ಪ್ಯಾರಿಸ್: ಭಾರತದ ಲಕ್ಷ್ಯ ಸೇನ್ ಅವರು ಮಂಗಳವಾರ ಆರಂಭಗೊಂಡ ಫ್ರೆಂಚ್ ಓಪನ್ ಸೂಪರ್ 750 ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಮೊದಲ ಸುತ್ತಿನಲ್ಲಿ ಹೊರಬಿದ್ದರು.
24 ವರ್ಷದ ಸೇನ್, ಪುರುಷರ ಸಿಂಗಲ್ಸ್‌ನ 32ರ ಘಟ್ಟದ ಪಂದ್ಯದಲ್ಲಿ 7-21, 16-21ರಿಂದ ಐರ್ಲೆಂಡ್‌ನ ಐರ್ಲೆಂಡ್‌ನ ನ್ಹಾಟ್ ನುಯೆನ್ ವಿರುದ್ಧ ಹೆಚ್ಚಿನ ಪ್ರತಿರೋಧ ತೋರದೆ ಸೋಲುಂಡರು.
ಕಳೆದ ತಿಂಗಳು ಹಾಂಗ್‌ಕಾಂಗ್ ಓಪನ್‌ನಲ್ಲಿ ಫೈನಲ್ ತಲುಪಿದ್ದ ಸೇನ್ ಇಲ್ಲಿ ಲಯ ಕಂಡುಕೊಳ್ಳಲು ಪರದಾಡಿದರು. ವಿಶ್ವದ 16ನೇ ಕ್ರಮಾಂಕದ ಅವರು, 29ನೇ ರ‍್ಯಾಂಕ್‌ನ ನುಯೆನ್ ಅವರಿಗೆ ಯಾವುದೇ ಹಂತದಲ್ಲಿ ಸರಿಸಾಟಿಯಾಗಲಿಲ್ಲ.
ಅಲ್ಮೋರಾದ ಈ ಆಟಗಾರ ಕಳೆದ ವಾರ ಡೆನ್ಮಾರ್ಕ್ ಓಪನ್‌ನಲ್ಲಿ ಕಾರ್ಟರ್ ಫೈನಲ್ ಪ್ರವೇಶಿಸಿದ್ದರು. ಈ ಹಾದಿಯಲ್ಲಿ ಸೇನ್ ಅವರು ನುಯೆನ್ ಅವರನ್ನು ಮೂರು ಗೇಮ್‌ಗಳ ಹೋರಾಟದಲ್ಲಿ ಮಣಿಸಿದ್ದರು. ಆದರೆ, ಇಲ್ಲಿ ಐರ್ಲೆಂಡ್‌ನ ಆಟಗಾರ ಮುಯ್ಯಿ ತೀರಿಸಿಕೊಂಡರು.
ನುಯೆನ್ ಅವರ ನಿಖರ ಆಟದ ಮುಂದೆ ಮಂಕಾದ ಸೇನ್, ಪದೇ ಪದೇ ವೈಡ್ ಮತ್ತು ನೆಟ್‌ಗೆ ಹೊಡೆದು ಕೈಸುಟ್ಟುಕೊಂಡರು. ಮೊದಲ ಗೇಮ್ ಅನ್ನು ಸುಲಭವಾಗಿ ಕಳೆದುಕೊಂಡ ಅವರು, ಎರಡನೇ ಗೇಮ್‌ನಲ್ಲಿ ಕೊಂಚ ಹೋರಾಟ ತೋರಿದರು.
ಕರ್ನಾಟಕದ ಆಯುಷ್ ಶೆಟ್ಟಿ ಅವರು ಬುಧವಾರ ಜಪಾನ್‌ನ ಕೋಕಿ ವತಾನಬೆ ವಿರುದ್ಧ ಪುರುಷರ ಸಿಂಗಲ್ಸ್‌ನಲ್ಲಿ ಅಭಿಯಾನ ಆರಂಭಿಸಲಿದ್ದಾರೆ.
ಡಬಲ್ಸ್‌ನಲ್ಲಿ ಭಾರತದ ಅಗ್ರಮಾನ್ಯ ಜೋಡಿ ಸಾತ್ವಿಕ್ ಸಾಯಿರಾಜ್ ರಣಕಿರೆಡ್ಡಿ ಹಾಗೂ ಚಿರಾಗ್ ಶೆಟ್ಟಿ ಅವರು ಇಲ್ಲಿ ಮೂರನೇ ಬಾರಿ ಪ್ರಶಸ್ತಿ ಮೇಲೆ ಕಣ್ಣಿಟ್ಟಿದ್ದಾರೆ.
ಮಹಿಳೆಯರ ಸಿಂಗಲ್ಸ್‌ನಲ್ಲಿ ಅನ್ಮೋಲ್ ಖಾರ್ಬ್, ಅನುಪಮಾ ಉಪಾಧ್ಯಾಯ ಹಾಗೂ ಉನ್ನತಿ ಹೂಡ ಸ್ಪರ್ಧೆಯಲ್ಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.