
ದಿಯು: ಛಲಬಿಡದೆ ಹೋರಾಟ ಪ್ರದರ್ಶಿಸಿದ ಕರ್ನಾಟಕದ ಪುರುಷರ ತಂಡವು ಗುರುವಾರ ಎರಡನೇ ಆವೃತ್ತಿಯ ಖೇಲೊ ಇಂಡಿಯಾ ಬೀಚ್ ಗೇಮ್ಸ್‌ನ ಪೆಂಕಾಕ್ ಸಿಲಾಟ್‌ನಲ್ಲಿ ಕಂಚಿನ ಪದಕದೊಂದಿಗೆ ಅಭಿಯಾನ ಮುಗಿಸಿತು. ಬೀಚ್ ಸಾಕರ್‌ನಲ್ಲಿ ರಾಜ್ಯದ ಪುರುಷರು ಸೆಮಿಫೈನಲ್ ಪ್ರವೇಶಿಸುವ ಮೂಲಕ ಕನಿಷ್ಠ ಕಂಚನ್ನು ಖಚಿತಪಡಿಸಿಕೊಂಡರು.
ಇಲ್ಲಿನ ಘೋಘ್ಲಾ ಕಡಲ ತೀರದಲ್ಲಿ ನಡೆಯುತ್ತಿರುವ ಕೂಟದಲ್ಲಿ ಕರ್ನಾಟಕ ಎರಡನೇ ಪದಕ ಗೆದ್ದುಕೊಂಡಿತು. ಇದರೊಂದಿಗೆ ಪದಕ ಪಟ್ಟಿಯಲ್ಲಿ 17ನೇ ಸ್ಥಾನದಲ್ಲಿದೆ. ತಮಿಳುನಾಡು (2 ಚಿನ್ನ, 2 ಬೆಳ್ಳಿ, 3 ಕಂಚು), ಆತಿಥೇಯ ದಿಯು ದಾಮನ್ (ಚಿನ್ನ, ಬೆಳ್ಳಿ, ಕಂಚು ತಲಾ 2) ಕ್ರಮವಾಗಿ ಮೊದಲೆರಡು ಸ್ಥಾನದಲ್ಲಿವೆ.
ಕೊಪ್ಪಳ ಜಿಲ್ಲೆಯ ಆಕಾಶ್ ದೊಡ್ಡವಾಳ, ಮನೋಜ್ ಕುಮಾರ್ ಎ.ಪಿ. ಮತ್ತು ಬೆಂಗಳೂರಿನ ಹರ್ಷಿತ್ ಎ. ಅವರನ್ನು ಒಳಗೊಂಡ ರೆಗು (ಮೂವರು ಆರ್ಟಿಸ್ಟಿಕ್) ತಂಡವು ಸೆಮಿಫೈನಲ್‌ನಲ್ಲಿ ಕೇವಲ ಒಂದು (570–571) ಅಂಕಗಳಿಂದ ಸೋತು, ಪ್ರಶಸ್ತಿ ಸುತ್ತಿನ ಅವಕಾಶವನ್ನು ತಪ್ಪಿಸಿಕೊಂಡಿತು. ಈ ವಿಭಾಗದ ಸ್ಪರ್ಧೆಯಲ್ಲಿ ಸೆಮಿಫೈನಲ್ ಸೋತ ಎರಡೂ ತಂಡಗಳಿಗೆ ಕಂಚಿನ ಪದಕ ಲಭಿಸುತ್ತದೆ. ತಮಿಳುನಾಡು ಚಿನ್ನ ಗೆದ್ದರೆ, ಮಹಾರಾಷ್ಟ್ರ ಬೆಳ್ಳಿ ಪದಕ ತನ್ನದಾಗಿಸಿಕೊಂಡಿತು. ಮತ್ತೊಂದು ಕಂಚು ಒಡಿಶಾ ತಂಡದ ಪಾಲಾಯಿತು.
