ADVERTISEMENT

ಕಲಬುರಗಿ: ಜೂಡೊ ಹುಡುಗನ ಸಾಧನೆಯ ಜಪ

​ಪ್ರಜಾವಾಣಿ ವಾರ್ತೆ
Published 13 ನವೆಂಬರ್ 2025, 7:25 IST
Last Updated 13 ನವೆಂಬರ್ 2025, 7:25 IST
<div class="paragraphs"><p>ಪದಕದೊಂದಿಗೆ ಹ್ಯಾಪಿರಾಜ್</p></div>

ಪದಕದೊಂದಿಗೆ ಹ್ಯಾಪಿರಾಜ್

   

ಕಲಬುರಗಿ: ಬಡತನದ ನಡುವೆಯೂ ಸಾಧನೆಯ ಕನಸು ಹೊತ್ತ ಹುಡುಗ ಹ್ಯಾಪಿರಾಜ್‌. ನಗರದ ತಾರಫೈಲ್‌ ಬಡಾವಣೆಯ 16 ವರ್ಷದ ಈ ಜೂಡೊ ಆಟಗಾರ ರಾಷ್ಟ್ರಮಟ್ಟದಲ್ಲಿ ಮಿಂಚುವ ಭರವಸೆ ಮೂಡಿಸಿದ್ದಾರೆ

ಈಚೆಗೆ ಬೆಳಗಾವಿಯಲ್ಲಿ ನಡೆದ ಶಾಲಾಮಟ್ಟದ ರಾಜ್ಯ ಜೂಡೊ ಚಾಂಪಿಯನ್‌ಷಿಪ್‌ 17 ವರ್ಷದೊಳಗಿನವರ ಕೆಡೆಟ್‌ ವಿಭಾಗದಲ್ಲಿ ಚಿನ್ನದ ಪದಕ ಕೊರಳಿಗೇರಿಸಿಕೊಂಡಿರುವ ಹ್ಯಾಪಿರಾಜ್‌, ಮಣಿಪುರದಲ್ಲಿ ನವೆಂಬರ್‌ 22ರಿಂದ ನಡೆಯಲಿರುವ ರಾಷ್ಟ್ರಮಟ್ಟದ ಟೂರ್ನಿಗೆ ಸ್ಥಾನ ಗಳಿಸಿದ್ದಾರೆ.

ADVERTISEMENT

ತಂದೆ ಸಿದ್ದರಾಜು ಟೈಲ್ಸ್ ವರ್ಕ್ಸ್, ಪ್ಲಂಬರ್ ಕೆಲಸ ಮಾಡುತ್ತಾರೆ. ಆಶಾ ಕಾರ್ಯಕರ್ತೆ ಆಗಿರುವ ತಾಯಿ ಉಷಾ ಅವರು ಸಂಜೆ ವೇಳೆ ಹೊಟೇಲ್‌ನಲ್ಲಿ ಕೆಲಸ ಮಾಡುತ್ತ ಮಗನ ಸಾಧನೆಯ ಕನಸಿಗೆ ನೀರೆರೆಯುತ್ತಿದ್ದಾರೆ.

ಕೋಚ್‌ಗಳಾದ ಅಶೋಕ್‌ ಸೂರಿ, ಶಿವಂ ಜೋಷಿ, ಪ್ರಕಾಶ ಅವರ ಗರಡಿಯಲ್ಲಿ ಪಳಗಿರುವ ಹ್ಯಾಪಿರಾಜ್ ಅವರಿಗೆ ಈ ಹಿಂದಿನ ಜಿಲ್ಲಾ, ರಾಜ್ಯಮಟ್ಟದ ಟೂರ್ನಿಗಳಲ್ಲೂ ಹತ್ತಕ್ಕೂ ಹೆಚ್ಚು ಪದಕಗಳು ಒಲಿದಿವೆ.

