ನವದೆಹಲಿ: ಒಲಿಂಪಿಯನ್ ಅಂಕಿತಾ ಧ್ಯಾನಿ ಅವರು ಇಸ್ರೇಲ್‌ನಲ್ಲಿ ನಡೆಯುತ್ತಿರುವ ಗ್ರ್ಯಾನ್‌ಸ್ಲ್ಯಾಮ್ ಜೇರುಸಲೆಂ ಅಥ್ಲೆಟಿಕ್ ಕೂಟದಲ್ಲಿ ಮಹಿಳೆಯರ 2000 ಮೀಟರ್ಸ್ ಸ್ಟೀಪಲ್‌ಚೇಸ್‌ನಲ್ಲಿ ಚಿನ್ನದ ಪದಕ ಗೆದ್ದರು. ಅದರೊಂದಿಗೆ ರಾಷ್ಟ್ರೀಯ ದಾಖಲೆಯನ್ನೂ ನಿರ್ಮಿಸಿದರು.
23 ವರ್ಷದ ಅಂಕಿತಾ ಅವರು 6 ನಿಮಿಷ, 13.92 ಸೆಕೆಂಡುಗಳಲ್ಲಿ ಗುರಿ ಮುಟ್ಟಿದರು. ಈ ಹಿಮದೆ ಪಾರುಲ್ ಚೌಧರಿ ಅವರು ಮಾಡಿದ್ದ ದಾಖಲೆ (6ನಿ,14.38ಸೆ) ದಾಖಲೆಯನ್ನು ಮೀರಿ ನಿಂತರು.
ಈ ಗೆಲುವಿನೊಂದಿಗೆ ಅಂಕಿತಾ ಅವರ ರ‍್ಯಾಂಕಿಂಗ್ ಪಾಯಿಂಟ್ಸ್‌ಗಳಲ್ಲಿ ಹೆಚ್ಚಳವಾಗಿದೆ. ಇದರೊಂದಿಗೆ ಅವರು ಮುಂದಿನ ತಿಂಗಳು ಟೋಕಿಯೊದಲ್ಲಿ ನಡೆಯಲಿರುವ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ 3000 ಮೀ ಸ್ಟೀಪಲ್‌ಚೇಸ್‌ನಲ್ಲಿ ಪಾಲ್ಗೊಳ್ಳಲು ಅರ್ಹತೆ ಪಡೆಯುವ ಸಾಧ್ಯತೆ ಹೆಚ್ಚಿದೆ.
‘ಹೌದು. ನಿಯಮದ ಪ್ರಕಾರ ಇಲ್ಲಿ 2000 ಮೀ ಸ್ಟೀಪಲ್‌ಚೇಸ್‌ನಲ್ಲಿ ಮಾಡಿದ ಸಾಧನೆಯು ವಿಶ್ವ ರ‍್ಯಾಂಕಿಂಗ್‌ಗೆ ಪರಿಗಣಿತವಾಗಲಿದೆ. ಅಲ್ಲದೇ ವಿಶ್ವ ಚಾಂಪಿಯನ್‌ಷಿಪ್ 3000 ಮೀ ಸ್ಟೀಪಲ್‌ಚೇಸ್‌ಗೂ ಅರ್ಹತೆ ಪಡೆಯಲು ಅವಕಾಶವಿದೆ’ ಎಂದು ಭಾರತ ಅಥ್ಲೆಟಿಕ್ಸ್ ತಂಡದ ಮುಖ್ಯಕೋಚ್ ರಾಧಾಕೃಷ್ಣನ್ ನಾಯರ್ ಹೇಳಿದ್ದಾರೆ.
ಗ್ರ್ಯಾನ್‌ಸ್ಲ್ಯಾಮ್ ಜೆರುಸಲೇಂ ಕೂಟವು ವಿಶ್ವ ಅಥ್ಲೆಟಿಕ್ಸ್ ಕಾಂಟಿನೆಂಟರ್ ಟೂರ್ ಸಿಲ್ವರ್ ಲೆವೆಲ್ (ಬಿ ಕೆಟಗರಿ) ಕೂಟವಾಗಿದೆ.
ಇಸ್ರೇಲ್‌ನ ಅದ್ವಾ ಕೊಹೆನ್ ಮತ್ತು ಡೆನ್ಮಾರ್ಕಿನ ಜೂಲಿಯನ್ ಹವಿದ್ ಅವರು ಕ್ರಮವಾಗಿ ದ್ವಿತೀಯ (6ನಿ,15.20ಸೆ) ಮತ್ತು ತೃತೀಯ (6ನಿ, 17.80ಸೆ) ಸ್ಥಾನ ಪಡೆದರು.
ಹೋದ ತಿಂಗಳು ನಡೆದಿದ್ದ ವಿಶ್ವ ಯುನಿವರ್ಸಿಟಿ ಗೇಮ್ಸ್‌ನಲ್ಲಿ ಅಂಕಿತಾ ಅವರು 3000 ಮೀ ಸ್ಟೀಪಲ್‌ಚೇಸ್‌ನಲ್ಲಿ ಬೆಳ್ಳಿ ಪದಕ ಗಳಿಸಿದ್ದರು. ಅಲ್ಲಿ ಅವರು ತಮ್ಮ ವೈಯಕ್ತಿಕ ಶ್ರೇಷ್ಠ ಸಮಯ (9ನಿ,31.99ಸೆ) ದಾಖಲಿಸಿದ್ದರು.
2024ರ ಪ್ಯಾರಿಸ್ ಒಲಿಂಪಿಕ್ ಕೂಟದಲ್ಲಿ ಅವರು ಮಹಿಳೆಯರ 5000 ಮೀ ಓಟದಲ್ಲಿ ಸ್ಪರ್ಧಿಸಿದ್ದರು. 2023ರಲ್ಲಿ ಬ್ಯಾಂಕಾಕ್‌ನಲ್ಲಿ ನಡೆದಿದ್ದ ಏಷ್ಯನ್ ಅಥ್ಲೆಟಿಕ್ಸ್‌ನಲ್ಲಿ ಅವರು 5000 ಮೀ ಓಟದಲ್ಲಿ ಕಂಚು ಪಡೆದಿದ್ದರು. ಅಲ್ಲದೇ ಅವರು ಇದೇ ವರ್ಷ ಉತ್ತರಾಖಂಡದಲ್ಲಿ ನಡೆದಿದ್ದ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಮಹಿಳೆಯರ 3000 ಮೀ ಮತ್ತು 5000 ಮೀ ಓಟಗಳಲ್ಲಿ ಚಿನ್ನದ ಪದಕಗಳನ್ನು ಜಯಿಸಿದ್ದರು .
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.