ADVERTISEMENT

ಜಾವೆಲಿನ್‌ ಥ್ರೊ ಕೂಟ: ಬೆಂಗಳೂರಿನಲ್ಲಿ ಕಣಕ್ಕಿಳಿಯಲು ನೀರಜ್ ಉತ್ಸುಕ

ಕೆಒಎ ವತಿಯಿಂದ ಜಾವೆಲಿನ್ ತಾರೆಗೆ ಗೌರವ

​ಪ್ರಜಾವಾಣಿ ವಾರ್ತೆ
Published 4 ಜುಲೈ 2025, 1:04 IST
Last Updated 4 ಜುಲೈ 2025, 1:04 IST
ಜಾವೆಲಿನ್‌ ತಾರೆ ನೀರಜ್‌ ಚೋಪ್ರಾ ಅವರು ಬೆಂಗಳೂರಿನ ಕೆಒಎ ಭವನದ ಹಾಲ್‌ ಆಫ್‌ ಫೇಮ್‌ನಲ್ಲಿ ತಮ್ಮ  ಚಿತ್ರವನ್ನು ಅನಾವರಣಗೊಳಿಸಿದರು. ಕೆಒಎ ಅಧ್ಯಕ್ಷ ಕೆ.ಗೋವಿಂದ ರಾಜ್‌, ಮಹಾ ಪ್ರಧಾನ  ಕಾರ್ಯದರ್ಶಿ ಟಿ.ಅನಂತರಾಜು ಅವರೂ ಭಾಗವಹಿಸಿದ್ದರು.
ಜಾವೆಲಿನ್‌ ತಾರೆ ನೀರಜ್‌ ಚೋಪ್ರಾ ಅವರು ಬೆಂಗಳೂರಿನ ಕೆಒಎ ಭವನದ ಹಾಲ್‌ ಆಫ್‌ ಫೇಮ್‌ನಲ್ಲಿ ತಮ್ಮ  ಚಿತ್ರವನ್ನು ಅನಾವರಣಗೊಳಿಸಿದರು. ಕೆಒಎ ಅಧ್ಯಕ್ಷ ಕೆ.ಗೋವಿಂದ ರಾಜ್‌, ಮಹಾ ಪ್ರಧಾನ  ಕಾರ್ಯದರ್ಶಿ ಟಿ.ಅನಂತರಾಜು ಅವರೂ ಭಾಗವಹಿಸಿದ್ದರು.    

ಬೆಂಗಳೂರು: ಎನ್‌ಸಿ ಕ್ಲಾಸಿಕ್‌ ಕೂಟದ ಮೂಲಕ ಮೊದಲ ಬಾರಿ ಉದ್ಯಾನಗರಿಯಲ್ಲಿ ವಿಶ್ವ ಮಟ್ಟದ ಜಾವೆಲಿನ್‌ ಥ್ರೊ ಕೂಟಕ್ಕೆ ಕ್ಷಣಗಣನೆ ನಡೆದಿದೆ. ಜಾವೆಲಿನ್ ತಾರೆ ನೀರಜ್ ಚೋಪ್ರಾ ಸಹ ಬೆಂಗಳೂರಿನಲ್ಲಿ ಮೊದಲ ಬಾರಿ ಸ್ಪರ್ಧಾಕಣದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಆ ಬಗ್ಗೆ  ಖುಷಿಯಾಗಿಯೂ ಇದ್ದಾರೆ.

