ADVERTISEMENT

Malaysia Masters: ಪ್ರಣಯ್, ಕರುಣಾಕರನ್‌ಗೆ ಅಚ್ಚರಿಯ ಜಯ

ಮಲೇಷ್ಯಾ ಮಾಸ್ಟರ್ಸ್‌: ಮುಂದುವರಿದ ಸಿಂಧು ನಿರಾಶಾದಾಯಕ ಓಟ

ಪಿಟಿಐ
Published 21 ಮೇ 2025, 12:16 IST
Last Updated 21 ಮೇ 2025, 12:16 IST
ಎಚ್‌.ಎಸ್‌.ಪ್ರಣಯ್
ಎಚ್‌.ಎಸ್‌.ಪ್ರಣಯ್   

ಕ್ವಾಲಾಲಂಪುರ: ಅನುಭವಿ ಎಚ್‌.ಎಸ್‌.ಪ್ರಣಯ್‌, ಕಿದಂಬಿ ಶ್ರೀಕಾಂತ್‌ ನೇತೃತ್ವದಲ್ಲಿ ಭಾರತದ ಪುರುಷ ಷಟ್ಲರ್‌ಗಳು ಮಲೇಷ್ಯಾ ಮಾಸ್ಟರ್ಸ್‌ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಬುಧವಾರ ಅಮೋಘ ಆರಂಭ ಮಾಡಿದರು. ಆದರೆ ಮಹಿಳೆಯರ ವಿಭಾಗದಲ್ಲಿ ಪ್ರಮುಖ ಆಟಗಾರ್ತಿ ಪಿ.ವಿ. ಸಿಂಧು ಮೊದಲ ಸುತ್ತಿನಲ್ಲೇ ಎಡವಿದರು.

ಪ್ರಣಯ್‌, ಶ್ರೀಕಾಂತ್ ಜೊತೆಗೆ ಸತೀಶ್ ಕರುಣಾಕರನ್ ಕೂಡ ಸಿಂಗಲ್ಸ್‌ ವಿಭಾಗದ ಎರಡನೇ ಸುತ್ತಿಗೆ ಮುನ್ನಡೆದರು. ಮೊದಲು ಕಣಕ್ಕಿಳಿದ ಪ್ರಣಯ್‌ 19–21, 21–17, 21–16 ರಿಂದ ಐದನೇ ಶ್ರೇಯಾಂಕದ ಆಟಗಾರ ಕೆಂಟಾ ನಿಶಿಮೊಟೊ (ಜಪಾನ್‌) ಅವರನ್ನು ಆಘಾತ ನೀಡಿದರು. ಭಾರತದ ಆಟಗಾರ ಮುಂದಿನ ಸುತ್ತಿನಲ್ಲಿ ಜಪಾನ್‌ನ ಇನ್ನೊಬ್ಬ ಆಟಗಾರ ಯುಶಿ ತನಾಕ ಅವರನ್ನು ಎದುರಿಸಲಿದ್ದಾರೆ.

ಕರುಣಾಕರನ್ ಕೂಡ ಮೊದಲ ಸುತ್ತಿನಲ್ಲಿ ಅಚ್ಚರಿಯ ಜಯಗಳಿಸಿದರು. ಅವರು ಮೂರನೇ ಶ್ರೇಯಾಂಕದ ಚೌ ತಿಯೆನ್ ಚೆನ್‌ (ಚೀನಾ ತೈಪೆ) ಅವರನ್ನು 21–13, 21–14 ರಿಂದ ಸೋಲಿಸಲು ತೆಗೆದುಕೊಂಡಿದ್ದು 39 ನಿಮಿಷಗಳನ್ನಷ್ಟೇ.

ADVERTISEMENT

ಆಯುಷ್‌ ಶೆಟ್ಟಿ ಮೊದಲ ಸುತ್ತಿನಲ್ಲಿ 20–22, 21–10, 21–8 ರಿಂದ ಕೆನಡಾದ ಬ್ರಿಯಾನ್ ಯಂಗ್ ಅವರನ್ನು ಮಣಿಸಿ ಮುನ್ನಡೆದರು.

