ADVERTISEMENT

ಜೂಲಿಯಸ್‌ ಬೇರ್ ಜೆನರೇಷನ್‌ ಕಪ್ ಚೆಸ್‌: ಕ್ವಾರ್ಟರ್‌ಗೆ ಎರಿಗೈಸಿ, ಪ್ರಗ್ನಾನಂದ

ಪಿಟಿಐ
Published 22 ಸೆಪ್ಟೆಂಬರ್ 2022, 12:42 IST
Last Updated 22 ಸೆಪ್ಟೆಂಬರ್ 2022, 12:42 IST

ನ್ಯೂಯಾರ್ಕ್‌: ಭಾರತದ ಯುವ ಆಟಗಾರರಾದ ಅರ್ಜುನ್‌ ಎರಿಗೈಸಿ ಮತ್ತು ಆರ್‌.ಪ್ರಗ್ನಾನಂದ ಅವರು ಜೂಲಿಯಸ್‌ ಬೇರ್ ಜೆನರೇಷನ್‌ ಕಪ್ ಆನ್‌ಲೈನ್‌ ರ‍್ಯಾಪಿಡ್‌ ಚೆಸ್‌ ಟೂರ್ನಿಯ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದರು.

ಗುರುವಾರ ಕೊನೆಗೊಂಡ ಪ್ರಿಲಿಮಿನರಿ ಹಂತದ ಸ್ಪರ್ಧೆಗಳ ಬಳಿಕ ಅರ್ಜುನ್‌ ಅವರು 25 ಪಾಯಿಂಟ್‌ಗಳೊಂದಿಗೆ ಎರಡನೇ ಸ್ಥಾನ ಪಡೆದರೆ, ಪ್ರ‌ಗ್ನಾನಂದ 23 ಪಾಯಿಂಟ್‌ಗಳೊಂದಿಗೆ ನಾಲ್ಕನೇ ಸ್ಥಾನ ಗಳಿಸಿದರು.

ನಾರ್ವೆಯ ಮ್ಯಾಗ್ನಸ್‌ ಕಾರ್ಲ್‌ಸನ್‌ ಅವರು ಪ್ರಿಲಿಮಿನರಿ ಹಂತದ 15 ಸುತ್ತುಗಳಲ್ಲಿ ಒಟ್ಟು 34 ಪಾಯಿಂಟ್ಸ್‌ ಕಲೆಹಾಕಿ ಅಗ್ರಸ್ಥಾನದೊಂದಿಗೆ ನಾಕೌಟ್‌ ಹಂತ ಪ್ರವೇಶಿಸಿದರು. ಅಮೆರಿಕದ ಹಾನ್ಸ್‌ ನೀಮನ್‌ (24 ಪಾಯಿಂಟ್ಸ್‌) ಮೂರನೇ ಸ್ಥಾನ ಪಡೆದರು.

ADVERTISEMENT

19 ವರ್ಷದ ಎರಿಗೈಸಿ 15 ಸುತ್ತುಗಳಲ್ಲಿ ಏಳರಲ್ಲಿ ಗೆದ್ದರೆ, ನಾಲ್ಕರಲ್ಲಿ ಸೋತರು. ನಾಲ್ಕು ಪಂದ್ಯಗಳನ್ನು ಡ್ರಾ ಮಾಡಿಕೊಂಡರು. ಗುರುವಾರ ನಡೆದ ಪಂದ್ಯಗಳಲ್ಲಿ ಅವರು ಜರ್ಮನಿಯ ವಿನ್ಸೆಂಟ್‌ ಕೇಮರ್‌ ಹಾಗೂ ನೆದರ್ಲೆಂಡ್ಸ್‌ನ ಅನೀಶ್‌ ಗಿರಿ ಎದುರು ಸೋತರೆ, ಪೋಲೆಂಡ್‌ನ ರೊಡೊಸ್ಲಾವ್‌ ಜತೆ ಡ್ರಾ ಮಾಡಿಕೊಂಡರು.

ಪ್ರಗ್ನಾನಂದ ಅವರು ಐದರಲ್ಲಿ ಗೆಲುವು ಪಡೆದರೆ, ಎಂಟು ಪಂದ್ಯಗಳನ್ನು ಡ್ರಾ ಮಾಡಿಕೊಂಡರು. ಎರಡು ಪಂದ್ಯಗಳನ್ನು ಎದುರಾಳಿಗೆ ಒಪ್ಪಿಸಿದರು. ಗುರುವಾರ ನಡೆದ 13ನೇ ಸುತ್ತಿನಲ್ಲಿ ಅವರು ಅಮೆರಿಕದ ಲೆವೊನ್‌ ಅರೋನಿಯನ್‌ ಎದುರು ಸೋತರು. 14ನೇ ಸುತ್ತಿನಲ್ಲಿ ಅನೀಶ್‌ ಗಿರಿ ಜತೆ ಡ್ರಾ ಮಾಡಿಕೊಂಡರು. 15ನೇ ಹಾಗೂ ಕೊನೆಯ ಸುತ್ತಿನಲ್ಲಿ ಕ್ರೊಯೇಷ್ಯದ ಇವಾನ್‌ ಸರಿಚ್‌ ಅವರನ್ನು ಮಣಿಸಿದರು.

ಕಣದಲ್ಲಿದ್ದ ಭಾರತದ ಇನ್ನೊಬ್ಬ ಸ್ಪರ್ಧಿ ಅಧಿಬನ್‌ 16ನೇ ಹಾಗೂ ಸ್ಥಾನ ಪಡೆದರು. ಕೇವಲ ಒಂದು ಗೆಲುವು ಪಡೆದ ಅವರು ಏಳು ಪಂದ್ಯಗಳಲ್ಲಿ ಸೋತರೆ, ಏಳು ಪಂದ್ಯಗಳನ್ನು ಡ್ರಾ ಮಾಡಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.