‘ಮೊದಲ ಬಾರಿ ನಾನು ಬೆಂಗಳೂರಿನಲ್ಲಿ ಸ್ಪರ್ಧಿಸುತ್ತಿದ್ದೇನೆ. ತುಂಬಾ ಖುಷಿಯಾಗುತ್ತಿದೆ. ಅಲ್ಪಾವಧಿಯಲ್ಲೇ ಈ ಕೂಟಕ್ಕೆ ಸರ್ಕಾರ, ಕರ್ನಾಟಕ ಒಲಿಂಪಿಕ್ ಸಂಸ್ಥೆ ಸಹಾಯಹಸ್ತ ಚಾಚಿದೆ. ಬೆಂಬಲಿಸಲು ತುಂಬಾ ಅಭಿಮಾನಿಗಳು ಬರುವ ವಿಶ್ವಾಸವಿದೆ’ ಎಂದು ಒಲಿಂಪಿಕ್ಸ್‌ನಲ್ಲಿ ಎರಡು ಪದಕ ಗೆದ್ದಿರುವ ಚೋಪ್ರಾ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಶನಿವಾರ ಸಂಜೆ 7 ಗಂಟೆಗೆ ಕೂಟ ಆರಂಭವಾಗಲಿದೆ. ಐದು ಮಂದಿ ಭಾರತದ ಸ್ಪರ್ಧಿಗಳು ಸೇರಿ 12 ಮಂದಿ ಕಣಕ್ಕಿಳಿಯುತ್ತಿದ್ದಾರೆ.

ADVERTISEMENT

‘ಈ ಕೂಟಕ್ಕೆ ಅಥ್ಲೀಟುಗಳನ್ನು ಕರೆಸಲಾಗುತ್ತಿದೆ. ಸ್ಥಳೀಯ ಅಥ್ಲೀಟುಗಳೂ ಬರುತ್ತಿದ್ದಾರೆ. ಪೋಷಕರೂ ಮಕ್ಕಳನ್ನು ಕರೆತರಬೇಕು ಎಂಬುದು ನಮ್ಮ ಆಸೆ. ಇದರಿಂದ ಅಥ್ಲೆಟಿಕ್ಸ್‌ ಬೆಳವಣಿಗೆಗೆ ನೆರವಾಗಲಿದೆ’ ಎಂದರು.

‘ಮುಂದಿನ ದಿನಗಳಲ್ಲಿ ಜಾವೆಲಿನ್ ಜೊತೆಗೆ ಇತರ ಕೆಲವು ಸ್ಪರ್ಧೆಗಳನ್ನೂ ನಡೆಸುವ ಯೋಜನೆಯಿದೆ. ಇದರಿಂದ ದೇಶದ ಉದಯೋನ್ಮುಖ ಅಥ್ಲೀಟುಗಳಿಗೆ ಇಲ್ಲಿಯೇ ದೊಡ್ಡ ಮಟ್ಟದ ಕೂಟದಲ್ಲಿ ಭಾಗವಹಿಸುವ ಅವಕಾಶ ದೊರೆಯಲಿದೆ’ ಎಂದರು.

‘ಈ ಹಿಂದೆ ಹಲವು ಬಾರಿ ಇಲ್ಲಿಗೆ ಬಂದಿದ್ದೇನೆ. ಇಲ್ಲಿ ಕ್ರೀಡೆಯ ಬಗ್ಗೆ ಒಲವು ಇದೆ’ ಎಂದರು. ತುಂಬು ತೋಳಿನ ಟೀ ಶರ್ಟ್‌ ಧರಿಸಿದ್ದ ನೀರಜ್ ಅವರು ಕಪ್ಪು ಕ್ಯಾಪನ್ನು ಧರಿಸಿದ್ದರು.

‘ಕ್ರೀಡಾಕೂಟ ಆಯೋಜಿಸುವುದು ಮತ್ತು ಭಾಗವಹಿಸುವುದು ಎರಡೂ ಕಷ್ಟದ ಕೆಲಸ. ಅಭ್ಯಾಸ ನಡೆಸಲು ಸಮಯ ಸಾಲುವುದಿಲ್ಲ. ಸ್ಪರ್ಧೆಯನ್ನು ಹೇಗೆ ಆಯೋಜಿಸಬೇಕು. ಅಥ್ಲೀಟುಗಳ ಜೊತೆ ಮಾತನಾಡಬೇಕಾಗುತ್ತದೆ. ಜೊತೆಜೊತೆಯಲ್ಲೇ ಕಣಕ್ಕೂ ಇಳಿಯಬೇಕಾಗುತ್ತದೆ’ ಎಂದರು.

