ADVERTISEMENT

ಅಂಗಣದ ಹೊರಗೆ ಕಬಡ್ಡಿ...ಕಬಡ್ಡಿ...

ವಿಕ್ರಂ ಕಾಂತಿಕೆರೆ
Published 19 ಮೇ 2019, 19:30 IST
Last Updated 19 ಮೇ 2019, 19:30 IST
ಕಬಡ್ಡಿ
ಕಬಡ್ಡಿ   

ಭಾರತ ಕಬಡ್ಡಿ ಫೆಡರೇಷನ್‌ನಲ್ಲಿ ಯಾವುದೂ ಸರಿ ಇಲ್ಲ ಎಂದು ಆರೋಪಿಸಿ ಕೆಲವರು ಬಂಡಾಯ ಕಹಳೆ ಮೊಳಗಿಸಿದಾಗ ಅದನ್ನು ಯಾರೂ ಅಷ್ಟು ಗಂಭೀರವಾಗಿ ಪರಿಗಣಿಸಿರಲಿಲ್ಲ. ಆದರೆ ನಂತರದ ಬೆಳವಣಿಗೆಗಳು ದೇಶದಲ್ಲಿ ಕಬಡ್ಡಿ ಆಡಳಿತ ಹೊಸ ದಿಕ್ಕಿನೆಡೆಗೆ ಹೆಜ್ಜೆ ಹಾಕಲು ಕಾರಣವಾದವು. ಆ ಬೆಳವಣಿಗೆಗಳ ಮೂರ್ತ ರೂಪ ಈಗ ನಡೆಯುತ್ತಿರುವ ‘ಇಂಡೊ ಇಂಟರ್ ನ್ಯಾಷನಲ್ ಕಬಡ್ಡಿ ಪ್ರೀಮಿಯರ್ ಲೀಗ್’ ಟೂರ್ನಿ (ಐಐಕೆಪಿಎಲ್).

ಐದು ವರ್ಷಗಳ ಹಿಂದೆ ಆರಂಭಗೊಂಡು, ಕಬಡ್ಡಿಗೆ ವಿಶ್ವ ಮಾನ್ಯತೆ, ಆಟಗಾರರಿಗೆ ಆದಾಯ-ಹೆಸರು ಗಳಿಸಿಕೊಟ್ಟ ಪ್ರೊ ಕಬಡ್ಡಿ ಲೀಗ್‌ಗೆ ಪರ್ಯಾಯವಾಗಿ ಲೀಗ್ ಒಂದನ್ನು ಆರಂಭಿ ಸುವುದಾಗಿ ತೊಡೆ ತಟ್ಟಿ ನಿಂತ ನ್ಯೂ ಕಬಡ್ಡಿ ಫೆಡರೇಷನ್ ಆಫ್ ಇಂಡಿಯಾ (ಎನ್‌ಕೆಎಫ್ಐ‌) ಆ ಕಾರ್ಯಕ್ರಮದಲ್ಲಿ ಯಶಸ್ಸು ಕಂಡಿದೆ.‌

ಆದರೆ ಐಐಕೆಪಿಎಲ್ ಆರಂಭವಾದ ನಂತರ ಕಬಡ್ಡಿ ಕ್ಷೇತ್ರದಲ್ಲಿ ಹೊಸ ಬಗೆಯ ಚರ್ಚೆಗಳು ಆರಂಭವಾಗಿವೆ. ಭಾರತ ಅಮೆಚೂರ್ ಬಡ್ಡಿ ಫೆಡರೇಷನ್ ಮತ್ತು ಎನ್‌ಕೆಎಫ್ಐ‌ ನಡುವಿನ ಆರೋಪ-ಪ್ರತ್ಯಾರೋಪ ಹೆಚ್ಚಿದೆ. ಹೀಗಾಗಿ ಈಗ ಭಾರತದ ಕಬಡ್ಡಿ ಅಂಗಣದ ಹೊರಗೆ ನಿತ್ಯವೂ ಕಬಡ್ಡಿ…ಕಬಡ್ಡಿ…ಕಬಡ್ಡಿ…

