ADVERTISEMENT

ಏಷ್ಯನ್‌ ಶೂಟಿಂಗ್‌: ಭಾರತ ತಂಡಕ್ಕೆ ಭಾಕರ್‌ ನಾಯಕತ್ವ

ಪಿಟಿಐ
Published 7 ಜುಲೈ 2025, 15:39 IST
Last Updated 7 ಜುಲೈ 2025, 15:39 IST
ಮನು ಭಾಕರ್‌
ಮನು ಭಾಕರ್‌   

ನವದೆಹಲಿ: ಒಲಿಂಪಿಕ್‌ ಅವಳಿ ಪದಕ ವಿಜೇತೆ ಮನು ಭಾಕರ್‌ ಅವರು ಆಗಸ್ಟ್‌ 16ರಿಂದ 30ರವರೆಗೆ ಕಜಕಿಸ್ತಾನದಲ್ಲಿ ನಡೆಯಲಿರುವ 16ನೇ ಏಷ್ಯನ್‌ ಶೂಟಿಂಗ್‌ ಚಾಂಪಿಯನ್‌ಷಿಪ್‌ನಲ್ಲಿ ಭಾರತದ 35 ಶೂಟರ್‌ಗಳನ್ನು ಒಳಗೊಂಡ ತಂಡವನ್ನು ಮುನ್ನಡೆಸಲಿದ್ದಾರೆ.

ಭಾರತ ರಾಷ್ಟ್ರೀಯ ರೈಫಲ್‌ ಸಂಸ್ಥೆಯು (ಎನ್‌ಆರ್‌ಎಐ) ಸೋಮವಾರ ತಂಡವನ್ನು ಪ್ರಕಟಿಸಿದೆ. ಇದರೊಂದಿಗೆ ಸೆ.7ರಿಂದ 15ರವರೆಗೆ ಚೀನಾದಲ್ಲಿ ನಡೆಯಲಿರುವ ಐಎಸ್‌ಎಸ್‌ಎಫ್ ವಿಶ್ವಕಪ್ (ರೈಫಲ್/ಪಿಸ್ತೂಲ್), ಸೆ.24ರಿಂದ ಅ.2ರವರೆಗೆ ನವದೆಹಲಿಯಲ್ಲಿ ನಡೆಯಲಿರುವ ಜೂನಿಯರ್ ವಿಶ್ವಕಪ್ ಮತ್ತು ಕಜಕಿಸ್ತಾನದಲ್ಲಿ ನಡೆಯುವ ಏಷ್ಯನ್‌ ಜೂನಿಯರ್‌ ಚಾಂಪಿಯನ್‌ಷಿಪ್‌ಗೂ ತಂಡಗಳನ್ನು ಘೋಷಿಸಲಾಗಿದೆ. 

ಏಷ್ಯನ್‌ ಚಾಂಪಿಯನ್‌ಷಿಪ್‌ ತಂಡದಲ್ಲಿರುವ 23 ವರ್ಷ ವಯಸ್ಸಿನ ಭಾಕರ್‌, ವೈಯಕ್ತಿಕ ವಿಭಾಗದ ಎರಡು ಸ್ಪರ್ಧೆಗಳಿಗೆ ಆಯ್ಕೆಯಾದ ಭಾರತದ ಏಕೈಕ ಶೂಟರ್‌ ಆಗಿದ್ದಾರೆ. ಮಹಿಳೆಯರ 10 ಮೀಟರ್‌ ಏರ್ ಪಿಸ್ತೂಲ್ ಮತ್ತು ಮಹಿಳೆಯರ 25 ಮೀಟರ್‌ ಪಿಸ್ತೂಲ್ ಸ್ಪರ್ಧೆಗಳಲ್ಲಿ ಅವರು ಗುರಿಯಿಡಲಿದ್ದಾರೆ. ಮೂರು ಮಿಶ್ರ ತಂಡ ವಿಭಾಗ ಒಳಗೊಂಡಂತೆ 15 ಸ್ಪರ್ಧೆಗಳಲ್ಲಿ ಭಾರತದ ಶೂಟರ್‌ಗಳು ಪಾಲ್ಗೊಳ್ಳಲಿದ್ದಾರೆ.

ADVERTISEMENT

ಏರ್ ರೈಫಲ್ (ಪುರುಷರ) ಮಾಜಿ ವಿಶ್ವ ಚಾಂಪಿಯನ್ ರುದ್ರಾಂಕ್ಷ್ ಪಾಟೀಲ್ ಮತ್ತು ಒಲಿಂಪಿಯನ್‌ಗಳಾದ ಅಂಜುಮ್ ಮೌದ್ಗಿಲ್ (ಮಹಿಳೆಯರ 50 ಮೀ ರೈಫಲ್ 3 ಪೊಸಿಷನ್‌), ಐಶ್ವರ್ಯ ಪ್ರತಾಪ್ ಸಿಂಗ್ ತೋಮರ್ (ಪುರುಷರ 50 ಮೀ ರೈಫಲ್ 3 ಪೊಸಿಷನ್‌), ಸೌರಭ್ ಚೌಧರಿ (ಪುರುಷರ 10 ಮೀ ಏರ್ ಪಿಸ್ತೂಲ್) ಮತ್ತು ಕೈನಾನ್ ಚೆನೈ (ಪುರುಷರ ಟ್ರ್ಯಾಪ್) ಅವರೂ ಏಷ್ಯನ್‌ ಚಾಂಪಿಯನ್‌ಷಿಪ್‌ ತಂಡದಲ್ಲಿದ್ದಾರೆ.

ಇಶಾ ಸಿಂಗ್ (ಮಹಿಳೆಯರ 25 ಮೀ ಪಿಸ್ತೂಲ್), ಮೆಹುಲಿ ಘೋಷ್ (ಏರ್ ರೈಫಲ್) ಮತ್ತು ಕಿರಣ್ ಅಂಕುಶ್ ಜಾಧವ್ (ಏರ್ ರೈಫಲ್) ಅವರು ಎರಡೂ ಸೀನಿಯರ್‌ ತಂಡಗಳಲ್ಲಿದ್ದಾರೆ. ಒಲಿಂಪಿಕ್ ಕಂಚಿನ ಪದಕ ವಿಜೇತ ಸ್ವಪ್ನಿಲ್ ಕುಸಾಳೆ ಮತ್ತು ಏಷ್ಯನ್ ಗೇಮ್ಸ್ ಮಾಜಿ ಚಾಂಪಿಯನ್ ರಾಹಿ ಸರ್ನೋಬತ್ ಅವರು ವಿಶ್ವಕಪ್‌ನ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.