
ದಿಯು: ನಿರೀಕ್ಷೆಯಂತೆ ಕರ್ನಾಟಕದ ಈಜುಪಟುಗಳು ಘೋಘ್ಲಾ ಕಡಲ ಕಿನಾರೆಯಲ್ಲಿ ನಡೆಯುತ್ತಿರುವ ಖೇಲೊ ಇಂಡಿಯಾ ಬೀಚ್ ಗೇಮ್ಸ್‌ನಲ್ಲಿ ಪಾಬಲ್ಯ ಮೆರೆದರು. ಶುಕ್ರವಾರ ನಡೆದ ಓಪನ್ ವಾಟರ್ ಸ್ವಿಮ್ಮಿಂಗ್‌ನ 10 ಕಿಲೋ ಮೀಟರ್ ಪುರುಷರ ಮತ್ತು ಮಹಿಳೆಯರ ವಿಭಾಗದಲ್ಲಿದ್ದ ಆರು ಪದಕಗಳ ಪೈಕಿ ನಾಲ್ಕನ್ನು ಬಾಚಿಕೊಂಡರು. ಇದರೊಂದಿಗೆ ಕರ್ನಾಟಕದ ಪದಕಗಳ ಸಂಖ್ಯೆ ಏಳಕ್ಕೆ ಏರಿಕೆಯಾಗಿದೆ.
ಅರಬ್ಬಿ ಸಮುದ್ರದಲ್ಲಿ ಏಳುತ್ತಿದ್ದ ಉಗ್ರ ಸ್ವರೂಪಿ ಅಲೆಗಳನ್ನು ಸೀಳಿಕೊಂಡು ಮುನ್ನುಗ್ಗಿದ ಬೆಂಗಳೂರಿನ 20 ವರ್ಷದ ಅಶ್ಮಿತಾ ಚಂದ್ರ ಅವರು ಮಹಿಳೆಯರ ವಿಭಾಗದಲ್ಲಿ ಚಿನ್ನದ ಪದಕಕ್ಕೆ ಮುತ್ತಿಕ್ಕಿದರು. ಎರಡನೇ ಆವೃತ್ತಿಯ ಕೂಟದಲ್ಲಿ ಕರ್ನಾಟಕಕ್ಕೆ ಲಭಿಸಿದ ಮೊದಲ ಸ್ವರ್ಣ ಇದಾಗಿದೆ. ಅಶ್ಮಿತಾ ಅವರು 2 ಗಂಟೆ 46.34 ನಿಮಿಷಗಳಲ್ಲಿ ಗುರಿ ತಲುಪಿದರು.
ಸಿಲಿಕಾನ್ ಸಿಟಿಯ ಮತ್ತೊಬ್ಬ ಪ್ರತಿಭೆ ಆಶ್ರಾ ಸುಧೀರ್ (2.47:57) ಬೆಳ್ಳಿ ಪದಕ ತಮ್ಮದಾಗಿಸಿಕೊಂಡರು. ಮೊದಲ ಆವೃತ್ತಿಯಲ್ಲಿ ಇದೇ ಸ್ಪರ್ಧೆಯಲ್ಲಿ ಕಂಚು ಗೆದ್ದಿದ್ದ 18 ವರ್ಷದ ಆಶ್ರಾ ಅವರು ಈ ಬಾರಿ ಪದಕದ ಬಣ್ಣವನ್ನು ಉತ್ತಮಪಡಿಸಿಕೊಂಡರು. ಕಂಚಿನ ಪದಕ ಮಹಾರಾಷ್ಟ್ರದ ದೀಕ್ಷಾ ಸಂದೀಪ್ ಯಾದವ್ (2.48:04) ಪಾಲಾಯಿತು. ಅಶ್ಮಿತಾ ಮತ್ತು ಆಶ್ರಾ ಅವರು ಶನಿವಾರ ನಡೆಯುವ 5 ಕಿ.ಮೀ. ಸ್ಪರ್ಧೆಯಲ್ಲೂ ಭಾಗವಹಿಸುತ್ತಿದ್ದು, ಪದಕ ಡಬಲ್ ಮಾಡುವ ಛಲದಲ್ಲಿದ್ದಾರೆ.
