ADVERTISEMENT

ಅಂತರ್‌ ವಿವಿ ಅಥ್ಲೆಟಿಕ್ಸ್‌: ರೋಚಕ ಟೈಬ್ರೇಕರ್‌, ಫೋಟೊ ಫಿನಿಶ್‌

​ಪ್ರಜಾವಾಣಿ ವಾರ್ತೆ
Published 15 ಜನವರಿ 2026, 18:59 IST
Last Updated 15 ಜನವರಿ 2026, 18:59 IST
ಪೋಲ್‌ವಾಲ್ಟ್‌ನಲ್ಲಿ ದಾಖಲೆ ಬರೆದ ಕುಲದೀಪ್ ಯಾದವ್ ಸಂಭ್ರಮ
ಪೋಲ್‌ವಾಲ್ಟ್‌ನಲ್ಲಿ ದಾಖಲೆ ಬರೆದ ಕುಲದೀಪ್ ಯಾದವ್ ಸಂಭ್ರಮ   

ಮೂಡುಬಿದಿರೆ (ದಕ್ಷಿಣ ಕನ್ನಡ): ನಾಲ್ವರ ದಾಖಲೆಗೆ ಸಾಕ್ಷಿಯಾದ ಅಖಿಲ ಭಾರತ ಅಂತರ ವಿವಿ ಅಥ್ಲೆಟಿಕ್ಸ್‌ನ ಪೋಲ್‌ವಾಲ್ಟ್‌ನಲ್ಲಿ ಗ್ವಾಲಿಯರ್ ಐಟಿಎಂ ವಿವಿಯ ಕುಲದೀಪ್ ಯಾದವ್ ಚಿನ್ನದ ನಗೆ ಬೀರಿದರು.

ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಸಹಯೋಗದಲ್ಲಿ ರಾಜೀವಗಾಂಧಿ ಆರೋಗ್ಯ ವಿಜ್ಞಾನಗಳ ವಿವಿ ಮತ್ತು ಭಾರತೀಯ ವಿವಿಗಳ ಸಂಘ ಇಲ್ಲಿನ ಸ್ವರಾಜ್ಯ ಮೈದಾನದಲ್ಲಿ ಆಯೋಜಿಸಿರುವ ಕೂಟದಲ್ಲಿ ಕುಲದೀಪ್ ಯಾದವ್ 5.10 ಮೀ ಎತ್ತರದ ಸಾಧನೆ ಮಾಡಿದರು. ಮದ್ರಾಸ್ ವಿವಿಯ ಗೌತಮ್ ಅವರ ದಾಖಲೆಯನ್ನು ಕುಲದೀಪ್ ಮುರಿದರು.

ಪೆರಿಯಾರ್‌ ವಿವಿಯ ಕವಿನ್‌ರಾಜ ಮತ್ತು ಗುರುಕಾಶಿ ವಿವಿಯ ರಾಮ್ ರತನ್‌ ಅವರೂ 5.10 ಮೀ ಸಾಧನೆ ಮಾಡಿದರು. ಹೀಗಾಗಿ ಪದಕಗಳನ್ನು ನಿರ್ಣಯಿಸಲು ಟೈ ಬ್ರೇಕರ್ ಮೊರೆ ಹೋಗಲಾಯಿತು. ಬಾರ್‌ 5.10 ಮೀ ಎತ್ತರಕ್ಕೇರಿಸುವ ಮೊದಲು ಕುಲದೀಪ್‌, ಕವಿನ್, ರಾಮ್‌ರತನ್ ಮತ್ತು ಗುರುನಾನಕ್ ದೇವ್‌ ವಿವಿಯ ದೇವ್‌ಕುಮಾರ್ ಮೀನಾ 5.1 ಮೀ ಸಾಧನೆ ಮಾಡಿದ್ದರು. ಕೊನೆಯ ಪ್ರಯತ್ನದ ನಂತರ ಕೂಟ ದಾಖಲೆ ಕುಲದೀಪ್ ಯಾದವ್ ಪಾಲಾದರೆ ಉಳಿದ ಮೂವರು ಗೌತಮ್‌ ದಾಖಲೆಯನ್ನು ಮೀರಿದ ಗೌರವಕ್ಕೆ ಪಾತ್ರರಾದರು.