ADVERTISEMENT

ಐಐಕೆಪಿಎಲ್ ಆರಂಭವಾಗುತ್ತಿದ್ದಂತೆ ಒಂದೆಡೆ ಸಂಭ್ರಮ ಮೂಡಿದ್ದರೆ ಮತ್ತೊಂದೆಡೆ ಪ್ರತೀಕಾರದ ಮನೋಭಾವ ಹೆಚ್ಚಿತು. ಇದೆಲ್ಲದರ ನಡುವೆ ಕಬಡ್ಡಿ ಆಟಗಾರರು ಮತ್ತು ಪಂಡಿತರು ನಡೆಸುತ್ತಿರುವ ಚರ್ಚೆಗಳ ಪ್ರಮುಖಅಂಶ, ‘ಇದು ಕಬಡ್ಡಿಗೆ ಪೂರಕವೇ ಅಥವಾ ಮಾರಕವೇ’ ಎಂಬುದು.

‘ಐಐಕೆಪಿಎಲ್‌ನಿಂದ ಕಬಡ್ಡಿಗೆ ಯಾವ ರೀತಿಯ ಹಾನಿಯೂ ಆಗಲಾರದು. ಸ್ಪರ್ಧಾತ್ಮಕ ಕಬಡ್ಡಿ ನಡೆದಷ್ಟು ಈ ಕ್ರೀಡೆಯ ಬೆಳವಣಿಗೆಗೆ ಅನುಕೂಲವೇ ಆಗಲಿದೆ’ ಎಂದು ಹೇಳುವವರು ಭಾರತ ಕಬಡ್ಡಿ ಫೆಡರೇಷನ್‌ನಲ್ಲೂ ಇದ್ದಾರೆ. ‘ಅಲ್ಲಿನ ಪರಿಸ್ಥಿತಿಗೆ ಬೇಸತ್ತು ಹೊರಗೆ ಬಂದಿದ್ದೇವೆ. ಇದನ್ನೇ ನೆಪವಾಗಿರಿಸಿಕೊಂಡು ನಮ್ಮ ಲೀಗ್‌ನಲ್ಲಿ ಆಡಿದವರ ಮೇಲೆ ಹಗೆ ಸಾಧಿಸಬಾರದು’ ಎಂದು ಭಿನ್ನವಿಸಿಕೊಳ್ಳುವವರು ಎನ್‌ಕೆಎಫ್ಐ‌ನಲ್ಲೂ ಇದ್ದಾರೆ. ಈ ವಾದ, ಪ್ರತಿವಾದ, ಅರಿಕೆ, ಹಾರೈಕೆಗಳ ಫಲ ಏನು ಎಂಬುದು ಜುಲೈ ತಿಂಗಳಲ್ಲಿ ನಡೆಯಲಿರುವ ವಿಶ್ವಕಪ್ ಟೂರ್ನಿಯಲ್ಲಿ ಪ್ರತಿಫಲನಗೊಳ್ಳಲಿದೆ ಎಂಬುದು ಹೆಚ್ಚಿನವರಅಂಬೋಣ.

ಆರಂಭ ಎಲ್ಲಿಂದ…?

