
ಭಾರತ ಜೂನಿಯರ್ ಹಾಕಿ ತಂಡದ ಆಟಗಾರರು
ಪಿಟಿಐ ಚಿತ್ರ
ಚೆನ್ನೈ : ಒಂಬತ್ತು ವರ್ಷಗಳ ಬಳಿಕ ಪ್ರಶಸ್ತಿ ಗೆಲ್ಲುವ ಛಲದಲ್ಲಿರುವ ಆತಿಥೇಯ ಭಾರತ ಪುರುಷರ ಹಾಕಿ ತಂಡವು ಭಾನುವಾರ ಇಲ್ಲಿ ನಡೆಯಲಿರುವ ಎಫ್‌ಐಎಚ್ ಜೂನಿಯರ್ ವಿಶ್ವಕಪ್ ಟೂರ್ನಿಯ ಸೆಮಿಫೈನಲ್‌ನಲ್ಲಿ ಏಳು ಬಾರಿಯ ಚಾಂಪಿಯನ್ ಜರ್ಮನಿಯನ್ನು ಎದುರಿಸಲಿದೆ.
ಎರಡು ಸಲದ ಚಾಂಪಿಯನ್ ಭಾರತ ತಂಡವು ಕೊನೆಯ ಬಾರಿಗೆ 2016ರಲ್ಲಿ ಲಖನೌದಲ್ಲಿ ಪ್ರಶಸ್ತಿ ಗೆದ್ದಿತ್ತು. ರೋಹಿತ್ ನಾಯಕತ್ವದ ಆತಿಥೇಯ ತಂಡವು ನಾಲ್ಕರ ಘಟ್ಟದ ಹಣಾಹಣಿಯಲ್ಲಿ ಬಲಿಷ್ಠ ಜರ್ಮನಿ ವಿರುದ್ಧ ಸುಧಾರಿತ ಆಟ ಪ್ರದರ್ಶಿಸುವ ಒತ್ತಡದಲ್ಲಿದೆ.
ಭಾರತ ತಂಡವು ಗುಂಪು ಹಂತದಲ್ಲಿ ಅಮೋಘ ಆಟ ಪ್ರದರ್ಶಿಸಿತ್ತು. ಬಿ ಗುಂಪಿನಲ್ಲಿದ್ದ ಭಾರತ ತಂಡವು ಒಮಾನ್, ಚಿಲಿ ಮತ್ತು ಸ್ವಿಟ್ಜರ್ಲೆಂಡ್‌ನಂತಹ ದುರ್ಬಲ ತಂಡಗಳ ವಿರುದ್ಧ ಒಟ್ಟು 29 ಗೋಲುಗಳ ಸುರಿಮಳೆಗರೆದಿತ್ತು. ಮಾತ್ರವಲ್ಲದೆ, ಒಂದೂ ಗೋಲು ಬಿಟ್ಟುಕೊಡದೆ ಕ್ವಾರ್ಟರ್ ಫೈನಲ್ ಪ್ರವೇಶಿಸಿತ್ತು.
ಭಾರತದ ದಿಗ್ಗಜ ಗೋಲ್‌ಕೀಪರ್ ಪಿ.ಆರ್. ಶ್ರೀಜೇಶ್ ತರಬೇತಿಯಲ್ಲಿರುವ ತಂಡವು ಕ್ವಾರ್ಟರ್ ಫೈನಲ್‌ನಲ್ಲಿ ಬೆಲ್ಜಿಯಂ ವಿರುದ್ಧ ನಿಜವಾದ ಪರೀಕ್ಷೆಯನ್ನು ಎದುರಿಸಿತ್ತು. ನಿಗದಿತ ಸಮಯದಲ್ಲಿ ಎರಡೂ ತಂಡಗಳು 2-2 ಗೋಲುಗಳಿಂದ ಸಮಬಲ ಸಾಧಿಸಿದ ನಂತರ, ಪೆನಾಲ್ಟಿ ಶೂಟೌಟ್‌ನಲ್ಲಿ ಭಾರತ 4-3ರಿಂದ ರೋಚಕ ಗೆಲುವು ಸಾಧಿಸಿತ್ತು.
ಬೆಲ್ಜಿಯಂ ವಿರುದ್ಧದ ಗೆಲುವಿನಲ್ಲಿ ಭಾರತದ ಗೋಲ್‌ಕೀಪರ್ ಪ್ರಿನ್ಸ್‌ದೀಪ್ ಸಿಂಗ್ ಪ್ರಮುಖ ಪಾತ್ರ ವಹಿಸಿದ್ದರು. ನಿಗದಿತ ಅವಧಿಯಲ್ಲಿ ಎದುರಾಳಿ ತಂಡದ ಕೆಲ ಗೋಲು ಅವಕಾಶಗಳನ್ನು ಅಮೋಘವಾಗಿ ತಡೆದಿದ್ದ ಅವರು, ಶೂಟೌಟ್‌ನಲ್ಲೂ ಪರಾಕ್ರಮ ಮೆರೆದಿದ್ದರು. ಬೆಲ್ಜಿಯಂ ಆಟಗಾರರ ಎರಡು ಪ್ರಯತ್ನಗಳಿಗೆ ಅದ್ಭುತವಾಗಿ ತಡೆಯೊಡ್ಡುವ ಮೂಲಕ ಭಾರತದ ಪಾಳಯದಲ್ಲಿ ಸಂಭ್ರಮ ಮೂಡಿಸಿದ್ದರು.
