ADVERTISEMENT

ಶೂಟಿಂಗ್‌: ಯೋಗೇಶ್‌ ಸಿಂಗ್‌ಗೆ ಡಬಲ್‌ ಚಿನ್ನ

ಪಿಟಿಐ
Published 16 ಜನವರಿ 2024, 4:26 IST
Last Updated 16 ಜನವರಿ 2024, 4:26 IST
Yogesh Singh
Yogesh Singh   

ಜಕರ್ತಾ: ಭಾರತದ ಶೂಟರ್‌ಗಳು ಏಷ್ಯನ್‌ ಒಲಿಂಪಿಕ್ಸ್‌ ಕ್ವಾಲಿಫೈಯರ್ಸ್‌ನಲ್ಲಿ ಚಿನ್ನದ ಬೇಟೆ ಮುಂದುವರಿಸಿದ್ದಾರೆ. ಯೋಗೇಶ್‌ ಸಿಂಗ್‌ ಅವರು ಸೋಮವಾರ ನಡೆದ ಪುರುಷರ 25 ಮೀಟರ್ ಸೆಂಟರ್ ಫೈರ್ ಪಿಸ್ತೂಲ್ ಸ್ಪರ್ಧೆಯಲ್ಲಿ ವೈಯಕ್ತಿಕ ಹಾಗೂ ತಂಡ ವಿಭಾಗದಲ್ಲಿ ಚಿನ್ನ ಗೆದ್ದಿದ್ದಾರೆ.

ವೈಯಕ್ತಿಕ ವಿಭಾಗದ ಸ್ಪರ್ಧೆಯಲ್ಲಿ 573 ಅಂಕಗಳೊಂದಿಗೆ ಯೋಗೇಶ್‌ ಅಗ್ರಸ್ಥಾನಿಯಾದರೆ, ಒಮನ್‌ನ ಮುಆದ್ ಅಲ್ ಬಲೂಶಿ (570), ಇಂಡೊನೇಷ್ಯಾದ ಅನಂಗ್ ಯುಲಿಯಾಂಟೊ (567) ಕ್ರಮವಾಗಿ ಬೆಳ್ಳಿ ಮತ್ತು ಕಂಚು ಗೆದ್ದರು.

ಭಾರತದ ಇನ್ನಿಬ್ಬರು ಸ್ಪರ್ಧಿಗಳಾದ ಪಂಕಜ್‌ ಯಾದವ್‌ (567) ಮತ್ತು ಅಕ್ಷಯ್‌ ಜೈನ್‌ (564) ಅವರು ಕ್ರಮವಾಗಿ ನಾಲ್ಕನೇ ಮತ್ತು ಆರನೇ ಸ್ಥಾನ ಪಡೆದರು. ಮೂವರನ್ನು ಒಳಗೊಂಡ ತಂಡ ವಿಭಾಗದಲ್ಲೂ ಭಾರತದ ಈ ಆಟಗಾರರು ಒಮನ್‌ ಮತ್ತು ಇಂಡೊನೇಷ್ಯಾ ತಂಡವನ್ನು ಹಿಂದಿಕ್ಕಿ ಚಿನ್ನದ ಸಾಧನೆ ಮಾಡಿದರು.

ADVERTISEMENT

ಪುರುಷರ ಟ್ರ್ಯಾಪ್‌ ವಿಭಾಗದಲ್ಲಿ ಲಕ್ಷಯ್ ಶೆರಾನ್ ಕಂಚಿನ ಪದಕ ಗೆದ್ದರು. ಈ ವಿಭಾಗದಲ್ಲಿ ಇರಾನ್‌ನ ಮೊಹಮ್ಮದ್ ಬೇರನವಂದ್‌ ಚಿನ್ನ ಗೆದ್ದರೆ, ಚೀನಾದ ಯುಹಾವೊ ಗುವೊ ಬೆಳ್ಳಿ ಜಯಿಸಿದರು. ಇವರಿಬ್ಬರು ಪ್ಯಾರಿಸ್‌ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದರೆ, ಲಕ್ಷಯ್‌ ಕೂದಲೆಳೆಯ ಅಂತರದಲ್ಲಿ ತಪ್ಪಿಸಿಕೊಂಡರು.

ಕಾಮನ್‌ವೆಲ್ತ್‌ ಗೇಮ್ಸ್‌ನಲ್ಲಿ ಚಿನ್ನದ ಪದಕ ವಿಜೇತೆ ಶ್ರೇಯಸಿ ಸಿಂಗ್ ಅವರು ಮಹಿಳೆಯರ ಟ್ರ್ಯಾಪ್‌ ವಿಭಾಗದಲ್ಲಿ ಐದನೇ ಸ್ಥಾನ ಪಡೆದರು. ಈ ವಿಭಾಗದಲ್ಲಿ ಚೀನಾ ತೈಪೆಯ ವಾನ್- ಯು ಲಿಯು ಪ್ರಶಸ್ತಿ ಗೆದ್ದರು.

ಶ್ರೇಯಸಿ, ಮನಿಶಾ ಕೀರ್ ಮತ್ತು ಭವ್ಯಾ ತ್ರಿಪಾಠಿ ಅವರನ್ನು ಒಳಗೊಂಡ ತಂಡವು ಮಹಿಳೆಯರ ಟ್ರ್ಯಾಪ್‌ ವಿಭಾಗದಲ್ಲಿ ಬೆಳ್ಳಿಯ ಸಾಧನೆ ಮಾಡಿತು. ಚೀನಾ ಮತ್ತು ಕಜಕಿಸ್ತಾನ ಕ್ರಮವಾಗಿ ಚಿನ್ನ ಮತ್ತು ಕಂಚು ಗೆದ್ದಿತು.

Highlights - null

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.