
ಮಹಿಳೆಯರ ಸಿಂಗಲ್ಸ್ ಕ್ವಾರ್ಟರ್ ಫೈನಲ್‌ನಲ್ಲಿ ಇಶಿಕಾ ಜೈಸ್ವಾಲ್ ಷಟಲ್ ಡ್ರಾಪ್ ಮಾಡಲು ಪ್ರಯತ್ನಿಸಿದ ತನ್ವಿ ಪತ್ರಿ
ಪ್ರಜಾವಾಣಿ ಚಿತ್ರ : ಫಕ್ರುದ್ದೀನ್ ಎಚ್
ಮಂಗಳೂರು: ವಯೋಮಾನ ವಿಭಾಗದ ಏಷ್ಯನ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಪ್ರಶಸ್ತಿ ಗೆದ್ದು ಕಳೆದ ವರ್ಷ ಗಮನ ಸೆಳೆದಿದ್ದ ಯುವ ಆಟಗಾರ್ತಿ, ಒಡಿಶಾದ ತನ್ವಿ ಪತ್ರಿ ಮತ್ತೊಮ್ಮೆ ತಮ್ಮ ಸಾಮರ್ಥ್ಯ ಸಾಬೀತು ಮಾಡಿದರು. ಚೀಫ್ ಮಿನಿಸ್ಟರ್ಸ್ ಮಂಗಳೂರು ಇಂಡಿಯಾ ಇಂಟರ್‌ನ್ಯಾಷನಲ್ ಬ್ಯಾಡ್ಮಿಂಟನ್ ಟೂರ್ನಿಯ ಮಹಿಳೆಯರ ಸಿಂಗಲ್ಸ್‌ನಲ್ಲಿ ಅವರು ಸೆಮಿಫೈನಲ್ ಪ್ರವೇಶಿಸಿದರು.
ಉರ್ವ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಟೂರ್ನಿಯಲ್ಲಿ ಶುಕ್ರವಾರ ಎಂಟರ ಘಟ್ಟದ ರೋಚಕ ಪಂದ್ಯದಲ್ಲಿ ತನ್ವಿ, ಅಗ್ರ ಶ್ರೇಯಾಂಕದ ಆಟಗಾರ್ತಿ, ಅಮೆರಿಕದ ಇಶಿಕಾ ಜೈಸ್ವಾಲ್ ಅವರನ್ನು 21–19, 21–18ರಲ್ಲಿ ಮಣಿಸಿದರು. ಪುರುಷರ ವಿಭಾಗದ ಅಗ್ರ ಶ್ರೇಯಾಂಕದ ಋತ್ವಿಕ್ ಸತೀಶ್ ಕುಮಾರ್ 16–21, 21–15, 21–12ರಲ್ಲಿ ಎಂಟನೇ ಶ್ರೇಯಾಂಕದ ಸನೀತ್ ದಯಾನಂದ್ ವಿರುದ್ಧ ಗೆದ್ದು ನಾಲ್ಕರ ಘಟ್ಟಕ್ಕೆ ಲಗ್ಗೆ ಇಟ್ಟರು.
ಬೆಂಗಳೂರಿನ ಪ್ರಕಾಶ್ ಪಡುಕೋಣೆ ಬ್ಯಾಡ್ಮಿಂಟನ್ ಅಕಾಡೆಮಿಯಲ್ಲಿ ತರಬೇತಿಯಲ್ಲಿರುವ 14 ವರ್ಷ ವಯಸ್ಸಿನ ತನ್ವಿ, 22 ವರ್ಷದ ಇಶಿಕಾ ಅವರ ತಂತ್ರಗಳನ್ನು ದಿಟ್ಟವಾಗಿ ಎದುರಿಸಿದರು. ಸೆಮಿಫೈನಲ್‌ನಲ್ಲಿ ಅವರು ಮೂರನೇ ಶ್ರೇಯಾಂಕದ ಲಖನೌ ಆಟಗಾರ್ತಿ ಮಾನಸಿ ಸಿಂಗ್ ವಿರುದ್ಧ ಸೆಣಸುವರು.
ಮಾನಸಿ ಮತ್ತೊಂದು ಪಂದ್ಯದಲ್ಲಿ ಕರ್ನಾಟಕದ ರುಜುಲಾ ರಾಮು ವಿರುದ್ಧ 21–18, 19–21, 21–13ರಲ್ಲಿ ಜಯ ಸಾಧಿಸಿದರು. ಇನ್ನೊಂದು ಸೆಮಿಫೈನಲ್‌ನಲ್ಲಿ ನಾಲ್ಕನೇ ಶ್ರೇಯಾಂಕದ ಅಸ್ಮಿತಾ ಚಲಿಹ 16ನೇ ಶ್ರೇಯಾಂಕದ ಸೂರ್ಯ ಚರಿಸ್ಮ ತಮಿರಿ ವಿರುದ್ಧ ಸೆಣಸುವರು. ಅಸ್ಮಿತಾ 21–19, 21–13ರಲ್ಲಿ ಮೇಘನಾ ರೆಡ್ಡಿ ವಿರುದ್ಧ ಗೆದ್ದರು.
ಋತ್ವಿಕ್ ಗೆಲುವಿನ ಓಟ
ಕ್ವಾರ್ಟರ್ ಫೈನಲ್‌ನಲ್ಲಿ ಶಿವಮೊಗ್ಗದವರಾದ ಸನೀತ್ ದಯಾನಂದ್ ಅವರ ಸವಾಲನ್ನು ಮೀರಿದ ಋತ್ವಿಕ್ ಸತೀಶ್ ಕುಮಾರ್ ಗೆಲುವಿನ ಓಟ ಮುಂದುವರಿಸಿದರು. ಮೊದಲ ಗೇಮ್‌ನಲ್ಲಿ ಜಯ ಗಳಿಸಿದ ಸನೀತ್ ನಂತರ ಹೋರಾಡಿ ಸೋತರು. ಆರ್ಯಮನ್ ಟಂಡನ್ ವಿರುದ್ಧ ರೋಹನ್ ಕುಮಾರ್ 21–13, 18–21, 21–13ರಲ್ಲಿ, ಥಾಣೆಯ ಪ್ರಣಯ್ ಶೆಟ್ಟಿಗಾರ್ 14–21, 21–14, 21–5ರಲ್ಲಿ ಕರ್ನಾಟಕದ ತುಷಾರ್ ಸುವೀರ್ ವಿರುದ್ಧ, ರೌನಕ್ ಚೌಹಾಣ್ 21–13, 21–14ರಲ್ಲಿ ಅನ್ಶ್ ವಿಶಾಲ್ ಗುಪ್ತಾ ವಿರುದ್ದ ಗೆದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.