‘ಈ ವರ್ಷ ಇದೂ ಸೇರಿ ಕೆಲವು ಕೂಟಗಳಲ್ಲಿ ಸ್ಪರ್ಧಿಸಿದ್ದೇನೆ. ಇಲ್ಲೂ ಉತ್ತಮ ಸಾಧನೆ ತೋರಿ ವಿಶ್ವ ಚಾಂಪಿಯನ್‌ಷಿಪ್‌ಗೆ ಸಜ್ಜಾಗುವ ಗುರಿಹೊಂದಿದ್ದೇನೆ’ ಎಂದರು. ವಿಶ್ವ ಅಥ್ಲೆಟಿಕ್ಸ್‌ ಚಾಂಪಿಯನ್‌ಷಿಪ್‌ ಟೋಕಿಯೊದಲ್ಲಿ ಸೆಪ್ಟೆಂಬರ್‌ 13 ರಿಂದ 21ರವರೆಗೆ ನಿಗದಿಯಾಗಿದೆ.

ಕೆಒಎ ಗೌರವ:

ಇದೇ ವೇಳೆ, ಗುರುವಾರ ಸಂಜೆ ಕೆಒಎ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ನೀರಜ್ ಚೋಪ್ರಾ ಅವರಿಗೆ ಕರ್ನಾಟಕ ಒಲಿಂಪಿಕ್ ಸಂಸ್ಥೆ ವತಿಯಿಂದ ಸ್ಮರಣಿಕೆ ಮತ್ತು ₹5 ಲಕ್ಷ ನೀಡಲಾಯಿತು. ಕೆಒಎ ಅಧ್ಯಕ್ಷ ಕೆ.ಗೋವಿಂದ ರಾಜ್, ಪ್ರಧಾನ ಕಾರ್ಯದರ್ಶಿ ನವೀನ್ ರಾಜ್ ಸಿಂಗ್‌, ಕೆಒಎ ಮಹಾ ಪ್ರಧಾನ ಕಾರ್ಯದರ್ಶಿ ಟಿ.ಅನಂತರಾಜು ಅವರು ಈ ಸಂದರ್ಭದಲ್ಲಿ ಹಾಜರಿದ್ದರು.

ಭಾಗವಹಿಸುವ 12 ಮಂದಿ:

ಏಳು ವಿದೇಶಿ ಸ್ಪರ್ಧಿಗಳು: ಥಾಮಸ್‌ ರೋಹ್ಲರ್ (ಜರ್ಮನಿ), ಜೂಲಿಯಸ್‌ ಯೆಗೊ (ಕೆನ್ಯಾ), ಕರ್ಟಿಸ್ ಥಾಮ್ಸನ್‌ (ಅಮೆರಿಕ), ಮಾರ್ಟಿನ್‌ ಕೊನೆಸ್ನಿ (ಝೆಕ್‌ ರಿಪಬ್ಲಿಕ್‌), ಲೂಯಿಸ್‌ ಮೌರಿಸಿಯೊ ಡಿಸಿಲ್ವ (ಬ್ರೆಜಿಲ್‌), ರುಮೇಶ್ ಪತಿರಗೆ (ಶ್ರೀಲಂಕಾ), ಸಿಪ್ರಿಯಾನ್ ಮ್ರಿಜಿಗ್ಲೋಡ್‌.

ಭಾರತದ ಐವರು: ನೀರಜ್‌ ಚೋಪ್ರಾ, ಸಚಿನ್ ಯಾದವ್‌, ರೋಹಿತ್ ಯಾದವ್, ಸಾಹಿಲ್‌ ಸಿಲ್ವಾಲ್‌, ಯಶ್ವೀರ್ ಸಿಂಗ್‌.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.