ADVERTISEMENT

ಒಲಿಂಪಿಕ್ಸ್‌: ಭಾರತ ಹಾಕಿ ತಂಡಕ್ಕೆ ಮನ್‌ಪ್ರೀತ್‌ ನಾಯಕ

ಉಪನಾಯಕರಾಗಿ ಬಿರೇಂದ್ರ, ಹರ್ಮನ್‌ಪ್ರೀತ್‌ ಸಿಂಗ್‌

ಪಿಟಿಐ
Published 22 ಜೂನ್ 2021, 8:49 IST
Last Updated 22 ಜೂನ್ 2021, 8:49 IST
ಮುಖ್ಯ ತರಬೇತುದಾರ ಗ್ರಹಾಂ ರೀಡ್‌ ಜೊತೆ ಮನ್‌ಪ್ರೀತ್‌ ಸಿಂಗ್‌
ಮುಖ್ಯ ತರಬೇತುದಾರ ಗ್ರಹಾಂ ರೀಡ್‌ ಜೊತೆ ಮನ್‌ಪ್ರೀತ್‌ ಸಿಂಗ್‌   

ನವದೆಹಲಿ: ಮಿಡ್‌ಫೀಲ್ಡ್ ಆಟಗಾರ ಮನ್‌ಪ್ರೀತ್‌ ಸಿಂಗ್‌ ಅವರನ್ನು, ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಆಡಲಿರುವ ಭಾರತ ಪುರುಷರ ಹಾಕಿ ತಂಡದ ನಾಯಕರನ್ನಾಗಿ ಆಯ್ಕೆ ಮಾಡಲಾಗಿದೆ. ಡಿಫೆಂಡರ್‌ಗಳಾದ ಬಿರೇಂದ್ರ ಲಾಕ್ರಾ ಮತ್ತು ಹರ್ಮನ್‌ಪ್ರೀತ್‌ ಸಿಂಗ್ ಅವರು ಉಪನಾಯಕರಾಗಿದ್ದಾರೆ.

ಜುಲೈ 23 ರಿಂದ ಆಗಸ್ಟ್‌ 8ರವರೆಗೆ ನಡೆಯುವ ಒಲಿಂಪಿಕ್ಸ್‌ಗೆ ಹಾಕಿ ತಂಡವನ್ನು ಕಳೆದ ವಾರವೇ ಪ್ರಕಟಿಸಲಾಗಿತ್ತು. ಆದರೆ ನಾಯಕ, ಉಪನಾಯಕರ ಹೆಸರನ್ನು ಪ್ರಕಟಿಸಿರಲಿಲ್ಲ.

‘ಮೂರನೇ ಬಾರಿ ಭಾರತ ತಂಡವನ್ನು ಪ್ರತಿನಿಧಿಸುತ್ತಿರುವುದರಿಂದ, ಜೊತೆಗೆ ಈ ಬಾರಿ ನಾಯಕತ್ವದ ಜವಾಬ್ದಾರಿ ವಹಿಸಿರುವುದರಿಂದ ವಿನೀತಭಾವ ಮೂಡಿದೆ. ಇದು ನನಗೆ ಅತ್ಯಂತ ಹೆಮ್ಮೆಯ ಕ್ಷಣ’ ಎಂದು ಮನ್‌ಪ್ರೀತ್‌ ಅವರು ಹಾಕಿ ಇಂಡಿಯಾ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ADVERTISEMENT

‘ಕಳೆದ ಕೆಲವು ವರ್ಷಗಳಿಂದ ನಾವು ಪ್ರಬಲ ನಾಯಕತ್ವದ ಗುಂಪನ್ನು ರೂಪಿಸಿಕೊಂಡಿದ್ದೇವೆ. ಸಾಂಕ್ರಾಮಿಕ ಪಿಡುಗು ತಂದೊಡ್ಡಿದ ಸವಾಲಿನ ನಡುವೆಯೂ ಆಟದ ಮಟ್ಟ ಇಳಿಯದಂತೆ ಯಶಸ್ವಿಯಾಗಿ ನೋಡಿಕೊಂಡಿದ್ದೇವೆ. ಒಲಿಂಪಿಕ್ಸ್‌ಗೆ ದೈಹಿಕ ಕ್ಷಮತೆ ಕಾಪಾಡಿಕೊಳ್ಳುವ ಜೊತೆ, ನಮ್ಮ ಲಕ್ಷ್ಯ ತಪ್ಪದಂತೆ ಗಮನಹರಿಸಿದ್ದೇವೆ’ ಎಂದು ಮನ್‌ಪ್ರೀತ್‌ ಹೇಳಿದ್ದಾರೆ.

ಮನ್‌ಪ್ರೀತ್ ನಾಯಕತ್ವದಲ್ಲಿ ಭಾರತ ಹಲವು ಮೈಲುಗಲ್ಲುಗಳನ್ನು ಸಾಧಿಸಿದೆ. 2017ರಲ್ಲಿ ಏಷ್ಯಾ ಕಪ್‌, 2018ರಲ್ಲಿ ಏಷ್ಯನ್‌ ಚಾಂಪಿಯನ್ಸ್‌ ಟ್ರೋಫಿ ಗೆದ್ದುಕೊಂಡಿದ್ದ ತಂಡ, ಎರಡು ವರ್ಷಗಳ ಹಿಂದೆ ಎಫ್‌ಐಎಚ್‌ ವಿಶ್ವ ಸರಣಿ ಫೈನಲ್‌ನಲ್ಲೂ ಜಯಗಳಿಸಿತ್ತು.