27 ವರ್ಷದ ಆಕಾಶ್ ಎಂಬಿಎ ಪದವೀಧರನಾಗಿದ್ದು, ಪ್ರಸ್ತುತ ಇದೇ ಕ್ರೀಡೆಯ ಕೋಚಿಂಗ್‌ನಲ್ಲಿ ತೊಡಗಿಸಿಕೊಂಡಿದ್ದಾರೆ. ಅಖಿಲ ಭಾರತ ವಿ.ವಿ ಕ್ರೀಡಾಕೂಟದಲ್ಲಿ ಏಳು ಪದಕ, ಫೆಡರೇಷನ್ ಕಪ್‌ನಲ್ಲಿ ಚಿನ್ನ ಗೆದ್ದಿರುವ ಅವರು 2022ರಲ್ಲಿ ಮಲೇಷ್ಯಾದಲ್ಲಿ ನಡೆದ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಭಾರತವನ್ನು ಪ್ರತಿನಿಧಿಸಿದ್ದರು.
26 ವರ್ಷದ ಮನೋಜ್ ಅವರೂ ಎಂಬಿಎ ಪದವೀಧರನಾಗಿದ್ದು, ಅವರೂ ಇದೇ ಕ್ರೀಡೆಯ ಕೋಚಿಂಗ್‌ನಲ್ಲಿ ನಿರತರಾಗಿದ್ದಾರೆ. ಫೆಡರೇಷನ್ ಕಪ್‌ನಲ್ಲಿ ಚಿನ್ನ ಗೆದ್ದಿರುವ ಅವರು ಅಖಿಲ ಭಾರತ ವಿವಿ ಗೇಮ್ಸ್‌ನಲ್ಲಿ ಮೂರು ಪದಕ ಜಯಿಸಿದ್ದಾರೆ. 27 ವರ್ಷದ ಹರ್ಷಿತ್ ಬಿ.ಟೆಕ್ ಪದವೀಧರನಾಗಿದ್ದು, ಸ್ವಾಫ್ಟ್‌ವೇರ್ ಉದ್ಯೋಗ ಬಿಟ್ಟು ಪ್ರಸ್ತುತ ಮಾರ್ಷಲ್ ಆರ್ಟ್ಸ್ ಕೋಚಿಂಗ್ ನೀಡುತ್ತಿದ್ದಾರೆ. ಅವರು ಫೆಡರೇಷನ್ ಕಪ್‌ನಲ್ಲಿ ಕಂಚು ಮತ್ತು ಅಖಿಲ ಭಾರತ ವಿವಿ ಗೇಮ್ಸ್‌ನಲ್ಲಿ ಬೆಳ್ಳಿ ಪದಕ ಗೆದ್ದಿದ್ದಾರೆ.
ಸೆಮಿಗೆ ಕರ್ನಾಟಕ: ರಾಜ್ಯ ಪುರುಷರ ತಂಡವು ಬೀಚ್ ಸಾಕರ್‌ನ (ಬೀಚ್ ಫುಟ್‌ಬಾಲ್) ಗುಂಪು ಹಂತದ ತನ್ನ ಕೊನೆಯ ಪಂದ್ಯದಲ್ಲಿ ಪೆನಾಲ್ಟಿ ಶೂಟೌಟ್ ಮೂಲಕ 3–1ರಿಂದ ದಿಯು ದಾಮನ್ ತಂಡವನ್ನು ಮಣಿಸಿ ನಾಲ್ಕರ ಘಟ್ಟ ಪ್ರವೇಶಿಸಿತು. ನಿಗದಿತ ಅವಧಿಯ ಪಂದ್ಯವು 4–4 ಗೋಲುಗಳಿಂದ ಸಮಬಲಗೊಂಡಿತ್ತು. ಶುಕ್ರವಾರ ನಡೆಯುವ ಸೆಮಿಫೈನಲ್‌ನಲ್ಲಿ ಗೋವಾ ತಂಡವನ್ನು ಎದುರಿಸಲಿದೆ.