28 ವರ್ಷ ಅಮೆಚೂರ್ ಕಬಡ್ಡಿ ಫೆಡರೇಷನ್ ಆಫ್ ಇಂಡಿಯಾದ ಅಧ್ಯಕ್ಷರಾಗಿದ್ದ ಜನಾರ್ದನ್ ಸಿಂಗ್ ಗೆಹ್ಲೋಟ್ ಫೆಡರೇಷನ್ ಅನ್ನು ಮನೆಯ ಸ್ವತ್ತಾಗಿ ಪರಿವರ್ತಿಸಿದ್ದಾರೆ ಎಂಬ ಆರೋಪ ಭಾರತ ಕಬಡ್ಡಿಯಲ್ಲಿ ಸಂಚಲನ ಸೃಷ್ಟಿಸಿದ ಮೊದಲ ಹೆಜ್ಜೆ. ನಂತರ ನಡೆದ ಕಾನೂನು ಹೋರಾಟದಲ್ಲಿ ಗೆಹ್ಲೋಟ್ ಹೊರ ಬಿದ್ದರು. ಆದರೆ ಪತ್ನಿಯನ್ನು ಅಧ್ಯಕ್ಷ ಸ್ಥಾನದಲ್ಲಿಕೂರಿಸಿದರು. ಕೊನೆಗೆ ಇಬ್ಬರೂ ಅಧಿಕಾರ ತೊರೆಯಬೇಕಾಯಿತು.

ಇದೆಲ್ಲದರ ನಡುವೆ ಫೆಡರೇಷನ್ ಮೇಲೆ ಕೆಲವರು ಹೊಂದಿದ್ದಅಸಮಾಧಾನ ಶಮನಗೊಳ್ಳಲೇ ಇಲ್ಲ. ಅದರ ಪರಿಣಾಮವಾಗಿ ಹುಟ್ಟಿಕೊಂಡದ್ದು ಎಕೆಎಫ್ ಐ. ಇದು ಎಂ.ವಿ.ಪ್ರಸಾದ್ ಬಾಬು ಅವರ ಕನಸಿನ ಕೂಸು.ಅದನ್ನು ಪೋಷಿಸಿದವರಲ್ಲಿ ಹೆಚ್ಚಿನವರು ಕರ್ನಾಟಕದವರು. ಭಾರತ ಕಬಡ್ಡಿ ಫೆಡರೇಷನ್ ನಲ್ಲಿ ನೈಜ ಪ್ರತಿಭೆಗಳಿಗೆ ಅವಕಾಶ ಸಿಗುತ್ತಿಲ್ಲ, ಲಾಬಿ ಹೆಚ್ಚಿದೆ ಎಂದೆಲ್ಲ ಆರೋಪ ಮಾಡಿದ ಬಂಡಾಯ ಬಣದವರು ಪ್ರಸಾದ್ ಬಾಬು ಅವರಿಗೆ ಭಾರಿ ಬೆಂಬಲ ನೀಡಿದರು. ಎಕೆಎಫ್‌ಐನ ಪ್ರಮುಖ ಸಭೆಗಳು ಬೆಂಗಳೂರಿನಲ್ಲೇ ನಡೆದವು. ಈಗ ಐಐಕೆಪಿಎಲ್‌ನ ಪಂದ್ಯಗಳ ಪೈಕಿ ಹೆಚ್ಚಿನವು ಕರ್ನಾಟಕದಲ್ಲೇ ನಡೆಯಲಿವೆ. ಪುಣೆಯ ನಂತರ ಮೈಸೂರಿನಲ್ಲಿ ಹಣಾಹಣಿ ನಡೆಯಲಿದ್ದು ಸೆಮಿಫೈನಲ್ ಮತ್ತು ಫೈನಲ್ ಕದನಕ್ಕೆ ಬೆಂಗಳೂರು ಆತಿಥ್ಯ ವಹಿಸಲಿದೆ.

ಯಾರಿಗೇನು ಲಾಭ? ಯಾರಿಗೆ ನಷ್ಟ?