ADVERTISEMENT

ಮಹಿಳಾ ವಿಭಾಗದಲ್ಲೂ ಟೈಬ್ರೇಕರ್‌

ಮಹಿಳೆಯರ ಪೋಲ್‌ವಾಲ್ಟ್‌ನಲ್ಲಿ ಚಂಡೀಗಢ ವಿವಿಯ ವಂಶಿಕಾ ಗಂಗಸ್‌, ಮದ್ರಾಸ್ ವಿವಿಯ ಕಾರ್ತಿಕಾ ಮತ್ತು ಕ್ಯಾಲಿಕಟ್‌ ವಿವಿಯ ನೇಖಾ ಎಲ್ದೊ 3.70 ಮೀ ಎತ್ತರಕ್ಕೇರಿದ್ದರು. ಟೈ ಬ್ರೇಕರ್‌ನಲ್ಲಿ ವಂಶಿಕಾಗೆ ಚಿನ್ನ, ಕಾರ್ತಿಕಾಗೆ ಬೆಳ್ಳಿ ಮತ್ತು ನೇಖಾಗೆ ಕಂಚಿನ ಪದಕ ಲಭಿಸಿತು.

ಹರ್ಡಲ್ಸ್‌ನಲ್ಲಿ ಮದ್ರಾಸ್ ಎಕ್ಸ್‌ಪ್ರೆಸ್‌

ಪುರುಷರ 110 ಮೀ ಹರ್ಡಲ್ಸ್‌ನಲ್ಲಿ ಮದ್ರಾಸ್‌ ವಿವಿಯ ಅರವಿಂದ್‌ಗೆ 2 ಸೆಮಿಸೆಕೆಂಡುಗಳಲ್ಲಿ ಕೂಟ ದಾಖಲೆ ಕೈತಪ್ಪಿತು. ಮಹಿಳೆಯರ 100 ಮೀ ಹರ್ಡಲ್ಸ್‌ನಲ್ಲಿ ಫೋಟೊ ಫಿನಿಶ್ ಮೂಲಕ ಚಿನ್ನದ ಪದಕ ವಿಜೇತೆಯನ್ನು ನಿರ್ಣಯಿಸಲಾಯಿತು. ಮದ್ರಾಸ್ ವಿವಿಯ ಶ್ರೀರೇಷ್ಮಾ ಮತ್ತು ತಮಿಳುನಾಡಿನ ಅಣ್ಣಾ ವಿವಿಯ ಅಕ್ಷಿತಾ 13.75 ಸೆಕೆಂಡುಗಳಲ್ಲಿ ಗುರಿಮುಟ್ಟಿದ್ದರು. ಫೋಟೊ ಫಿನಿಶ್‌ನಲ್ಲಿ ಅಕ್ಷಿತಾಗೆ (13.741 ಸೆ) ಚಿನ್ನ ಒಲಿಯಿತು. ಶ್ರೀರೇಷ್ಮಾ (13.744) ಬೆಳ್ಳಿಗೆ ಸಮಾಧಾನಪಟ್ಟುಕೊಂಡರು. ಕಂಚಿನ ಪದಕವೂ ಮದ್ರಾಸ್‌ ವಿವಿ ಪಾಲಾಯಿತು.

