
ನವದೆಹಲಿ: ಎರಡನೇ ಆವೃತ್ತಿಯ ಖೇಲೊ ಇಂಡಿಯಾ ಬೀಚ್ ಗೇಮ್ಸ್ ಜನವರಿ 5ರಿಂದ 10ರವರೆಗೆ ಡಿಯುವಿನ ಬ್ಲೂ ಫ್ಲ್ಯಾಗ್ ಘೋಘ್ಲಾ ಬೀಚ್‌ನಲ್ಲಿ ನಡೆಯಲಿದೆ ಎಂದು ಕ್ರೀಡಾ ಸಚಿವ ಮನ್ಸುಖ್ ಮಾಂಡವೀಯಾ ಶುಕ್ರವಾರ ತಿಳಿಸಿದ್ದಾರೆ.
ಈ ಕ್ರೀಡಾಕೂಟದ ಮೂಲಕ ಖೇಲೊ ಇಂಡಿಯಾ ವಾರ್ಷಿಕ ಸ್ಪರ್ಧಾತ್ಮಕ ಕ್ಯಾಲೆಂಡರ್‌ಗೆ ಔಪಚಾರಿಕ ಚಾಲನೆ ಸಿಗಲಿದೆ. ವಿವಿಧ ರಾಜ್ಯಗಳಿಂದ ಮತ್ತು ಕೇಂದ್ರಾಡಳಿತ ಪ್ರದೇಶಗಳಿಂದ 800ಕ್ಕೂ ಹೆಚ್ಚು ಕ್ರೀಡಾಪಟುಗಳು ಭಾಗವಹಿಸುವ ನಿರೀಕ್ಷೆಯಿದೆ. 250ಕ್ಕೂ ಹೆಚ್ಚು ಸಹಾಯಕ ಸಿಬ್ಬಂದಿ, 200ಕ್ಕೂ ಹೆಚ್ಚು ತಾಂತ್ರಿಕ ಅಧಿಕಾರಿಗಳು ಕೂಟಕ್ಕೆ ಸಹಕಾರ ನೀಡುವರು ಎಂದು ಮಾಂಡವೀಯಾ ಇಲ್ಲಿ ನಡೆದ ಸಂವಾದದಲ್ಲಿ ಹೇಳಿದ್ದಾರೆ.
ಕೂಟದಲ್ಲಿ ಬೀಚ್ ಸಾಕರ್, ಬೀಚ್ ವಾಲಿಬಾಲ್, ಬೀಚ್ ಸೆಪಕ್ ಟಕ್ರಾ, ಬೀಚ್ ಕಬಡ್ಡಿ, ಪೆಂಕಾಕ್ ಸಿಲಾಟ್ ಮತ್ತು ಓಪನ್ ವಾಟರ್ ಸ್ವಿಮ್ಮಿಂಗ್ ಸ್ಪರ್ಧೆಗಳ ಜೊತೆಗೆ ಪ್ರದರ್ಶನ ಕ್ರೀಡೆಗಳಾದ ಮಲ್ಲಕಂಬ ಮತ್ತು ಹಗ್ಗಜಗ್ಗಾಟ ಪಂದ್ಯಾಟ ಇರಲಿದೆ.
21ರಂದು ವಾರ್ಷಿಕೋತ್ಸವ: ‘ಫಿಟ್ ಇಂಡಿಯಾ’ಗಾಗಿ ಭಾನುವಾರದ ಬೈಸಿಕಲ್ ಅಭಿಯಾನದ ಮೊದಲ ವಾರ್ಷಿಕೋತ್ಸವವು ಇದೇ 21ರಂದು ಪುದುಚೇರಿಯಲ್ಲಿ ನಡೆಯಲಿದೆ. ಕಾರ್ಗಿಲ್‌ನಿಂದ ಕನ್ಯಾಕುಮಾರಿ ಮತ್ತು ಕೊಕ್ರಜಾರ್‌ನಿಂದ ರಾಜನಂದಗಾಂವ್‌ವರೆಗಿನ ಸ್ಥಳಗಳನ್ನು ಒಳಗೊಂಡಂತೆ ಒಂದು ವರ್ಷದಲ್ಲಿ 50ಕ್ಕೂ ಹೆಚ್ಚು ಆವೃತ್ತಿಗಳಲ್ಲಿ ಅಭಿಯಾನ ನಡೆದಿವೆ.
ಕಾರ್ಯಕ್ರಮದಲ್ಲಿ ಮಾಂಡವೀಯಾ ಅವರೊಂದಿಗೆ ಖೇಲ್ ರತ್ನ ಪ್ರಶಸ್ತಿ ಪುರಸ್ಕೃತ ದಿಗ್ಗಜ ಹಾಕಿ ಗೋಲ್‌ಕೀಪರ್ ಪಿ.ಆರ್. ಶ್ರೀಜೇಶ್, ಟೇಬಲ್ ಟೆನಿಸ್ ಆಟಗಾರ ಶರತ್ ಕಮಲ್ ಮತ್ತು ವಿಶ್ವಕಪ್ ಕಂಚು ವಿಜೇತ ಜೂನಿಯರ್ ಪುರುಷರ ಹಾಕಿ ತಂಡದ ಆಟಗಾರರು ಭಾಗವಹಿಸಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.