ADVERTISEMENT

ವಿಶ್ವ ಅಥ್ಲೆಟಿಕ್: ಐತಿಹಾಸಿಕ ಬೆಳ್ಳಿ ಪದಕ ಗೆಲುವಿನ ಬಳಿಕ ನೀರಜ್ ಹೇಳಿದ್ದೇನು?

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 24 ಜುಲೈ 2022, 5:30 IST
Last Updated 24 ಜುಲೈ 2022, 5:30 IST
ನೀರಜ್ ಚೋಪ್ರಾ
ನೀರಜ್ ಚೋಪ್ರಾ   

ಯೂಜೀನ್‌ (ಅಮೆರಿಕ): ವಿಶ್ವ ಅಥ್ಲೆಟಿಕ್ ಚಾಂಪಿಯನ್‌ಷಿಪ್‌ ಜಾವೆಲಿನ್ ಥ್ರೋ ಸ್ಪರ್ಧೆಯಲ್ಲಿ ಐತಿಹಾಸಿಕ ಬೆಳ್ಳಿ ಪದಕ ಗೆದ್ದಿರುವ ನೀರಜ್ ಚೋಪ್ರಾ, ತಮ್ಮ ಪ್ರದರ್ಶನ ತೃಪ್ತಿದಾಯಕವಾಗಿದೆ ಎಂದು ಭಾನುವಾರ ಪ್ರತಿಕ್ರಿಯಿಸಿದ್ದಾರೆ.

ನೀರಜ್ ಚೋಪ್ರಾ ಹೇಳಿಕೆಯನ್ನು ಸುದ್ದಿಸಂಸ್ಥೆ 'ಎಎನ್‌ಐ' ಟ್ವೀಟ್ ಮಾಡಿದೆ.

ಜಾವೆಲಿನ್ ಎಸೆಯಲು ಉತ್ತಮ ಪರಿಸ್ಥಿತಿ ಇರಲಿಲ್ಲ. ಗಾಳಿಯ ವೇಗವೂ ಹೆಚ್ಚಾಗಿದ್ದರೂ ಉತ್ತಮ ಪ್ರದರ್ಶನ ನೀಡುತ್ತೇನೆಂಬ ವಿಶ್ವಾಸವಿತ್ತು. ನನ್ನ ಫಲಿತಾಂಶ ತೃಪ್ತಿದಾಯಕವಾಗಿದ್ದು, ದೇಶಕ್ಕಾಗಿ ಪದಕ ಗೆಲ್ಲಲು ಸಾಧ್ಯವಾಗಿರುವುದು ಸಂತಸ ತಂದಿದೆ ಎಂದು ಹೇಳಿದ್ದಾರೆ.

ಸ್ಪರ್ಧೆ ಕಠಿಣ ಹಾಗೂ ಸವಾಲಿನಿಂದ ಕೂಡಿತ್ತು. ಪ್ರತಿಸ್ಪರ್ಧಿಗಳು ಉತ್ತಮವಾಗಿ ಎಸೆಯುತ್ತಿದ್ದರು. ಇಂದಿನ ಸ್ಪರ್ಧೆಯಿಂದ ನಾನು ಸಾಕಷ್ಟು ವಿಚಾರಗಳನ್ನು ಕಲಿತುಕೊಂಡಿದ್ದೇನೆ. ಚಿನ್ನ ಗೆಲ್ಲಬೇಕೆಂಬ ಹಂಬಲ ಮುಂದುವರಿಯಲಿದೆ. ಪ್ರತಿ ಸಲವೂ ಚಿನ್ನ ಗೆಲ್ಲಲು ಸಾಧ್ಯವಿಲ್ಲ ಎಂಬುದನ್ನು ನಂಬಬೇಕು. ನನ್ನಿಂದ ಸಾಧ್ಯವಾಗುವ ಎಲ್ಲವನ್ನೂ ಮಾಡುತ್ತೇನೆ. ತರಬೇತಿ ಮೇಲೆ ಗಮನ ಕೇಂದ್ರಿಕರಿಸುತ್ತೇನೆ ಎಂದು ಹೇಳಿದ್ದಾರೆ.

