ಅಡ್ರಿಯಾನ್ ಕರ್ಮಾಕರ್
ಝೂಲ್ (ಜರ್ಮನಿ): ಭಾರತದ ಅಡ್ರಿಯಾನ್ ಕರ್ಮಾಕರ್ ಅವರು ಐಎಸ್‌ಎಸ್‌ಎಫ್ ಜೂನಿಯರ್ ವಿಶ್ವ ಕಪ್ ಶೂಟಿಂಗ್ ಕೂಟದಲ್ಲಿ ಮಂಗಳವಾರ 50 ಮೀ. ರೈಫಲ್ ಪ್ರೋನ್ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಗೆದ್ದುಕೊಂಡರು. ಆ ಮೂಲಕ ಭಾರತ ಈ ಕೂಟದಲ್ಲಿ ಸಕಾರಾತ್ಮಕ ಆರಂಭ ಪಡೆಯಿತು.
ರೈಫಲ್ 3ಪೊಷಿಷನ್ ಸ್ಪರ್ಧೆಯಲ್ಲಿ ರಾಷ್ಟ್ರೀಯ ಜೂನಿಯರ್ ಚಾಂಪಿಯನ್ ಆಗಿರುವ ಅಡ್ರಿಯಾನ್ ಇದು ಚೊಚ್ಚಲ ವಿಶ್ವಕಪ್ ಕೂಟ. 20 ವರ್ಷ ವಯಸ್ಸಿನ ಅವರು ಇಲ್ಲಿ 60 ಗುರಿಗಳ ನಂತರ 626.7 ಅಂಕ ಕಲೆಹಾಕಿದರು. ಕೇವಲ 0.3 ಪಾಯಿಂಟ್‌ಗಳಿಂದ ಅವರಿಗೆ ಚಿನ್ನ ಕೈತಪ್ಪಿತು. ಸ್ವೀಡನ್ ಜೆಸ್ಪರ್ ಯೊಹಾನ್ಸನ್ ಚಿನ್ನ ಗೆದ್ದರು. ಅಮೆರಿಕದ ಗ್ರಿಫಿನ್ ಲೇಕ್ (624.6) ಕಂಚಿನ ಪದಕ ಪಡೆದರು.
ಈ ಹಿಂದೆ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಭಾರತ ಜೂನಿಯರ್ ತಂಡ ಪ್ರತಿನಿಧಿಸಿದ್ದ ಅಡ್ರಿಯಾನ್, ವಿಶ್ವಕಪ್‌ನಲ್ಲಿ ಎಂದೂ ಪಾಲ್ಗೊಂಡಿರಲಿಲ್ಲ. ಆದರೆ ಇಲ್ಲಿ ಇತರ ಸ್ಪರ್ಧಿಗಳೆದುರು ವಿಶ್ವಾಸದಿಂದಲೇ ಕಣಕ್ಕಿಳಿದರು. ಇಲ್ಲಿ ಅವರ ಸಾಧನೆ ಜೂನಿಯರ್ ರಾಷ್ಟ್ರೀಯ ದಾಖಲೆ ಎನಿಸಿತು.
ಕಣದಲ್ಲಿದ್ದ ಭಾರತದ ಇತರ ಸ್ಪರ್ಧಿಗಳ ಪೈಕಿ, 15 ವರ್ಷ ವಯಸ್ಸಿನ ರೋಹಿತ್ ಕನ್ಯಾನ ಅವರು 620.2 ಸ್ಕೋರ್‌ನೊಡನೆ 12ನೇ ಸ್ಥಾನ ಗಳಿಸಿದರು. ವೇದಾಂತ ನಿತಿನ್ ವಾಗ್ಮೋರೆ (614.4) 35ನೇ ಸ್ಥಾನ ಪಡೆದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.