ಗುಂಪು ಹಂತದ ಪಂದ್ಯಗಳಲ್ಲಿ ಭಾರತದ ರಕ್ಷಣಾ ವಿಭಾಗವು ಅಷ್ಟೇನೂ ಪರೀಕ್ಷೆಗೆ ಒಳಗಾಗಿರಲಿಲ್ಲ. ಬೆಲ್ಜಿಯಂ ವಿರುದ್ಧದ ಪಂದ್ಯವು ಭಾರತಕ್ಕೆ ನಿಜವಾದ ಬಿಸಿ ತಟ್ಟಿದೆ. ಬೆಲ್ಜಿಯಂ ವಿರುದ್ಧ ಜಯ ಸಾಧಿಸಿದರೂ ತಂಡದ ಪ್ರದರ್ಶನ ಕೋಚ್ ಶ್ರೀಜೇಶ್ ಅವರಿಗೆ ಸಮಾಧಾನ ತಂದಿಲ್ಲ. ಈ ಗೆಲುವಿನಿಂದ ಮೈಮರೆಯದಂತೆ ಆಟಗಾರರಿಗೆ ಕಿವಿಮಾತು ಹೇಳಿದ್ದಾರೆ.
ಮುಂದಿನ ಪಂದ್ಯಗಳಲ್ಲಿ ಸುಧಾರಿಸಬೇಕಾದ ಕ್ಷೇತ್ರಗಳ ಕುರಿತು ಪಟ್ಟಿ ಮಾಡಿರುವ ಶ್ರೀಜೇಶ್ ಅವರು, ‘ಮುಂದಿನ ಪಂದ್ಯದಲ್ಲಿಯೂ ಜರ್ಮನಿ ವಿರುದ್ಧ ಪ್ರಬಲ ಪೈಪೋಟಿ ನಿರೀಕ್ಷಿಸುತ್ತಿದ್ದೇವೆ. ಆದ್ದರಿಂದ ನಾವು ಸಂದರ್ಭಕ್ಕೆ ಅನುಗುಣವಾಗಿ ಆಟದ ಮಟ್ಟವನ್ನು ಹೆಚ್ಚಿಸಿಕೊಳ್ಳಬೇಕು. ಪಂದ್ಯದಲ್ಲಿ ಗೋಲು ಗಳಿಸುವುದು ಅತ್ಯಂತ ಮುಖ್ಯ ವಿಷಯ’ ಎಂದು ಅವರು ಹೇಳಿದ್ದಾರೆ.
ಗುಂಪು ಹಂತದ ಪಂದ್ಯಗಳಲ್ಲಿ ಮಿಂಚಿದ್ದ ಭಾರತದ ಫಾರ್ವರ್ಡ್ ಆಟಗಾರರು ಬೆಲ್ಜಿಯಂ ವಿರುದ್ಧ ಹಲವು ಬಾರಿ ಗೋಲು ಗಳಿಸುವ ಅವಕಾಶಗಳನ್ನು ಸೃಷ್ಟಿಸಿದರೂ ಪದೇ ಪದೇ ವಿಫಲವಾಗಿದ್ದು ಶ್ರೀಜೇಶ್ ಅವರ ಚಿಂತೆಗೆ ಕಾರಣವಾಗಿದೆ. ಆಕ್ರಮಣಕಾರಿ ಆಟಕ್ಕೆ ಹೆಸರುವಾಸಿಯಾದ ಜರ್ಮನಿ ವಿರುದ್ಧ ಆ ತಪ್ಪು ಮಾಡದಂತೆ ಆಟಗಾರರನ್ನು ಎಚ್ಚರಿಸಿದ್ದಾರೆ.
ಮತ್ತೊಂದೆಡೆ ಹಾಲಿ ಚಾಂಪಿಯನ್ ಜರ್ಮನಿ ತಂಡವು ಟೂರ್ನಿಯಲ್ಲಿ ಉತ್ತಮ ಆಟ ಪ್ರದರ್ಶಿಸಿದೆ. ಗುಂಪು ಹಂತದಲ್ಲಿ ಮೂರು ಪಂದ್ಯಗಳನ್ನು ಗೆದ್ದಿರುವ ಜರ್ಮನಿ ತಂಡವು ಕಾರ್ಟರ್ ಫೈನಲ್‌ನಲ್ಲಿ 3–1ರಿಂದ ಪೆನಾಲ್ಟಿ ಶೂಟೌಟ್‌ನಲ್ಲಿ ಫ್ರಾನ್ಸ್ ತಂಡವನ್ನು ಮಣಿಸಿತ್ತು. ನಿಗದಿತ ಅವಧಿಯ ಪಂದ್ಯ 2–2ರಿಂದ ಟೈ ಆಗಿತ್ತು.
ಮತ್ತೊಂದು ಸೆಮಿಫೈನಲ್‌ನಲ್ಲಿ ಸ್ಪೇನ್ ತಂಡವು ಅರ್ಜೆಂಟೀನಾ ತಂಡವನ್ನು ಎದುರಿಸಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.