ADVERTISEMENT

ಆಲ್‌ ಇಂಗ್ಲೆಂಡ್ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್: ಸೆಮಿಯಲ್ಲಿ ಮುಗ್ಗರಿಸಿದ ಸೇನ್‌

ಪಿಟಿಐ
Published 17 ಮಾರ್ಚ್ 2024, 14:58 IST
Last Updated 17 ಮಾರ್ಚ್ 2024, 14:58 IST
ಭಾರತದ ಲಕ್ಷ್ಯ ಸೇನ್‌
ಭಾರತದ ಲಕ್ಷ್ಯ ಸೇನ್‌   

ಬರ್ಮಿಂಗ್‌ಹ್ಯಾಮ್: ಭಾರತದ ಲಕ್ಷ್ಯ ಸೇನ್ ಅವರು ಆಲ್‌ ಇಂಗ್ಲೆಂಡ್ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್ ಪುರುಷರ ಸಿಂಗಲ್ಸ್‌ನ ಸೆಮಿಫೈನಲ್‌ನಲ್ಲಿ ಮುಗ್ಗರಿಸಿದರು. ಈ ಮೂಲಕ ಟೂರ್ನಿಯಲ್ಲಿ ಭಾರತ ಆಟಗಾರರ ಸವಾಲು ಅಂತ್ಯಗೊಂಡಿದೆ.

ಆಲ್‌ ಇಂಗ್ಲೆಂಡ್‌ ಚಾಂಪಿಯನ್‌ಷಿಪ್‌ನಲ್ಲಿ ಭಾರತವು 23 ವರ್ಷಗಳಿಂದ ಪ್ರಶಸ್ತಿ ಬರವನ್ನು ಎದುರಿಸುತ್ತಿದೆ. ಪ್ರಕಾಶ್ ಪಡುಕೋಣೆ (1980) ಮತ್ತು ಪುಲ್ಲೇಲ ಗೋಪಿಚಂದ್ (2001) ಅವರು ಮಾತ್ರ ಈ ಚಾಂಪಿಯನ್‌ಷಿಪ್‌ನಲ್ಲಿ ಸಿಂಗಲ್ಸ್‌ ಪ್ರಶಸ್ತಿ ವಿಜೇತರಾಗಿದ್ದಾರೆ. ಈ ಬಾರಿಯೂ ಭಾರತಕ್ಕೆ ಪ್ರಶಸ್ತಿ ಕನಸಾಗಿಯೇ ಉಳಿಯಿತು.

ಶನಿವಾರ ತಡರಾತ್ರಿ ನಡೆದ ಅಂತಿಮ ನಾಲ್ಕರ ಘಟ್ಟದ ಹಣಾಹಣಿಯಲ್ಲಿ ವಿಶ್ವ ರ‍್ಯಾಂಕಿಂಗ್‌ನಲ್ಲಿ 18ನೇ ಸ್ಥಾನದಲ್ಲಿರುವ 22 ವರ್ಷದ ಸೇನ್‌ 21-12, 10-21, 15-21ರಿಂದ ಇಂಡೊನೇಷ್ಯಾದ ಜೊನಾಥನ್ ಕ್ರಿಸ್ಟಿ ಅವರಿಗೆ ಶರಣಾದರು.

ADVERTISEMENT

68 ನಿಮಿಷ ನಡೆದ ಹೋರಾಟದಲ್ಲಿ ಕಾಮನ್‌ವೆಲ್ತ್‌ ಗೇಮ್ಸ್‌ ಚಾಂಪಿಯನ್‌ ಸೇನ್‌ ಅವರು ನಿಖರ ಆಟದ ಮೂಲಕ ಮೊದಲ ಗೇಮ್‌ನಲ್ಲಿ ಮೇಲುಗೈ ಸಾಧಿಸಿದರು. ಎರಡನೇ ಗೇಮ್‌ನಲ್ಲಿ ತಿರುಗೇಟು ನೀಡಿದ ವಿಶ್ವದ 9ನೇ ರ‍್ಯಾಂಕ್‌ನ ಆಟಗಾರ ಕ್ರಿಸ್ಟಿ ಅವರು ಸ್ಕೋರ್‌ ಸಮಬಲಗೊಳಿಸಿದರು.

