ADVERTISEMENT

ಒಲಿಂಪಿಕ್ಸ್‌ಗೆ ರಾಜ್ಯದಿಂದ ಪ್ರತಿಭಾನ್ವೇಷಣೆ

​ಪ್ರಜಾವಾಣಿ ವಾರ್ತೆ
Published 20 ಆಗಸ್ಟ್ 2021, 20:40 IST
Last Updated 20 ಆಗಸ್ಟ್ 2021, 20:40 IST
ಒಲಿಂಪಿಕ್ಸ್‌
ಒಲಿಂಪಿಕ್ಸ್‌   

ಬೆಂಗಳೂರು: ಮುಂದಿನ ಒಲಿಂಪಿಕ್ಸ್‌ಗೆ ಕರ್ನಾಟಕದಿಂದ ಹೆಚ್ಚು ಕ್ರೀಡಾಪಟುಗಳು ಆಯ್ಕೆಯಾಗುವ ಉದ್ದೇಶದಿಂದ ಖೇಲೊ ಇಂಡಿಯಾ ಮಾದರಿಯಲ್ಲಿ ರಾಜ್ಯ ಸರ್ಕಾರ ಅಮೃತ ಕ್ರೀಡಾ ದತ್ತು ಯೋಜನೆ ಜಾರಿಗೆ ತಂದಿದೆ ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ನಾರಾಯಣಗೌಡ ಶುಕ್ರವಾರ ತಿಳಿಸಿದ್ದಾರೆ.

ಪದಕ ಗೆಲ್ಲುವ ಸಾಮರ್ಥ್ಯ ಇರುವ 75 ಅಥ್ಲೀಟ್‌ಗಳನ್ನು ಆಯ್ಕೆಮಾಡಿ ತರಬೇತಿ ನೀಡುವುದು ಯೋಜನೆಯ ಗುರಿಯಾಗಿದ್ದು ಇದಕ್ಕಾಗಿ ಉನ್ನತಾಧಿಕಾರ ಸಮಿತಿ ರಚಿಸಲಾಗಿದೆ. ಕ್ರೀಡಾ ಸಚಿವರು ಇದರ ಅಧ್ಯಕ್ಷರಾಗಿದ್ದು ರಾಜ್ಯ ಒಲಿಂಪಿಕ್ ಸಂಸ್ಥೆ ಅಧ್ಯಕ್ಷರು ಉಪಾಧ್ಯಕ್ಷರಾಗಿರುವರು. ಹಾಕಿ ಆಟಗಾರ ವಿ.ಆರ್.ರಘುನಾಥ್, ಈಜು ಕೋಚ್‌ ನಿಹಾರ್ ಅಮೀನ್ ಮತ್ತು ಬ್ಯಾಡ್ಮಿಂಟನ್ ಆಟಗಾರ ಅನೂಪ್ ಶ್ರೀಧರ್, ಕ್ರೀಡಾ ವಿಜ್ಞಾನ ಕೇಂದ್ರದ ತಜ್ಞರು ಸಮಿತಿಯ ಸದಸ್ಯರಾಗಿರುವರು.

ಸಮಿತಿ ಆಯ್ಕೆ ಮಾಡಿದ ಕ್ರೀಡಾಪಟುಗಳಿಗೆ ಖೇಲೊ ಇಂಡಿಯಾ ಯೋಜನೆಯ ಅಕಾಡೆಮಿಗಳಲ್ಲಿ ತರಬೇತಿ ನೀಡಲಾಗುವುದು. ಪ್ರತಿ ಕ್ರೀಡಾಪಟುವಿಗೆ ವಾರ್ಷಿಕ ಗರಿಷ್ಠ ₹ 5 ಲಕ್ಷದ ವರೆಗೆ ಪ್ರೋತ್ಸಾಹಧನ ಸಿಗಲಿದೆ. ವೈಜ್ಞಾನಿಕವಾಗಿ ಪ್ರತಿಭಾನ್ವೇಷಣೆ ನಡೆಯಲಿದೆ.

ರಾಜ್ಯಪಾಲರಿಂದ ತಲಾ ₹ 1 ಲಕ್ಷ

ADVERTISEMENT

ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಂಡ ಕರ್ನಾಟಕದ ಕ್ರೀಡಾಪಟುಗಳಿಗೆ ರಾಜ್ಯಪಾಲರು ತಲಾ ₹ 1 ಲಕ್ಷ ನೀಡಲಿದ್ದಾರೆ. ಗಾಲ್ಫರ್ ಅದಿತಿ ಅಶೋಕ್‌, ಈಕ್ವೆಸ್ಟ್ರಿಯನ್ ಫವಾದ್ ಮಿರ್ಜಾ, ಈಜುಪಟು ಶ್ರೀಹರಿ ನಟರಾಜ್‌ ಅವರೊಂದಿಗೆ ಮಹಿಳಾ ಹಾಕಿ ತಂಡದ ಸಹಾಯಕ ಕೋಚ್ ಅಂಕಿತಾ ಸುರೇಶ್ ಅವರಿಗೂ ಗೌರವ ಸಲ್ಲಲಿದೆ. ರಾಜಭವನದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ರಾಜ್ಯಪಾಲ ಥಾವರ್ ಚಂದ್‌ ಗೆಹಲೋತ್‌ ಅವರು ಚೆಕ್ ಹಸ್ತಾಂತರಿಸಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.