ಹೊಸ ಫೆಡರೇಷನ್ ಮತ್ತು ಹೊಸ ಕಬಡ್ಡಿ ಲೀಗ್ ನ ಲಾಭ-ನಷ್ಟದ, ಪೂರಕ-ಮಾರಕ ವಿಚಾರಗಳ ಕುರಿತು ಪರ-ವಿರೋಧ ಹೇಳಿಕೆಗಳು ಕೇಳಿ ಬಂದಿವೆ. ಇದು ಎರಡನೇ ದರ್ಜೆಯ ಫೆಡರೇಷನ್ ಮತ್ತು ಲೀಗ್. ಆಟಗಾರರ ಭವಿಷ್ಯದ ದೃಷ್ಟಿಯಲ್ಲಿ ಇದರಿಂದ ಏನೂ ಪ್ರಯೋಜನ ಇಲ್ಲ. ವೈಯಕ್ತಿಕವಾಗಿ ಕೆಲವರು ತಮ್ಮ ಬೇಳೆ ಬೇಯಿಸಿಕೊಳ್ಳಬಲ್ಲರಷ್ಟೆ ಎಂದು ಅಮೆಚೂರ್ ಫೆಡರೇಷನ್‌ನವರು ಅಭಿಪ್ರಾಯಪಟ್ಟರೆ, ಆಟಗಾರರು ಮತ್ತು ಕಬಡ್ಡಿಯ ಬೆಳವಣಿಗೆಯ ದೃಷ್ಟಿಯಲ್ಲಿ ಹೊಸ ಸಂಘಟನೆ ಮತ್ತು ಲೀಗ್ ಅಗತ್ಯವಿತ್ತು, ಆ ಕನಸು ಈಗ ನನಸಾಗಿದೆ. ಇದರಿಂದ ಭಾರತ ಕಬಡ್ಡಿ ಹೊಸ ದಿಗಂತದತ್ತ ಸಾಗಲಿದೆ ಎಂಬುದು ಎಕೆಎಫ್ಐ ಪದಾಧಿಕಾರಿಗಳ ಅನಿಸಿಕೆ.

ಪ್ರೊ ಕಬಡ್ಡಿ ಲೀಗ್‌ನಲ್ಲಿ ವಿವಿಧ ತಂಡಗಳ ಕೋಚ್‌ಗಳಾಗಿ ಕಾರ್ಯನಿರ್ವಹಿಸುವವರಿಗೂ ಈ ವಿಚಾರದಲ್ಲಿ ಭಿನ್ನಾಭಿಪ್ರಾಯವಿದೆ. ಕೆಲವರು ಹೊಸ ಲೀಗ್ ನಿಂದ ಹೊಸ ಪ್ರತಿಭೆಗಳು ಹುಟ್ಟಿ ಬರಲಿದ್ದಾರೆ ಎಂಬ ಅಭಿಪ್ರಾಯ ಹೊಂದಿದ್ದರೆ, ಇನ್ನು ಕೆಲವರು ಇಂಥ ಪ್ರಯತ್ನದ ಅಗತ್ಯವೇ ಇರಲಿಲ್ಲ ಎನ್ನುತ್ತಿದ್ದಾರೆ.

ಅಸಮಾಧಾನಕ್ಕೆ ಹೊಸ ಸಂಸ್ಥೆ ಉತ್ತರವೇ?

ಪ್ರೊ ಕಬಡ್ಡಿ ಲೀಗ್ ಆರಂಭಗೊಂಡ ನಂತರ ಕಬಡ್ಡಿಗೆ ಉತ್ತಮ ಪ್ರಚಾರ ಸಿಗುತ್ತಿದೆ. ಹೀಗಾಗಿ ಆಟಗಾರರು ಮತ್ತು ಕಬಡ್ಡಿ ಆಸಕ್ತರು ಬೆಳೆಯುತ್ತಿದ್ದಾರೆ. ಇಂಥ ಸಂದರ್ಭದಲ್ಲಿ ಫೆಡರೇಷನ್ ಮೇಲೆ ಅಸಮಾಧಾನಗೊಂಡವರೆಲ್ಲರೂ ಹೊಸ ಸಂಸ್ಥೆ ಕಟ್ಟಿಕೊಂಡರೆ ಸಮಸ್ಯೆಗೆ ಪರಿಹಾರ ಸಿಗುವುದೇ ಎಂದು ಪ್ರಶ್ನಿಸುತ್ತಾರೆ, ಹಿರಿಯ ಆಟಗಾರ ಬಿ.ಸಿ.ರಮೇಶ್.

