ADVERTISEMENT

ಭಾರತ ಒಲಿಂಪಿಕ್‌ ಸಂಸ್ಥೆಗೆ ಅನುದಾನ: ಐಒಸಿ ನಿರ್ಧಾರ

ಪಿಟಿಐ
Published 3 ಸೆಪ್ಟೆಂಬರ್ 2025, 14:34 IST
Last Updated 3 ಸೆಪ್ಟೆಂಬರ್ 2025, 14:34 IST
   

ನವದೆಹಲಿ: ‘ಒಲಿಂಪಿಕ್‌ ಐಕಮತ್ಯ ಕಾರ್ಯಕ್ರಮ’ದಡಿ ಭಾರತ ಒಲಿಂಪಿಕ್‌ ಸಂಸ್ಥೆಗೆ ನೆರವು ನೀಡುವುದನ್ನು ಪುನರಾರಂಭಿಸಲು ಅಂತರರಾಷ್ಟ್ರೀಯ ಒಲಿಂಪಿಕ್‌ ಸಮಿತಿ (ಐಒಸಿ) ನಿರ್ಧರಿಸಿದೆ.

ಭಾರತ ಒಲಿಂಪಿಕ್‌ ಸಂಸ್ಥೆಯು ತನ್ನ ಒಳಜಗಳ ಮತ್ತು ಆಡಳಿತಾತ್ಮಕ ಸಮಸ್ಯೆಗಳನ್ನು ಇತ್ಯರ್ಥಪಡಿಸಲು ಕ್ರಮಗಳನ್ನು ಕೈಗೊಂಡ ಕಾರಣ ಸುಮಾರು ಒಂದು ವರ್ಷದ ನಂತರ ನೆರವು ನೀಡುವುದನ್ನು ಮುಂದುವರಿಸಲು ಐಒಸಿ ತೀರ್ಮಾನಿಸಿದೆ.

ಐಒಎ ಸಿಇಒ ರಘುರಾಮ ಅಯ್ಯರ್‌ ಅವರಿಗೆ ನಿಗದಿಪಡಿಸಿದ ಭಾರಿ ವೇತನ ವಿರೋಧಿಸಿ ಅವರ ನೇಮಕಕ್ಕೆ ಒಪ್ಪಿಗೆ ನೀಡಲು 12 ಮಂದಿ ಕಾರ್ಯಕಾರಿ ಸಮಿತಿ ಸದಸ್ಯರು ನಿರಾಕರಿಸಿದ್ದರು. ಹೀಗಾಗಿ ಸಂಸ್ಥೆಯಲ್ಲಿ ಬಿಕ್ಕಟ್ಟು ತಲೆದೋರಿತ್ತು. ಇದರಿಂದಾಗಿ ಐಒಸಿಯು ಅಥ್ಲೀಟುಗಳ ಅಭಿವೃದ್ಧಿ ಯೋಜನೆಗೆ ನೀಡಲಾಗುವ ವಾರ್ಷಿಕ ₹15 ಕೋಟಿ ಅನುದಾನವನ್ನು ಕಳೆದ ವರ್ಷ ಸ್ಥಗಿತಗೊಳಿಸಿತ್ತು.

ADVERTISEMENT

ಆದರೆ ಜುಲೈ 24ರಂದು ಕ್ರೀಡಾ ಸಚಿವ ಮನ್ಸುಖ್ ಮಾಂಡವೀಯ ಅವರು ಐಒಎ ಅಧ್ಯಕ್ಷೆ ಪಿ.ಟಿ.ಉಷಾ ಮತ್ತು ಅವರ ವಿರುದ್ಧ ಬಂಡೆದ್ದ ಕಾರ್ಯಕಾರಿ ಸಮಿತಿ ಸದಸ್ಯರ ನಡುವೆ ಸಭೆ ನಡೆಸಿ ರಾಜಿಸಂಧಾನ ನಡೆಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.