2017ರಿಂದ ಈ ಕ್ರೀಡೆಯಲ್ಲಿರುವ ಅವರು ಎರಡು ಬಾರಿ ರಾಷ್ಟ್ರಮಟ್ಟದ ಟೂರ್ನಿಗಳಲ್ಲಿ ಆಡಿದ್ದಾರೆ. ಜಮ್ಮು–ಕಾಶ್ಮೀರದಲ್ಲಿ ನಡೆದ ಟೂರ್ನಿಯಲ್ಲಿ ಅಲ್ಪ ಅಂತರದಲ್ಲಿ ಕಂಚಿನ ಪದಕ ತಪ್ಪಿಸಿಕೊಂಡು ನಾಲ್ಕನೇ ಸ್ಥಾನ ಗಳಿಸಿದ್ದರು. ಕೇರಳದಲ್ಲಿ ಆರನೇ ಸ್ಥಾನ ಗಳಿಸಿದ್ದರು.

‘ನಾವು ಬಡವರು. ನಮ್ಮ ಹುಡುಗನಿಗೆ ಧನಸಹಾಯ ಬೇಕು. ಸರಿಯಾಗಿ ಡಯಟ್‌ ಹಾಗೂ ಫುಡ್‌ ವ್ಯವಸ್ಥೆ ಇಲ್ಲದೆ ಎರಡು ಬಾರಿ ಆತ ರಾಷ್ಟ್ರಮಟ್ಟದಲ್ಲಿ ಸೋಲು ಕಂಡಿದ್ದಾನೆ. ಈ ಬಾರಿ ಜಯಿಸುವ ವಿಶ್ವಾಸವಿದೆ’ ಎಂದು ಸಿದ್ದರಾಜು ಹೇಳುತ್ತಾರೆ.

ಕಲಬುರಗಿಯ ಶಕೈನಾ ಬ್ಯಾಪ್ಟಿಸ್ಟ್‌ ಶಾಲೆಯ 10ನೇ ತರಗತಿ ವಿದ್ಯಾರ್ಥಿಯಾಗಿರುವ ಹ್ಯಾಪಿರಾಜ್‌ ಅವರಿಗೆ ಶಾಲೆಯ ಆಡಳಿತ ಮಂಡಳಿಯಿಂದಲೂ ಉತ್ತಮ ಬೆಂಬಲ ಇದೆ. ಬೆಳಿಗ್ಗೆ ಮತ್ತು ಸಂಜೆ ಸೇರಿ ಪ್ರತಿದಿನ ಆರು ತಾಸು ಜೂಡೊ ತಾಲೀಮು ನಡೆಸುವ ಹ್ಯಾಪಿ, ಶಾಲೆಯಲ್ಲೂ ಜಾಣ ವಿದ್ಯಾರ್ಥಿ.

ಪದಕ ಗೆದ್ದು ಕರ್ನಾಟಕಕ್ಕೆ ಹೆಮ್ಮೆ ತರಬೇಕೆನ್ನುವ ಆಸೆಯಿದೆ. ಕ್ರೀಡಾ ಕೋಟಾದಡಿ ಉದ್ಯೋಗ ಪಡೆದುಕೊಳ್ಳುವ ಕನಸೂ ಇದೆ
ಹ್ಯಾಪಿರಾಜ್, ಜೂಡೊ ಆಟಗಾರ

ಪ್ರತಿಭಾವಂತ ಹುಡುಗ: ಕೋಚ್‌

‘66 ಕೆ.ಜಿ ವಿಭಾಗದಲ್ಲಿ ಸ್ಪರ್ಧಿಸುವ ಹ್ಯಾಪಿರಾಜ್ ಪ್ರತಿಭಾವಂತ ಹುಡುಗ. ಬಾಲಕ ಮತ್ತು ಬಾಲಕಿಯರು ಸೇರಿ ನಮ್ಮ ತಂಡದಲ್ಲಿ ಈಗ 35 ಜನ ಇದ್ದಾರೆ. ರಾಜ್ಯಮಟ್ಟದಲ್ಲಿ ಆರು ಪದಕ ಗೆದ್ದಿದ್ದೇವೆ. ಶಿವಪ್ರಸಾದ್ ಎಂಬ ಹುಡುಗನೂ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾನೆ. ಎಲ್ಲ ಹುಡುಗರು ಚೆನ್ನಾಗಿ ಆಡುತ್ತಾರೆ’ ಎಂದು ಕೋಚ್‌ ಅಶೋಕ ಸೂರಿ ಹೇಳುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.