ಸಿಗದ ಪ್ರೋತ್ಸಾಹ: ಕ್ರೀಡಾಪಟುಗಳ ಅಳಲು
‘ರಾಷ್ಟ್ರ ಮಟ್ಟದ ಸ್ಪರ್ಧೆಗಳಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿ ಹಲವು ಪದಕಗಳನ್ನು ಗೆದ್ದಿದ್ದೇವೆ. ಆದರೆ ಪೆಂಕಾಕ್ ಸಿಲಾಟ್ ಕ್ರೀಡಾಪಟುಗಳಿಗೆ ನಮ್ಮ ರಾಜ್ಯದಲ್ಲಿ ಸೂಕ್ತ ಪ್ರೋತ್ಸಾಹ ಸಿಗುತ್ತಿಲ್ಲ’ ಎಂದು ಕಂಚಿನ ಪದಕ ಗೆದ್ದ ತಂಡದ ಸದಸ್ಯ ಆಕಾಶ್ ದೊಡ್ಡವಾಳ ಬೇಸರ ವ್ಯಕ್ತಪಡಿಸಿದರು. ‘ಚಿನ್ನ ಗೆಲ್ಲುವ ಗುರಿಯಿಂದಲೇ ಇಲ್ಲಿ ಕಣಕ್ಕೆ ಇಳಿದಿದ್ದೆವು. ನಮಗೂ ಸೂಕ್ತ ರೀತಿಯ ತರಬೇತಿ ಸಿಗುತ್ತಿದ್ದರೆ ಖಂಡಿತವಾಗಿಯೂ ಸ್ವರ್ಣ ಪದಕ ಜಯಿಸುತ್ತಿದ್ದೆವು. ರಾಜ್ಯ ಸರ್ಕಾರದಿಂದ ನೆರವು ದೊರೆತರೆ ದಿಯುನಲ್ಲೇ ನಡೆಯುವ ಮೂರನೇ ಆವೃತ್ತಿಯಲ್ಲಿ ಚಿನ್ನ ಗೆದ್ದು ತರುತ್ತೇವೆ’ ಎಂದು ಅವರು ಹೇಳಿದರು. ‘ರಾಜ್ಯದಲ್ಲಿ 800ಕ್ಕೂ ಅಧಿಕ ಪೆಂಕಾಕ್ ಸಿಲಾಟ್ ಕ್ರೀಡಾಪಟುಗಳು ಇದ್ದಾರೆ. ಇತರ ರಾಜ್ಯಗಳಲ್ಲಿ ಇದೇ ಕ್ರೀಡೆಯಲ್ಲಿ ಸಾಧನೆ ಮಾಡಿದ ಕ್ರೀಡಾಪಟುಗಳಿಗೆ ವಿವಿಧ ಇಲಾಖೆಗಳಲ್ಲಿ ಕ್ರೀಡಾ ಕೋಟಾದ ಅಡಿಯಲ್ಲಿ ಉದ್ಯೋಗ ದೊರಕಿದೆ. ಆದರೆ ನಮ್ಮಲ್ಲಿ ಯಾರಿಗೂ ಉದ್ಯೋಗ ಸಿಗದಿರುವುದು ಆತ್ಮವಿಶ್ವಾಸ ಕುಗ್ಗಿಸಿದೆ’ ಎಂದು ಅಳಲು ತೋಡಿಕೊಂಡರು.
