ಹುಬ್ಬಳ್ಳಿ: ‘ಪ್ರೊ ಕಬ್ಬಡ್ಡಿ ಲೀಗ್ ನೋಡಿ, ನಾನೂ ಕಬಡ್ಡಿ ಆಟಗಾರನಾಗಬೇಕು ಎಂಬ ಕನಸು ಮೂಡಿತು. ಇರಾನ್‌ನ ಆಟಗಾರ ಮಹಮ್ಮದ್ ರೇಜಾ ಶಾಡ್ಲೊಯಿ ಅವರ ಆಟ ನನಗೆ ಸ್ಫೂರ್ತಿ. ರಾಷ್ಟ್ರೀಯ ಕಬಡ್ಡಿ ತಂಡಕ್ಕೆ ಆಯ್ಕೆಯಾಗಿ ಉತ್ತಮ ಸಾಧನೆ ಮಾಡಬೇಕು ಎಂಬುದು ನನ್ನ ಗುರಿ...’
ಇದು ಕಬಡ್ಡಿ ಆಟಗಾರ, ಧಾರವಾಡ ಜಿಲ್ಲೆಯ ಹಾರೋಬೆಳವಡಿಯ ವೀರೇಶ ತೋರಣಗಟ್ಟಿ ಅವರ ಆಶಾಭಾವ. ಭಾರತೀಯ ಅಮೆಚೂರ್ ಕಬಡ್ಡಿ ಫೆಡರೇಷನ್‌ನಿಂದ 2024ರ ಮಾರ್ಚ್‌ನಲ್ಲಿ ಬಿಹಾರದಲ್ಲಿ ನಡೆದ 33ನೇ ಸಬ್ ಜ್ಯೂನಿಯರ್ ರಾಷ್ಟ್ರೀಯ ಕಬಡ್ಡಿ ಚಾಂಪಿಯನ್‌ಷಿಪ್‌ನಲ್ಲಿ ಅವರು ಪ್ರತಿನಿಧಿಸಿದ್ದ ಭಾರತೀಯ ಕ್ರೀಡಾ ಪ್ರಾಧಿಕಾರ (ಸಾಯ್) ಕೇಂದ್ರದ ತಂಡವು ಬೆಳ್ಳಿ ಪದಕ ಗಳಿಸಿತು.
ಹರಿಯಾಣ ವಿರುದ್ಧದ ಪಂದ್ಯದಲ್ಲಿ ಸಾಯ್ ತಂಡ ಒಂದು ಪಾಯಿಂಟ್‌ನಿಂದ ಸೋತರೂ ಅದರಲ್ಲಿ ವೀರೇಶ ಅವರ ಆಲ್‌ರೌಂಡರ್ ಆಟ ಗಮನ ಸೆಳೆಯಿತು. ಈ ಪಂದ್ಯದಲ್ಲಿ ಅವರು ಉತ್ತಮ ಆಲ್‌ರೌಂಡರ್ ಪ್ರಶಸ್ತಿ ಪಡೆದರು.
‘ಒಂಬತ್ತನೇ ತರಗತಿ ಯಲ್ಲಿದ್ದಾಗ ಧಾರವಾಡದ ಸಾಯ್ ಕೇಂದ್ರಕ್ಕೆ ಪ್ರವೇಶ ಸಿಕ್ಕಿತು. ಅಲ್ಲಿ ತರಬೇತುದಾರ ರಂಗನಾಥ ಅವರು ನನ್ನ ಪ್ರತಿಭೆ ಗುರುತಿಸಿದರು. ಕಬಡ್ಡಿ ತರಬೇತಿ ಜತೆಗೆ ಶೇ 80ರಷ್ಟು ಅಂಕಗಳ ಸಹಿತ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಉತ್ತೀರ್ಣಗೊಂಡೆ. ಪಿಯುಸಿಯಲ್ಲಿ ವಿಜ್ಞಾನ ವಿಭಾಗದಲ್ಲಿ ಪ್ರವೇಶ ಪಡೆಯ
ಬೇಕೆಂದಿರುವೆ’ ಎಂದು ವೀರೇಶ ತೋರಣಗಟ್ಟಿ ತಿಳಿಸಿದರು.
‘ನನ್ನ ತಂದೆ ತಾಲ್ಲೂಕು ಪಂಚಾಯಿತಿಯಲ್ಲಿ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಾರೆ. ನಮಗೆ ಯಾವುದೇ ಕೃಷಿ ಭೂಮಿ ಇಲ್ಲ. ಬಾಡಿಗೆ ಮನೆಯಲ್ಲಿ ವಾಸವಾಗಿದ್ದೇವೆ. ತಂದೆಗೆ ಬರುವ ಅಲ್ಪ ವೇತನದಲ್ಲೇ ಜೀವನ ನಡೆಯಬೇಕು. ಆದರೂ ನನ್ನ ಕನಸಿಗೆ ಬೆಂಬಲವಾಗಿ ನಿಂತಿದ್ದಾರೆ’ ಎಂದು ಅವರು ತಿಳಿಸಿದರು.
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು 2023–24ರಲ್ಲಿ ವಿಜಯಪುರದಲ್ಲಿ ನಡೆದ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಜಿಲ್ಲಾಮಟ್ಟದ ಕ್ರೀಡಾಕೂಟ, ಹಾವೇರಿಯಲ್ಲಿ ನಡೆದ ಬೆಳಗಾವಿ ವಲಯಮಟ್ಟದ ಕ್ರೀಡಾಕೂಟ ಸೇರಿ ವಿವಿಧ ತಾಲ್ಲೂಕು ಮತ್ತು ಜಿಲ್ಲಾ ಮಟ್ಟದ ಕ್ರೀಡಾಕೂಟಗಳಲ್ಲಿ ವೀರೇಶ ಅವರು ಪ್ರತಿನಿಧಿಸಿದ್ದ ತಂಡವು ಪ್ರಥಮ ಬಹುಮಾನ ಪಡೆದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.