ಎಕೆಎಫ್ಐ ಮಾತ್ರ ಮಾನ್ಯತೆ ಪಡೆದಿರುವ ಸಂಸ್ಥೆ. ಇದರಡಿಯಲ್ಲಿ ಆಡಿದವರಿಗೆ ಮಾತ್ರ ಭವಿಷ್ಯವಿದೆ. ಬಂಡಾಯದ ಬಾವುಟ ಹಾರಿಸಿದವರು ಕಬಡ್ಡಿಗೆ ಮತ್ತು ಕಬಡ್ಡಿ ಆಟಗಾರರಿಗೆ ಮೋಸ ಮಾಡುತ್ತಿದ್ದಾರೆ. ಹೊಸ ಲೀಗ್ ಮಾಡುವ ಮುನ್ನ ಅವರು ಸ್ವಲ್ಪ ಯೋಚಿಸಬೇಕಿತ್ತು ಎಂದು ಅವರು ಹೇಳಿದರು.

ಪ್ರತಿಭೆಗಳ ಶೋಧಕ್ಕೆ ಉತ್ತಮ ಅವಕಾಶ

ಹೊಸ ಸಂಸ್ಥೆ ಮಾಡುವುದು ಅನಿವಾರ್ಯವಾಗಿತ್ತು. ಹೊಸ ಲೀಗ್ ನಿಂದಾಗಿ ಕಬಡ್ಡಿಗೆ ಯಾವುದೇ ರೀತಿಯಲ್ಲಿ ಧಕ್ಕೆಯಾಗಲಾರದು. ಇದು ಪ್ರತಿಭೆಗಳ ಶೋಧಕ್ಕೆ ದಾರಿಯಾಗಲಿದೆ. ಹೊಸ ಫೆಡರೇಷನ್ ಅಡಿಯಲ್ಲಿ ಆಡಿದ್ದಾರೆ ಎಂಬ ಕಾರಣಕ್ಕೆ ಆಟಗಾರರಿಗೆ ತೊಂದರೆ ಮಾಡುವುದು ಸರಿಯಲ್ಲ. ವಿವಿಧ ಟೂರ್ನಿಗಳ ಆಯ್ಕೆ ಸಂದರ್ಭದಲ್ಲಿ ಅವರಿಗೆ ಅವಕಾಶ ನೀಡಬೇಕು, ಬೇಧ ಮಾಡದೆ ಕಬಡ್ಡಿ ಉಳಿಸುವ ಕಾರ್ಯಕ್ಕೆ ಮುಂದಾಗಬೇಕು ಎಂದು ಎನ್ ಕೆಎಫ್ಐ ಕಾರ್ಯದರ್ಶಿ ಹೊನ್ನಪ್ಪ ಹೇಳಿದರು.

***

ಕಬಡ್ಡಿ ಫೆಡರೇಷನ್ ನಲ್ಲಿ ಇದ್ದ ಕೆಲವರ ಆಧಿಪತ್ಯವನ್ನು ಇಲ್ಲದೆ ಮಾಡುವುದು ನಮ್ಮ ಉದ್ದೇಶವಾಗಿತ್ತು. ಇದರಿಂದ ಕಬಡ್ಡಿ ಕ್ರೀಡೆಯ ಬೆಳವಣಿಗೆಗೆ ಅನುಕೂಲ ಆಗಲಿದೆ.

–ಈಶ್ವರ ಅಂಗಡಿ,ಐಐಕೆಪಿಎಲ್ ತಾಂತ್ರಿಕ ಅಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.