ನಿರ್ಣಾಯಕ ಗೇಮ್‌ ಆರಂಭ ರೋಚಕವಾಗಿತ್ತು. ‌3–3, 7–7ರ ಸಮಬಲದೊಂದಿಗೆ ಸಾಗಿದ ಹೋರಾಟದಲ್ಲಿ ಆಕರ್ಷಕ ಕ್ರಾಸ್ ಡ್ರಾಪ್, ಜಂಪ್ ಸ್ಮ್ಯಾಷ್‌ಗಳ ಮೂಲಕ ಮುನ್ನಡೆ ಪಡೆದ ಕ್ರಿಸ್ಟಿ ಫೈನಲ್‌ಗೆ ಲಗ್ಗೆ ಹಾಕಿದರು. ಅವರು ಫೈನಲ್‌ನಲ್ಲಿ ಸ್ವದೇಶದ ಆ್ಯಂಟನಿ ಸಿನಿಸುಕ್ ಗಿಂಟಿಂಗ್ ಅವರನ್ನು ಎದುರಿಸುವರು.

‘ಪಂದ್ಯವನ್ನು ಗೆಲ್ಲುವ ಅವಕಾಶ ಇತ್ತು. ಆದರೆ, ನನ್ನ ಕೆಲವೊಂದು ತಪ್ಪುಗಳು ದುಬಾರಿಯಾದವು. ಈ ಫಲಿತಾಂಶದಿಂದ ತುಂಬಾ ನಿರಾಸೆಯಾಗಿದೆ. ನನಗೆ ಸಾಮಾಜಿಕ ಮಾಧ್ಯಮದಲ್ಲಿ ಸಾಕಷ್ಟು ಬೆಂಬಲ ದೊರಕಿದ್ದು, ಅವರ ನಿರೀಕ್ಷೆಯ ಮಟ್ಟ ತಲುಪಲು ಸಾಧ್ಯವಾಗಲಿಲ್ಲ’ ಎಂದು ಪಂದ್ಯದ ಬಳಿಕ ಸೇನ್‌ ಪ್ರತಿಕ್ರಿಯಿಸಿದರು.

ಉತ್ತಮ ಲಯದಲ್ಲಿರುವ ಸೇನ್‌ ಕಳೆದ ವಾರ ಫ್ರೆಂಚ್ ಓಪನ್ ಸೂಪರ್ 750 ಟೂರ್ನಿಯಲ್ಲೂ ಸೆಮಿಫೈನಲ್‌ ಪ್ರವೇಶಿಸಿದ್ದರು. ಇಲ್ಲಿ 2022ರ ಆವೃತ್ತಿಯಲ್ಲಿ ರನ್ನರ್ಸ್‌ ಆಪ್‌ ಆಗಿದ್ದ ಅವರು, ಈ ಬಾರಿ ಸೆಮಿಫೈನಲ್‌ ಹಂತದ ಓಟದಲ್ಲಿ ತನಗಿಂತ ಮೇಲಿನ ಕ್ರಮಾಂಕದ ಆಟಗಾರರಿಗೆ ಆಘಾತ ನೀಡಿದ್ದರು.

ಸತತ ಎರಡು ಟೂರ್ನಿಗಳಲ್ಲಿ ಅಂತಿಮ ನಾಲ್ಕರ ಘಟ್ಟ ಪ್ರವೇಶಿಸಿದ್ದ ಸೇನ್‌ ಏಪ್ರಿಲ್‌ ಅಂತ್ಯದ ವೇಳೆ ಪ್ರಕಟವಾಗುವ ಬಿಡಬ್ಲ್ಯೂಎಫ್‌ ರ‍್ಯಾಂಕಿಂಗ್‌ನಲ್ಲಿ ಬಡ್ತಿ ಪಡೆಯಲಿದ್ದಾರೆ. ಹೀಗಾಗಿ, ಮುಂದಿನ ಪ್ಯಾರಿಸ್‌ ಒಲಿಂಪಿಕ್ಸ್‌ ಟಿಕೆಟ್‌ ದೊರೆಯುವ ಸಾಧ್ಯತೆ ಹೆಚ್ಚಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.