ನವದೆಹಲಿ : ಸ್ಕ್ವ್ಯಾಷ್ ಕ್ರೀಡೆಯ ದಂತಕತೆ, ಅರ್ಜುನ ಪ್ರಶಸ್ತಿ ಪುರಸ್ಕೃತ ರಾಜ್ ಮನಚಂದಾ (79) ಅವರು ಇಲ್ಲಿ ಭಾನುವಾರ ನಿಧನರಾದರು ಎಂದು ಕುಟುಂಬದ ಮೂಲಗಳು ತಿಳಿಸಿವೆ.
1977ರಿಂದ 1982ರವರೆಗೆ ಸತತವಾಗಿ ರಾಷ್ಟ್ರೀಯ ಚಾಂಪಿಯನ್ ಆಗಿದ್ದ ಅವರು, ಸರ್ವಿಸಸ್‌ಗಾಗಿ 11 ಪ್ರಶಸ್ತಿ ಜಯಿಸಿದ್ದರು. ಭಾರತದ ಸ್ಕ್ವಾಷ್ ಕ್ರೀಡೆಯ ಇತಿಹಾಸದಲ್ಲಿ ಗುರುತಿಸಬಹುದಾದ ದಿಗ್ಗಜ ಆಟಗಾರರಲ್ಲಿ ಅವರೂ ಪ್ರಮುಖರಾಗಿದ್ದಾರೆ.
ಏಷ್ಯನ್ ಚಾಂಪಿಯನ್‌ಷಿಪ್‌ಗಳು ಮತ್ತು ವಿಶ್ವಮಟ್ಟದ ಟೂರ್ನಿಗಳಲ್ಲಿ ಭಾರತವನ್ನು ಪ್ರತಿನಿಧಿಸಿದ್ದ ಹಿರಿಮೆ ಅವರದು. 33ನೇ ವಯಸ್ಸಿನಲ್ಲಿ ಅವರು ಮೊದಲ ರಾಷ್ಟ್ರೀಯ ಪ್ರಶಸ್ತಿ ಗೆದ್ದಿದ್ದರು. 1983ರಲ್ಲಿ ಅವರಿಗೆ ಅರ್ಜುನ ಪ್ರಶಸ್ತಿ ಸಂದಿದೆ.
1981ರಲ್ಲಿ ಕರಾಚಿಯಲ್ಲಿ ನಡೆದ ಏಷ್ಯನ್ ಟೀಮ್ ಚಾಂಪಿಯನ್‌ಷಿಪ್‌ನಲ್ಲಿ ಬೆಳ್ಳಿ ಗೆದ್ದ ಭಾರತ ತಂಡವನ್ನು ಅವರು ಮುನ್ನಡೆಸಿದ್ದರು. 1984ರಲ್ಲಿ ಜೋರ್ಡಾನ್‌ನಲ್ಲಿ ನಡೆದ ಏಷ್ಯನ್ ಚಾಂಪಿಯನ್‌ಷಿಪ್‌ನಲ್ಲಿ ನಾಲ್ಕನೇ ಸ್ಥಾನವನ್ನು ಗಳಿಸಿದ್ದು ಅವರ ಅತ್ಯುತ್ತಮ ವೈಯಕ್ತಿಕ ಪ್ರದರ್ಶನವಾಗಿದೆ. ಅಲ್ಲಿ ಅವರ ನೇತೃತ್ವದ ಭಾರತ ತಂಡವು ಕಂಚಿನ ಪದಕ ಗೆದ್ದುಕೊಂಡಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.