ಶ್ರೀಕಾಂತ್‌ 57 ನಿಮಿಷಗಳ ಸೆಣಸಾಟದಲ್ಲಿ ತಮಗಿಂತ ಮೇಲಿನ ಕ್ರಮಾಂಕದ ಲು ಗುವಾಂಗ್‌ ಝು ಅವರನ್ನು 23–21, 13–21, 21–11 ರಿಂದ ಸೋಲಿಸಿದರು. ಚೀನಾದ ಆಟಗಾರ ಇಲ್ಲಿ ಆರನೇ ಶ್ರೇಯಾಂಕದ ಪಡೆದಿದ್ದರು.

ಸಿಂಧುಗೆ ನಿರಾಸೆ: ಆದರೆ ಭಾರತದ ಅಗ್ರ ಆಟಗಾರ್ತಿ, ಒಲಿಂಪಿಕ್ ಪದಕ ವಿಜೇತೆ ಸಿಂಧು ಅವರ ನಿರಾಶಾದಾಯಕ ಓಟ ಮುಂದುವರಿಯಿತು. ಅವರು ಮೊದಲ ಸುತ್ತಿನಲ್ಲಿ ವಿಯೆಟ್ನಾಮಿನ ನೂಯೆನ್ ತುಯ್ ಲಿನ್ ಅವರಿಗೆ 11–21, 21–14, 15–21 ರಲ್ಲಿ ಮಣಿದರು.

ಮಿಶ್ರ ಡಬಲ್ಸ್‌ನಲ್ಲಿ ಧ್ರುವ್ ಕಪಿಲ ಮತ್ತು ತನಿಶಾ ಕ್ರಾಸ್ಟೊ ಎರಡನೇ ಸುತ್ತಿಗೆ ತಲುಪಿದರು. ಅವರು 21–18, 15–21, 21–14 ರಿಂದ ಇಂಡೊನೇಷ್ಯಾದ ಅದ್ನಾನ್ ಮೌಲಾನಾ ಮತ್ತು ಇನದಾ ಕಹ್ಯಾ ಸಾರಿ ಜಮಿಲ್ ಜೋಡಿಯನ್ನು ಮಣಿಸಿದರು. ಆದರೆ ಇದೇ ವಿಭಾಗದಲ್ಲಿ ಭಾರತದ ಇತರ ಮೂರು ಜೋಡಿಗಳು ಹೊರಬಿದ್ದವು.

ಅಶಿತ್‌ ಸೂರ್ಯ ಮತ್ತು ಅಮೃತಾ ಪ್ರಮುತೇಶ್‌ ಜೋಡಿ 10–21, 12–21 ರಲ್ಲಿ ಚೀನಾದ ಜಿಯಾಂಗ್‌ ಝೆಂಗ್ ಬಂಗ್‌– ವೀ ಯಾಷಿನ್ ಜೋಡಿಗೆ ಮಣಿಯಿತು. ರೋಹನ್ ಕಪೂರ್‌– ರುತ್ವಿಕಾ ಶಿವಾನಿ ಗದ್ದೆ ಜೋಡಿ ಸಹ 10–21, 14–21ರಲ್ಲಿ ನಾಲ್ಕನೇ ಶ್ರೇಯಾಂಕದ ಗುವೊ ಷಿನ್ ವಾ– ಚೆನ್‌ ಫಂಗ್ ಹುಯಿ ಜೋಡಿಗೆ ಮಣಿಯಿತು.

ಕರುಣಾಕರನ್ – ಆದ್ಯ ವರಿಯತ್ ಜೋಡಿ 15–21, 16–21 ರಲ್ಲಿ ಇಂಡೊನೇಷ್ಯಾದ ವೆರೆಲ್ ಯುಸ್ಟಿನ್ ಮುಲಿಯ– ಲಿಸಾ ಅಯು ಕುಸುಮವತಿ ಜೋಡಿಯೆದುರು ಸೋಲನುಭವಿಸಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.