4ನೇ ದಿನದ ಫಲಿತಾಂಶಗಳು: ಪುರುಷರು: 110 ಮೀ ಹರ್ಡಲ್ಸ್‌: ಅರವಿಂದ ಎ (ಮದ್ರಾಸ್‌)–1.ಕಾಲ:14.10ಸೆ, ಸಾಹುಲ್‌ (ಕ್ಯಾಲಿಕಟ್‌)–2, ಪಾರಿ ಕೆ (ಮದ್ರಾಸ್‌)–3; 1500 ಮೀ ಓಟ: ವಿಕಾಸ್ (ಚಂಡೀಗಢ)–1.ಕಾಲ: 3ನಿ 44.83ಸೆ, ಆಕಾಶ್ ಭಾಟಿ (ಎಂ.ಡಿ ರೋಹ್ಟಕ್‌)–2, ಯೋಗೇಶ್ ಕುಮಾರ್ (ಮದ್ರಾಸ್‌)–3; ಪೋಲ್‌ವಾಲ್ಟ್‌: ಕುಲದೀಪ್ ಯಾದವ್ (ಐಟಿಎಂ ಗ್ವಾಲಿಯರ್‌)–1. ಎತ್ತರ: 5.10 ಮೀ; ಕೂಟ ದಾಖಲೆ (ಹಿಂದಿನ ದಾಖಲೆ: ಮದ್ರಾಸ್‌ ವಿವಿಯ ಗೌತಮ್‌: 5 ಮೀ, 2024), ಕವಿನ್ ರಾಜ (ಪೆರಿಯಾರ್‌)–2, ರಾಮ್‌ ರತನ್‌ (ಗುರು ಕಾಶಿ)–3; ಜಾವೆಲಿನ್‌ ಥ್ರೋ: ಆದಿತ್ಯ (ಎಸ್‌ಆರ್‌ಎಂ)–1. ದೂರ: 74.43 ಮೀ, ಮೋಹಿತ್‌ (ಎಂ.ಡಿ ರೋಹ್ಟಕ್‌)–2, ಮೊಹಮ್ಮದ್ ಜುನೈದ್‌ (ಮದ್ರಾಸ್‌)–3.
ಮಹಿಳೆಯರು: 100ಮೀ ಹರ್ಡಲ್ಸ್‌: ಅಕ್ಷಿತಾ (ಅಣ್ಣಾ)–1. ಕಾಲ:13.75ಸೆ, ಶ್ರೀರೇಷ್ಮಾ (ಮದ್ರಾಸ್‌)–2, ಯಾ‌ಮಿನಿ (ಮದ್ರಾಸ್‌)–3; 1500 ಮೀ ಓಟ: ಅನಿಷಾ ಪಟೇಲ್ (ಡಾ.ರಾಮಮನೋಹರ ಲೋಹಿಯಾ)–1. ಕಾಲ: 4ನಿ 22.80ಸೆ, ಮಿಲಾಲಿ ದೀಪಕ್ (ನಾಗಪುರ)–2, ಅಂಜು (ವಿಜಯವಾಡ)–3; ಲಾಂಗ್‌ಜಂಪ್‌: ಮುಬಾಸಿನ ಮೊಹಮ್ಮದ್‌ (ಎಸ್‌ಆರ್‌ಎಂ)–1. ಅಂತರ: 6.15ಮೀ, ಶ್ರೇದೇವಿಕಾ (ಮಂಗಳೂರು)–2, ಪಮಿಳಾ ವರ್ಷಿಣಿ (ಮದ್ರಾಸ್‌)–3; ಪೋಲ್‌ವಾಲ್ಟ್‌: ವಂಶಿಕಾ ಗಂಗಸ್‌ (ಚಂಡೀಗಢ)–1. ಎತ್ತರ: 3.70ಮೀ, ಕಾರ್ತಿಕಾ (ಮದ್ರಾಸ್‌)–2, ನೇಖಾ ಎಲ್ದೊ (ಕ್ಯಾಲಿಕಟ್‌)–3; ಹೆಪ್ಟಾಥ್ಲಾನ್‌: ಅನಾಮಿಕ (ಎಸ್‌ಆರ್‌ಎಂ)–1. ಪಾಯಿಂಟ್ಸ್‌: 5158, ಕೀರ್ತಿ ಈಶ್ವರ್‌ಲಾಲ್‌ (ಲವ್ಲಿ ಪ್ರೊಫೆಷನಲ್‌)–2, ಇಶಾ ನೇಗಿ (ಕಳಿಂಗ)–3.

ಮದ್ರಾಸ್ ವಿವಿ ಅಗ್ರಸ್ಥಾನದಲ್ಲಿ

ಕೊನೆಯ ದಿನವಾದ ಶುಕ್ರವಾರ 13 ಫೈನಲ್‌ಗಳು ಉಳಿದಿರುವಂತೆ ಚಾಂಪಿಯನ್‌ಷಿಪ್‌ನಲ್ಲಿ ಮದ್ರಾಸ್ ವಿವಿ 102 ಪಾಯಿಂಟ್‌ಗಳೊಂದಿಗೆ ಅಗ್ರಸ್ಥಾನದಲ್ಲಿದೆ. ಮಂಗಳೂರು ವಿವಿ (79) ಎರಡನೇ ಸ್ಥಾನದಲ್ಲಿದ್ದು ಚಂಡೀಗಢ (66) ಕ್ಯಾಲಿಕಟ್‌ (41) ಮತ್ತು ರೋಹ್ಟಕ್‌ನ ಎಂಡಿ ವಿವಿ (34) ಕ್ರಮವಾಗಿ 3 4 ಮತ್ತು 5ನೇ ಸ್ಥಾನದಲ್ಲಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.