ ನೂರ್‌ಸುಲ್ತಾನ್ ತುರ್ಸಿನೊವ್‌ ಎದುರು ಮುಗ್ಗರಿಸಿದರು.

ಗ್ಯಾನೇಂದರ್‌ (60 ಕೆಜಿ), ಆಶು (67 ಕೆಜಿ), ಗುರುಪ್ರೀತ್ (77 ಕೆಜಿ) ಹಾಗೂ ನವೀನ್‌ (130 ಕೆಜಿ) ಕೂಡ ನಾಲ್ಕರ ಘಟ್ಟದ ಹಣಾಹಣಿಗಳಲ್ಲಿ ಪರಾಭವಗೊಂಡರು. ಆದರೆ ಕಂಚಿನ ಪದಕಕ್ಕಾಗಿ ಸೆಣಸಾಟ ನಡೆಸಲಿದ್ದಾರೆ.

ADVERTISEMENT

97 ಕೆಜಿ ವಿಭಾಗದಲ್ಲಿ ಸ್ಪರ್ಧಿಸಿದ್ದ ರವಿ ಕ್ವಾರ್ಟರ್‌ಫೈನಲ್‌ ಹಣಾಹಣಿಯಲ್ಲಿ ಸೋತರು. ಆದರೂ ಕಂಚಿನ ಪದಕಕ್ಕಾಗಿ ನಡೆಯುವ ಪ್ಲೇಆಫ್‌ನಲ್ಲಿ ಕೊರಿಯಾದ ಸೆಯೋಲ್ ಲೀ ಎದುರು ಸ್ಪರ್ಧಿಸಲು ಅವರಿಗೆ ಅವಕಾಶ ಸಿಕ್ಕಿದೆ.

ಮಹಿಳೆಯರ ಸ್ಪರ್ಧೆಗಳು ಶನಿವಾರದಿಂದ ನಡೆಯಲಿದ್ದು, ಭಾನುವಾರ ಪುರುಷರ ಫ್ರೀಸ್ಟೈಲ್ ಬೌಟ್‌ಗಳು ಆರಂಭವಾಗಲಿವೆ.

ಗ್ರೀಕೊ ರೋಮನ್ ವಿಭಾಗದಲ್ಲಿ ಭಾರತದ ಯಾವುದೇ ಕುಸ್ತಿಪಟುಗಳು ಈ ಬಾರಿಯ ಒಲಿಂಪಿಕ್ಸ್‌ಗೆ ಅರ್ಹತೆ ಗಳಿಸಿಲ್ಲ. ಆದರೆ ಫ್ರೀಸ್ಟೈಲ್ ವಿಭಾಗದಲ್ಲಿ ಬಜರಂಗ್ ಪೂನಿಯಾ (65 ಕೆಜಿ), ರವಿ ದಹಿಯಾ (57 ಕೆಜಿ) ಹಾಗೂ ದೀಪಕ್ ಪೂನಿಯಾ (86 ಕೆಜಿ) ವಿಶ್ವ ಚಾಂಪಿಯನ್‌ಷಿಪ್‌ ಮೂಲಕ ಟೋಕಿಯೊ ಕೂಟಕ್ಕೆ ಟಿಕೆಟ್ ಗಿಟ್ಟಿಸಿದ್ದಾರೆ.

ವಿನೇಶಾ ಪೋಗಟ್‌ (53 ಕೆಜಿ) ಟೋಕಿಯೋ ಒಲಿಂಪಿಕ್ಸ್‌ಗೆ ಅರ್ಹತೆ ಗಳಿಸಿದ, ಭಾರತದ ಏಕೈಕ ಮಹಿಳಾ ಕುಸ್ತಿಪಟು ಆಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.