ADVERTISEMENT

ರಾಜ್ಯ ಕಬಡ್ಡಿಯಲ್ಲಿ ಉದ್ದೀಪನ ಮದ್ದು ಸದ್ದು

ತಡರಾತ್ರಿ ನಡೆಯುವ ಲೀಗ್‌ಗಳು, ಹೊಸ ಮಾದರಿಗಳಿಂದ ಯುವ ಅಟಗಾರರು ದಾರಿತಪ್ಪುತ್ತಿರುವ ಆತಂಕ

ವಿಕ್ರಂ ಕಾಂತಿಕೆರೆ
Published 1 ಜನವರಿ 2025, 23:30 IST
Last Updated 1 ಜನವರಿ 2025, 23:30 IST
ಕಬಡ್ಡಿ ಲೀಗ್ ಒಂದರ ಅಂಗಣದಾಚೆ ಲಭಿಸಿದ ಸಿರಿಂಜ್‌ಗಳು
ಕಬಡ್ಡಿ ಲೀಗ್ ಒಂದರ ಅಂಗಣದಾಚೆ ಲಭಿಸಿದ ಸಿರಿಂಜ್‌ಗಳು   

ಮಂಗಳೂರು: ರಾಜ್ಯದ ಕಬಡ್ಡಿ ವಲಯದಲ್ಲಿ ಈಚೆಗೆ ಉತ್ತೇಜಕ ಮದ್ದು ಸದ್ದುಮಾಡತೊಡಗಿದೆ. ಹೆಚ್ಚು ಟೂರ್ನಿಗಳು ನಡೆಯುವ ದಕ್ಷಿಣ ಕನ್ನಡ, ಉಡುಪಿ, ನೆರೆರಾಜ್ಯದ ಕಾಸರಗೋಡಿನ ಜೊತೆ ಮಲೆನಾಡಿನ ಕೆಲವು ಪ್ರದೇಶಗಳಲ್ಲಿ ಯುವ ಆಟಗಾರರು ಶಕ್ತಿವರ್ಧಕ ಹಾಗೂ ತೂಕ ಕಡಿಮೆ ಮಾಡುವ ಔಷಧಗಳನ್ನು ಬಳಸುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ದೇಶದ ಕಬಡ್ಡಿ ಕ್ಷೇತ್ರದಲ್ಲಿ ಒಂದು ದಶಕದಲ್ಲಿ ಆಗಿರುವ ಕ್ರಾಂತಿಯಿಂದಾಗಿ ಕೆಲವು ಪ್ರದೇಶಗಳು ಹೊಸ ಮಾದರಿಯ ಲೀಗ್‌ಗಳಿಗೆ ನಾಂದಿ ಹಾಡಿವೆ. ದಕ್ಷಿಣ ಕರ್ನಾಟಕ ಇಂಥ ಒಂದು ಪ್ರದೇಶ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎರಡು–ಮೂರು ವರ್ಷಗಳಿಂದ ತಡರಾತ್ರಿ ಅಥವಾ ಮುಂಜಾನೆಯ ವರೆಗೂ ಲೀಗ್ ಪಂದ್ಯಗಳನ್ನು ಆಯೋಜಿಸಲಾಗುತ್ತಿದೆ. ಮುಕ್ತ ಲೀಗ್‌ಗಳಲ್ಲಿ ದೊಡ್ಡ ಮೊತ್ತ ಸಿಗುವುದರಿಂದ ಪ್ರದರ್ಶನ ಉತ್ತಮಪಡಿಸಲು ಆಟಗಾರರು ಹಾತೊರೆಯುತ್ತಾರೆ. ಆಟಗಾರರನ್ನು ಹರಾಜಿನಲ್ಲಿ ಪಡೆಯುವವರಿಗೆ ತಂಡದ ಗೆಲುವು ಪ್ರತಿಷ್ಠೆಯಾಗಿರುತ್ತದೆ. ಆದ್ದರಿಂದ ಕೆಲವೊಮ್ಮೆ ಅವರೇ ಉತ್ತೇಜಕ ಮದ್ದಿಗೆ ದಾರಿಮಾಡಿಕೊಡುವುದೂ ಉಂಟು ಎಂಬ ಮಾತುಗಳೂ ಕೇಳಿಬಂದಿವೆ.