‘ಭಾರತ ಪೆಂಕಾಕ್ ಸಿಲಾಟ್ ಒಕ್ಕೂಟದ ಕೇಂದ್ರ ಕಚೇರಿ ನಮ್ಮ ರಾಜ್ಯದಲ್ಲೇ ಇದೆ. ಇದೇ ಒಕ್ಕೂಟದ ಅಧೀನದಲ್ಲಿ 20ಕ್ಕೂ ಅಧಿಕ ರಾಜ್ಯ ಸಂಸ್ಥೆಗಳು ಕಾರ್ಯ ನಿರ್ವಹಿಸುತ್ತಿವೆ. ಕರ್ನಾಟಕ ಹೊರತುಪಡಿಸಿ ಉಳಿದ ರಾಜ್ಯಗಳಲ್ಲಿ ಸಂಸ್ಥೆಗಳಿಗೆ ಅಲ್ಲಿನ ಕ್ರೀಡಾ ಪಾಧಿಕಾರಗಳಿಂದ ಮಾನ್ಯತೆ ಲಭಿಸಿದೆ. ಆದರೆ ಕರ್ನಾಟಕದಲ್ಲಿ ಮಾನ್ಯತೆ ಸಿಗದಿರುವುರಿಂದ ಕ್ರೀಡಾಪಟುಗಳಿಗೆ ಸೌಲಭ್ಯ ಪಡೆಯಲು ಅಡಚಣೆಯಾಗಿದೆ’ ಎಂದು ಪೆಂಕಾಕ್ ಸಿಲಾಟ್‌ನ ತಾಂತ್ರಿಕ ನಿರ್ದೇಶಕ ಒಕ್ಕೂಟದ ಸ್ಥಾಪಕ ಸದಸ್ಯರೂ ಆಗಿರುವ ಅಬ್ದುಲ್ ರಜಾಕ್ ಅಸಮಾಧಾನ ಹೊರಹಾಕಿದರು. ಪ್ರಾಧಿಕಾರದ ಗಮನಕ್ಕೆ ತರುತ್ತೇನೆ: ‘ರಾಜ್ಯದಲ್ಲಿರುವ ಯಾವುದೇ ಕ್ರೀಡಾ ಸಂಸ್ಥೆಗಳಿಗೆ ಕರ್ನಾಟಕ ಕ್ರೀಡಾ ಪಾಧಿಕಾರ ಮಾನ್ಯತೆ ನೀಡುತ್ತದೆ. ರಾಜ್ಯ ಪೆಂಕಾಕ್ ಸಿಲಾಟ್ ಸಂಸ್ಥೆಗೆ ಮಾನ್ಯತೆ ನೀಡುವ ಕುರಿತು ಪ್ರಾಧಿಕಾರದ ಮುಂದಿನ ಸಭೆಯಲ್ಲಿ ನಾನೇ ಗಮನ ಸೆಳೆಯುತ್ತೇನೆ. ಆ ಸಂಸ್ಥೆಯ ಬಗ್ಗೆ ಅಧ್ಯಯನ ನಡೆಸಿ ಸಭೆಯು ಅಂತಿಮ ನಿರ್ಧಾರ ತೆಗೆದುಕೊಳ್ಳಲಿದೆ’ ಎಂದು ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಆಯುಕ್ತ ಚೇತನ್ ಆರ್. ಅವರು ಪ್ರಜಾವಾಣಿಗೆ ಪ್ರತಿಕ್ರಿಯಿಸಿದರು.
‘ಖೇಲೊ ಇಂಡಿಯಾ ಕೂಟದಲ್ಲಿ ರಾಜ್ಯವನ್ನು ಪ್ರತಿನಿಧಿಸಿ ಪದಕ ಗೆದ್ದಿರುವುದು ಹೆಮ್ಮೆಯ ವಿಷಯ. ಸಾಧಕ ಕ್ರೀಡಾಪಟುಗಳಿಗೆ ನಗದು ಬಹುಮಾನ ಇತರ ಸೌಲಭ್ಯಗಳು ಸರ್ಕಾರದಿಂದ ಖಂಡಿತವಾಗಿಯೂ ಸಿಗಲಿದೆ. ಅವರಿಗೆ ಕ್ರೀಡಾ ಮೀಸಲಾತಿಯಲ್ಲಿ ಉದ್ಯೋಗ ಕಲ್ಪಿಸುವ ಕುರಿತು ಪ್ರಾಧಿಕಾರದ ಸಭೆಯಲ್ಲಿ ಚರ್ಚಿಸಲಾಗುವುದು. ಸಂಸ್ಥೆಯ ಮಾನ್ಯತೆಗೂ ಕ್ರೀಡಾಪಟುಗಳ ಸೌಲಭ್ಯಕ್ಕೂ ಸಂಬಂಧವಿಲ್ಲ’ ಎಂದು ಅವರು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.