ಪುರುಷರ ವಿಭಾಗದಲ್ಲಿ ಬೆಂಗಳೂರಿನ ಉದಯೋನ್ಮುಖ ಈಜುಪಟುಗಳಾದ 15 ವರ್ಷದ ಅಕ್ಷಜ್ ಪಿ. (2.38:27) ಮತ್ತು 15 ವರ್ಷದ ಕನಿಷ್ಕ್ ಎಸ್.ಎ. (2.41:51) ಅವರು ಕ್ರಮವಾಗಿ ಬೆಳ್ಳಿ ಮತ್ತು ಕಂಚಿನ ಪದಕಗಳನ್ನು ಜಯಿಸಿದರು. ಉತ್ತರಪ್ರದೇಶದ ಅನುರಾಗ್ ಆರ್. ಸಿಂಗ್ (2.22.02) ಚಿನ್ನದ ಪದಕ ಗೆದ್ದರು.
‘ಸ್ಪರ್ಧೆಗೆ ಮುನ್ನದಿನ ಇದೇ ಬೀಚ್‌ನಲ್ಲಿ ರಾಜ್ಯದ ಈಜುಪಟುಗಳೊಂದಿಗೆ ತಾಲೀಮು ಮಾಡಿದ್ದೆ. ಆ ಸಂದರ್ಭದಲ್ಲಿ ಅಲೆಗಳು ಸಣ್ಣ ಪ್ರಮಾಣದಲ್ಲಿತ್ತು. ಆದರೆ, ಸ್ಪರ್ಧೆಯ ವೇಳೆ ಬೃಹತ್ ಗಾತ್ರದ ಅಲೆಗಳು ಎದುರಾಗಿದ್ದರಿಂದ ಅದರ ವಿರುದ್ಧ ಈಜುವುದು ಸವಾಲಾಯಿತು. ರಾಜ್ಯವನ್ನು ಪ್ರತಿನಿಧಿಸಿ ಚಿನ್ನ ಗೆದ್ದಿರುವುದು ಖುಷಿ ತಂದಿದೆ. ಮುಂದಿನ ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯುವುದು ನನ್ನ ಗುರಿ’ ಎಂದು ಜೈನ್ ವಿ.ವಿಯಲ್ಲಿ ದ್ವಿತೀಯ ವರ್ಷದ ಬಿಎ ವ್ಯಾಸಂಗ ಮಾಡುತ್ತಿರುವ ಅಶ್ಮಿತಾ ಹೇಳಿದರು.
ಅಶ್ಮಿತಾ ಅವರು ಇನ್‌ಸ್ಪೈರ್ ಇನ್‌ಸ್ಟಿಟ್ಯೂಟ್‌ನಲ್ಲಿ ಮತ್ತು ಆಶ್ರಾ, ಅಕ್ಷಜ್, ಕನಿಷ್ಕ್ ಅವರು ಬಸವನಗುಡಿ ಈಜು ಕೇಂದ್ರದಲ್ಲಿ ತರಬೇತಿ ಪಡೆಯುತ್ತಿದ್ದಾರೆ.
ಸಾಕರ್ ತಂಡಕ್ಕೆ ಕಂಚು: ಕರ್ನಾಟಕದ ಪುರುಷರ ಬೀಚ್ ಸಾಕರ್ (ಬೀಚ್ ಫುಟ್‌ಬಾಲ್) ತಂಡವು ಕಂಚಿನ ಪದಕದೊಂದಿಗೆ ಅಭಿಯಾನವನ್ನು ಮುಗಿಸಿತು. ರಾಜ್ಯ ತಂಡವು ಸೆಮಿಫೈನಲ್‌ನಲ್ಲಿ 3–4ರಿಂದ ಗೋವಾ ತಂಡಕ್ಕೆ ಮಣಿಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.