ದೇಹತೂಕದ ಅಧಾರದಲ್ಲಿ ನಡೆಯುವ ಟೂರ್ನಿಗಳ ಸಂಖ್ಯೆಯೂ ಕರಾವಳಿ ಮತ್ತು ಮಲೆನಾಡಿನಲ್ಲಿ ಇತ್ತೀಚೆಗೆ ಹೆಚ್ಚಾಗಿದ್ದು ಅಲ್ಲಿ ತೂಕ ಇಳಿಸುವ ಡೈಯುರೆಟಿಕ್‌ಗಳ ಬಳಕೆಯೂ ನಡೆಯುತ್ತಿದೆ ಎಂದು ಕೆಲವು ಆಟಗಾರರೇ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ADVERTISEMENT

ಶಕ್ತಿವರ್ಧಕ ಸ್ಟಿರಾಯ್ಡ್‌ಗಳು ಮತ್ತು ನೋವು ನಿವಾರಕ, ವೇಗವಾಗಿ ಗುಣಪಡಿಸುವ ಗುಣವುಳ್ಳ, ಹೆಚ್ಚು ಅವಧಿಯವರೆಗೆ ಅಭ್ಯಾಸ ಮಾಡಲು ಅನುಕೂಲವಾಗುವ ನಾರ್ಕೊಟಿಕ್ ಅನಲಾಗ್ಸ್‌ಗಳಿಗೂ ಬೇಡಿಕೆ ಇದೆ. ಇತ್ತೀಚೆಗೆ ಮಂಗಳೂರು ನಗರದಲ್ಲಿ ನಡೆದ ಲೀಗ್ ಒಂದರ ಸಂದರ್ಭದಲ್ಲಿ ಅಂಗಣದ ಹಿಂಭಾಗದಲ್ಲಿ ಅನೇಕ ಸಿರಿಂಜ್‌ಗಳು ಪತ್ತೆಯಾಗಿದ್ದವು.

‘ಆಟಗಾರರ ಆರೋಗ್ಯ ಮತ್ತು ಭವಿಷ್ಯಕ್ಕೆ ದೋಷ ಉಂಟುಮಾಡುವ ಉತ್ತೇಜಕ ಮದ್ದಿನ ‘ಆಟ’ ನಿಲ್ಲಬೇಕು’ ಎಂದು ಕಬಡ್ಡಿ ಸಂಘಟಕ ಗೋಪಿನಾಥ್ ಕುಮಾರ್‌ ಹೇಳಿದರು.

‘ಹೊರಜಿಲ್ಲೆಗಳಲ್ಲಿ ಮಾತ್ರ ಇದ್ದ ಈ ಚಾಳಿ ಈಗ ಮಲೆನಾಡಿಗೂ ವಿಸ್ತರಿಸಿದೆ. ಅಜ್ಜಂಪುರದಲ್ಲಿ ಈಚೆಗೆ ನಡೆದ ರಾಜ್ಯಮಟ್ಟದ ಲೀಗ್‌ನಲ್ಲಿ ಆಟಗಾರರು ಉತ್ತೇಜಕ ಮದ್ದು ಸೇವಿಸಿದ್ದು ಕಂಡುಬಂದಿದೆ’ ಎಂದು ಕೊಪ್ಪದ ಆಟಗಾರರೊಬ್ಬರು ತಿಳಿಸಿದರು.