ಮನ್‌ಪ್ರೀತ್‌ ಕಪ್ತಾನರಾಗಿದ್ದಾಗಲೇ ಭಾರತ ತಂಡವು, ತವರಿನಲ್ಲಿ (ಭುವನೇಶ್ವರ) ನಡೆದ 2018ರ ವಿಶ್ವ ಕಪ್‌ನಲ್ಲಿ ಎಂಟರ ಘಟ್ಟ ತಲುಪಿತ್ತು. ಎಫ್‌ಐಎಚ್‌ ಹಾಕಿ ಪ್ರೊ ಲೀಗ್‌ನಲ್ಲಿ ಗಮನ ಸೆಳೆಯುವ ಪ್ರದರ್ಶನ ನೀಡಿತ್ತು. ತಂಡವು ಸುಧಾರಿತ ಪ್ರದರ್ಶನದಿಂದ ಈಗ ವಿಶ್ವ ರ‍್ಯಾಂಕಿಂಗ್‌ನಲ್ಲಿ ನಾಲ್ಕನೇ ಸ್ಥಾನಕ್ಕೆ ಏರಿದೆ.

‘ಈ ಮೂರೂ ಆಟಗಾರರು ಕಳೆದ ಕೆಲವು ವರ್ಷಗಳಿಂದ ತಂಡದ ನಾಯಕತ್ವದ ಅವಿಭಾಜ್ಯ ಅಂಗವಾಗಿದ್ದಾರೆ. ಸವಾಲಿನ ಸಮಯದಲ್ಲಿ ಆಟಗಾರರಿಗೆ ಮಾರ್ಗದರ್ಶನ ಮಾಡುವಲ್ಲಿ ಪ್ರಬುದ್ಧತೆ ತೋರಿದ್ದಾರೆ’ ಎಂದು ಚೀಫ್‌ ಕೋಚ್‌ ಗ್ರಹಾಂ ರೀಡ್‌ ಹೇಳಿದ್ದಾರೆ.

‘ಇಬ್ಬರು ನಾಯಕರನ್ನು ಹೆಸರಿಸಿರುವುದು, ಇಂಥ ದೊಡ್ಡ ಮಟ್ಟದ ಟೂರ್ನಿಯಲ್ಲಿ ತಂಡದ ನಾಯಕತ್ವವವನ್ನು ಶಕ್ತಿಯುತಗೊಳಿಸಲಿದೆ. ಒಟ್ಟಾಗಿ ಈ ಮೂರು ಮಂದಿ (ಮನ್‌ಪ್ರೀತ್‌, ಬೀರೇಂದ್ರ ಮತ್ತು ಹರ್ಮನ್‌ಪ್ರೀತ್‌) ಭಾರತವನ್ನು ಯಶಸ್ಸಿನತ್ತ ಒಯ್ಯುವ ವಿಶ್ವಾಸವಿದೆ’ ಎಂದಿದ್ದಾರೆ ರೀಡ್‌.

ಬಿರೇಂದ್ರ ಅವರು 2012ರ ಲಂಡನ್‌ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಂಡಿದ್ದರು. ಆದರೆ ಮೊಣಕಾಲ ಶಸ್ತ್ರಚಿಕಿತ್ಸೆಯ ಕಾರಣ ರಿಯೊ (2016) ಒಲಿಂಪಿಕ್ಸ್‌ನಲ್ಲಿ ಆಡಿರಲಿಲ್ಲ. ಆದರೆ ತಂಡಕ್ಕೆ ಮರಳಿದ ನಂತರ ಅವರು ಸುಧಾರಿತ ಆಟವಾಡುತ್ತಿದ್ದಾರೆ. 2015ರಲ್ಲಿ ಸೀನಿಯರ್‌ ತಂಡಕ್ಕೆ ಪದಾರ್ಪಣೆ ಮಾಡಿದ್ದ ಡ್ರ್ಯಾಗ್‌ಫ್ಲಿಕ್ಕರ್‌ ಹರ್ಮನ್‌ಪ್ರೀತ್‌ ಕೂಡ ತಂಡದ ಆಧಾರಸ್ಥಂಭವಾಗಿದ್ದಾರೆ.

ಟೋಕಿಯೊದಲ್ಲಿ ನಡೆದ 2019ರ ಎಫ್‌ಐಎಚ್‌ ಒಲಿಂಪಿಕ್‌ ಟೆಸ್ಟ್‌ನಲ್ಲಿ ಹರ್ಮನ್‌ಪ್ರೀತ್‌ ಸಿಂಗ್‌ ಅವರು ಮನ್‌ಪ್ರೀತ್‌ ಅನುಪಸ್ಥಿತಿಯಲ್ಲಿ ತಂಡವನ್ನು ಮುನ್ನಡೆಸಿದ್ದರು.

ಭಾರತ ಜುಲೈ 24ರಂದು ತನ್ನ ಗುಂಪಿನ ಮೊದಲ ಪಂದ್ಯದಲ್ಲಿ ನ್ಯೂಜಿಲೆಂಡ್‌ ತಂಡವನ್ನು ಎದುರಿಸಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.