ಟೋಕಿಯೊ: ಒಲಿಂಪಿಯನ್ ಪಿ.ವಿ. ಸಿಂಧು ಜಪಾನ್ ಓಪನ್ ಬ್ಯಾಡ್ಮಿಂಟನ್ ಟೂರ್ನಿಯ ಮಹಿಳೆಯರ ಸಿಂಗಲ್ಸ್‌ನ ಮೊದಲ ಸುತ್ತಿನಲ್ಲಿಯೇ ನಿರ್ಗಮಿಸಿದರು. ಪುರುಷರ ಸಿಂಗಲ್ಸ್‌ನಲ್ಲಿ ಲಕ್ಷ್ಯ ಸೇನ್, ಡಬಲ್ಸ್‌ನಲ್ಲಿ ಸಾತ್ವಿಕ್ ಸಾಯಿರಾಜ್ ರಣಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಅವರು ಎರಡನೇ ಸುತ್ತು ಪ್ರವೇಶಿಸಿದರು.
ಎರಡು ಒಲಿಂಪಿಕ್ಸ್‌ಗಳಲ್ಲಿ ಪದಕ ಜಯಿಸಿರುವ ಸಿಂಧು ಅವರು ಇಲ್ಲಿ ನಡೆದ ಮೊದಲ ಸುತ್ತಿನಲ್ಲಿ 15–21, 14–21 ರಿಂದ ಕೊರಿಯಾದ ಸಿಮ್ ಯೂ ಜಿನ್ ವಿರುದ್ಧ ಸೋತರು. ಈ ವರ್ಷ ಅವರು ಮೊದಲ ಸುತ್ತಲ್ಲಿ ನಿರ್ಗಮಿಸುತ್ತಿರುವ ಐದನೇ ಟೂರ್ನಿ ಇದಾಗಿದೆ.
ಸೂಪರ್ 750 ಟೂರ್ನಿ ಇದಾಗಿದ್ದು ಪುರುಷರ ಸಿಂಗಲ್ಸ್ ನಲ್ಲಿ ಲಕ್ಷ್ಯ ಸೇನ್ ಅವರು 21-11, 21-18ರಿಂದ ನೇರ ಗೇಮ್‌ಗಳಲ್ಲಿ ಚೀನಾದ ವಾಂಗ್ ಝೆಂಗ್ ಶಿಂಗ್ ವಿರುದ್ಧ ಗೆದ್ದರು. ವಿಶ್ವ ರ‍್ಯಾಂಕಿಂಗ್‌ನಲ್ಲಿ 18ನೇ ಸ್ಥಾನದಲ್ಲಿರುವ ಲಕ್ಷ್ಯ ಅವರು ಮೊದಲ ಗೇಮ್‌ನಲ್ಲಿ 11–2ರ ಮುನ್ನಡೆ ಸಾಧಿಸುವ ಮೂಲಕ ಹಿಡಿತ ಸಾಧಿಸಿದ್ದರು. ಆದರೆ ಎರಡನೇ ಗೇಮ್‌ನಲ್ಲಿ ಚೀನಾದ ಆಟಗಾರ ಒತ್ತಡ ಹೆಚ್ಚಿಸಿದರು. ಆಕರ್ಷಕವಾದ ಸ್ಮ್ಯಾಷ್‌ಗಳನ್ನು ಹೊಡೆಯುವ ಮೂಲಕ ಲಕ್ಷ್ಯ ಅವರಿಗೆ ಸವಾಲೊಡ್ಡಿದರು.
ಆದರೆ ಇದರಿಂದ ಎದೆಗುಂದದ ಒಲಿಂಪಿಯನ್ ಲಕ್ಷ್ಯ ತಿರುಗೇಟು ನೀಡಿದರು. 16ರ ಸುತ್ತಿನಲ್ಲಿ ಲಕ್ಷ್ಯ ಅವರು ಏಳನೇ ಶ್ರೇಯಾಂಕದ ಕೊಡೈ ನರೋಕಾ ವಿರುದ್ಧ ಕಣಕ್ಕಿಳಿಯುವರು.
ಪುರುಷರ ಡಬಲ್ಸ್‌ನಲ್ಲಿ ಸಾತ್ವಿಕ್ ಮತ್ತು ಚಿರಾಗ್ ಜೋಡಿಯು 21-18, 21-10 ರಿಂದ ಕೊರಿಯಾದ ಕಾಂಗ್ ಮಿನ್ ಯೂಕ್ ಮತ್ತು ಕಿಮ್ ಡಾಂಗ್ ಜು ಜೋಡಿಯನ್ನು ಮಣಿಸಿತು. 42 ನಿಮಿಷಗಳ ಹೋರಾಟದಲ್ಲಿ ಭಾರತದ ಜೋಡಿಯು ಮೊದಲ ಗೇಮ್‌ನಲ್ಲಿ ತುಸು ಪ್ರತಿರೋಧ ಎದುರಿಸಿತು. ಆದರೆ ಎರಡನೇ ಗೇಮ್‌ನಲ್ಲಿ ಪಾರಮ್ಯ ಮೆರೆಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.