‘ಅತಿಯಾದ ಒತ್ತಡವೇ ಹೀಗೆ ಅಡ್ಡ ದಾರಿ ಹಿಡಿಯಲು ಕಾರಣ. ಕೆಲವೊಮ್ಮೆ ನಿರಂತರವಾಗಿ ರಾತ್ರಿ ವೇಳೆ ಪಂದ್ಯಗಳನ್ನು ಆಡಬೇಕಾಗುವುದರಿಂದ ಶಕ್ತಿ ವರ್ಧಿಸಲು ಮದ್ದು ತೆಗೆದುಕೊಳ್ಳುತ್ತಾರೆ’ ಎಂದು ದಕ್ಷಿಣ ಕನ್ನಡದ ವಿಟ್ಲದ ಆಟಗಾರರೊಬ್ಬರು ಹೇಳಿದರೆ, ‘ಹೊರ ಜಿಲ್ಲೆಗಳಿಗೆ ಹೋಗಿ ಬಂದವರಿಂದಾಗಿ ಮಲೆನಾಡಿಗೂ ಈ ದಂಧೆ ಹಬ್ಬಿದೆ. ಇದನ್ನು ತಡೆಯದೇ ಇದ್ದರೆ ದೊಡ್ಡ ಸಮಸ್ಯೆ ಆಗಲಿದೆ’ ಎಂದು ಚಿಕ್ಕಮಗಳೂರಿನವರೊಬ್ಬರ ಮಾತು.

ಸಾವಿಗೆ ನೇರ ಕಾರಣವಾಗುವುದಿಲ್ಲ

ಈಚೆಗೆ ಬೇರೆ ಬೇರೆ ಟೂರ್ನಿಗಳಲ್ಲಿ ಆಡುತ್ತಿರುವಾಗಲೇ ಆಟಗಾರರು ಸಾವಿಗೀಡಾದಾಗ ಉತ್ತೇಜಕ ಮದ್ದು ಸೇವನೆಯ ವಿಷಯ ಮುನ್ನೆಲೆಗೆ ಬಂದಿತ್ತು. ಆದರೆ ಆಗೊಮ್ಮೆ ಈಗೊಮ್ಮೆ ಪಂದ್ಯಗಳಿಗಾಗಿ ಮದ್ದು ಸೇವಿಸುವುದರಿಂದ ಸಾವು ಸಂಭವಿಸುವ ಸಾಧ್ಯತೆ ಕಡಿಮೆ ಎಂದು ಕ್ರೀಡಾ ವೈದ್ಯ ಧಾರವಾಡದ ಡಾ.ಕಿರಣ್ ಕುಲಕರ್ಣಿ ತಿಳಿಸಿದರು. ಉತ್ತೇಜಕ ಮದ್ದು ಕೂಡ ಸಾವಿಗೆ ಒಂದು ಕಾರಣ ಆಗುವ ಸಾಧ್ಯತೆ ಇದೆ. ದೀರ್ಘಕಾಲ ನಿರಂತರವಾಗಿ ಇಂಥ ಔಷಧಿ ಸೇವಿಸಿದರೆ ಹೃದಯಸ್ತಂಭನ ಆಗುವ ಸಂಭವ ಇದೆ ಎಂದು ಅವರು ಹೇಳಿದರು.