ಟೋಕಿಯೊ ಒಲಿಂಪಿಕ್ ಚಾಂಪಿಯನ್ ಎಂಬ ಕಾರಣಕ್ಕೆ ನನ್ನ ಮೇಲೆ ಹೆಚ್ಚಿನ ಒತ್ತಡ ಇರಲಿಲ್ಲ. ಮೂರನೇ ಎಸೆತದ ಬಳಿಕವೂ ನನ್ನ ಮೇಲೆ ನನಗೆ ನಂಬಿಕೆಯಿತ್ತು. ಅಲ್ಲಿಂದ ಪುನರಾಗಮನ ಮಾಡಿ ಬೆಳ್ಳಿ ಪದಕ ಗೆದ್ದಿದ್ದೇನೆ. ಇದರಿಂದ ಉತ್ತಮ ಭಾವನೆ ಉಂಟಾಗಿದ್ದು, ಮುಂದಿನ ಸಲ ಪದಕದ ಬಣ್ಣ ಬದಲಾಯಿಸಲು ಪ್ರಯತ್ನಿಸುತ್ತೇನೆ ಎಂದು ಹೇಳಿದರು.

ಗ್ರೆನಾಡದ ಆ್ಯಂಡರ್ಸನ್‌ ಪೀಟರ್ಸ್‌ 90.54 ಮೀಟರ್‌ ದೂರ ಜಾವೆಲಿನ್ ಎಸೆದು ಚಿನ್ನದ ಪದಕ ಜಯಿಸಿದ್ದರು. ಈ ಸಂದರ್ಭದಲ್ಲಿ ಎದುರಾಳಿಯ ಪ್ರದರ್ಶನದ ಬಗ್ಗೆಯೂ ನೀರಜ್ ಮೆಚ್ಚುಗೆಯ ಮಾತುಗಳನ್ನಾಡಿದರು.

ಇದು ತುಂಬಾ ಸರಳವಾಗಿ ಕಾಣಿಸಿರಬಹುದು. ಆದರೆ 90 ಮೀಟರ್ ದೂರ ಎಸೆಯಲು ಕಠಿಣ ಪ್ರಯತ್ನದ ಅಗತ್ಯವಿದೆ. ಈ ವರ್ಷ ಅವರು ಮುಂಚೂಣಿಯಲ್ಲಿ ಗುರುತಿಸಿಕೊಂಡಿದ್ದಾರೆ. ಅವರು ಕಠಿಣ ಪರಿಶ್ರಮಕ್ಕೆ ತಕ್ಕ ಫಲ ಲಭಿಸಿರುವುದು ನನಗೂ ಖುಷಿ ತಂದಿದೆ. ಇದೊಂದು ಉತ್ತಮ ಸ್ಪರ್ಧೆಯಾಗಿತ್ತು ಎಂದು ಹೇಳಿದ್ದಾರೆ.

ಮುಂಬರುವ ಕಾಮನ್‌ವೆಲ್ತ್ ಗೇಮ್ಸ್‌ನಲ್ಲೂ ಚಿನ್ನ ಗೆಲ್ಲುವ ಪ್ರಯತ್ನ ಮಾಡಲಿದ್ದೇನೆ ಎಂದು ಭರವಸೆ ನೀಡಿದ್ದಾರೆ.

ವಿಶ್ವ ಅಥ್ಲೆಟಿಕ್‌ ಚಾಂಪಿಯನ್‌ಷಿಪ್‌ನಲ್ಲಿ ಪದಕ ಗೆದ್ದ ಭಾರತದ ಎರಡನೇ ಹಾಗೂ ಮೊದಲ ಪುರುಷ ಸ್ಪರ್ಧಿ ಎಂಬ ಹೆಗ್ಗಳಿಕೆಗೆ ನೀರಜ್ ಚೋಪ್ರಾ ಭಾಜನರಾಗಿದ್ದಾರೆ. 2003ರಲ್ಲಿ ಮಹಿಳೆಯರ ಲಾಂಗ್ ಜಂಪ್‌ ಸ್ಪರ್ಧೆಯಲ್ಲಿ ಅಂಜು ಬಾಬಿ ಜಾರ್ಜ್ ಕಂಚಿನ ಪದಕ ಗೆದ್ದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.