ಪೊಲೀಸರು ಅಸಹಾಯಕರು

ರಾಷ್ಟ್ರೀಯ ಮಟ್ಟದ ಟೂರ್ನಿಗಳಲ್ಲಿ ಡೋಪಿಂಗ್ ತಡೆಯಲು ರಾಷ್ಟ್ರೀಯ ಉತ್ತೇಜಕ ಮದ್ದು ತಡೆ ಘಟಕ (ನಾಡಾ) ಇದೆ. ಆದರೆ ಖಾಸಗಿಯಾಗಿ ನಡೆಯುವ ಸಣ್ಣ ಟೂರ್ನಿಗಳಲ್ಲಿ ಇಂಥ ಮದ್ದು ಬಳಕೆ ತಡೆಗೆ ಯಾವ ಮಾರ್ಗವೂ ಇಲ್ಲ. ಪೊಲೀಸರು ಕೂಡ ನೇರವಾಗಿ ಕ್ರಮ ಕೈಗೊಳ್ಳಲು ಸಾಧ್ಯವಾಗುವುದಿಲ್ಲ. ‘ಪೊಲೀಸರು ಮಧ್ಯಪ್ರವೇಶ ಮಾಡಿದರೂ ಆಟಗಾರ ಸೇವಿಸಿದ ಔಷಧಿ ನಾರ್ಕೋಟಿಕ್ ಡ್ರಗ್ಸ್ ಆ್ಯಂಡ್ ಸೈಕೊಟ್ರಾಪಿಕ್ ಸಬ್‌ಸ್ಟಾನ್ಸಸ್‌ ಆ್ಯಕ್ಟ್‌ನ ವ್ಯಾಖ್ಯೆಗೆ ಒಳ‍ಪಟ್ಟಿರಬೇಕು. ಇಲ್ಲವಾದರೆ ಏನೂ ಮಾಡಲಾಗುವುದಿಲ್ಲ’ ಎಂದು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯತೀಶ್ ಎನ್‌ ತಿಳಿಸಿದರು.

ಉತ್ತೇಜಕ ಪದಾರ್ಥ ಸೇವನೆ ಮಾಡುತ್ತಿರುವುದರ ಬಗ್ಗೆ ಮಾಹಿತಿ ಇಲ್ಲ. ಇಂಥ ಪದಾರ್ಥಗಳನ್ನು ಬಳಸುತ್ತಿರುವುದು ನಿಜವಾಗಿದ್ದಲ್ಲಿ ತಡೆಯಲು ಕ್ರಮ ಕೈಗೊಳ್ಳಲಾಗುವುದು. ಮುಂದಿನ ಸಭೆಯಲ್ಲಿ ಈ ಕುರಿತು ಚರ್ಚೆ ನಡೆಸಲಾಗುವುದು.
–ಬಿ.ಸಿ.ಸುರೇಶ್ ರಾಜ್ಯ ಅಮೆಚೂರ್ ಕಬಡ್ಡಿ ಸಂಸ್ಥೆಯ ಅಧ್ಯಕ್ಷ
ಯಾವುದೇ ಕ್ರೀಡೆ ಇರಲಿ ಅದರಲ್ಲಿ ಸಾಧನೆಗೆ ಕಳ್ಳದಾರಿ ಹಿಡಿಯುವುದು ಸರಿಯಲ್ಲ. ಯುವಪೀಳಿಗೆ ರಾಜ್ಯದ ಆಸ್ತಿಯಾಗಿದ್ದು ಉತ್ತೇಜಕ ಮದ್ದಿಗೆ ಮರುಳಾಗಿ ಅವರು ಜೀವನ ಹಾಳುಮಾಡಿಕೊಳ್ಳಬಾರದು.
–ಸಿ.ಹೊನ್ನಪ್ಪಗೌಡ ಮಾಜಿ ಅಂತರರಾಷ್ಟ್ರೀಯ ಆಟಗಾರ
ಕಬಡ್ಡಿ ಸಹಜವಾಗಿ ಆಡಬೇಕಾದ ಆಟ. ಈಗ ಹೆಚ್ಚಿನ ಕ್ರೀಡೆಗಳಲ್ಲಿ ಹಾದಿತಪ್ಪಿಸುವ ಕೆಲಸ ಆಗುತ್ತಿದೆ. ನಾವೆಲ್ಲ ನೈಸರ್ಗಿಕ ಆಹಾರ ಸೇವಿಸಿ ಕಬಡ್ಡಿ ಆಡಿ ಬೆಳೆದವರು. ಸಾಧನೆಗೆ ಉತ್ತೇಜಕ ಔಷಧಿ ಅಗತ್ಯವೇ ಇಲ್ಲ.
–ಬಿ.ಸಿ.ರಮೇಶ್‌ ಪ್ರೊ ಕಬಡ್ಡಿ ಲೀಗ್‌ನ ಕೋಚ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.