ADVERTISEMENT

ರದ್ದಾದ ವಿಮಾನ: ಆರ್ಚರಿ ಪಟುಗಳ ದುಮ್ಮಾನ

ಪಿಟಿಐ
Published 18 ನವೆಂಬರ್ 2025, 15:55 IST
Last Updated 18 ನವೆಂಬರ್ 2025, 15:55 IST
ಆರ್ಚರಿ
ಆರ್ಚರಿ   

ಕೋಲ್ಕತ್ತ: ಏಷ್ಯನ್ ಚಾಂಪಿಯನ್‌ಷಿಪ್‌ನಲ್ಲಿ ಭಾಗವಹಿಸಿದ ನಂತರ ತವರಿಗೆ ಮರಳಬೇಕಾದ ಭಾರತ ಬಿಲ್ಗಾರರ (ಆರ್ಚರಿ ಪಟುಗಳ) ಒಂದು ಗುಂಪು ವಿಮಾನ ರದ್ದಾದ ಕಾರಣ ಢಾಕಾದಲ್ಲಿ ಆತಂಕ, ಅವ್ಯವಸ್ಥೆಗಳ ನಡುವೆ ರಾತ್ರಿಯನ್ನು ಕಳೆಯಬೇಕಾಯಿತು. ಪದಕಗಳನ್ನು ಗೆದ್ದು ತವರಿಗೆ ಮರಳುವ ತವಕದಲ್ಲಿದ್ದ ಬಿಲ್ಗಾರರಿಗೆ ಸುಮಾರು 10 ಗಂಟೆಗಳ ಅವಧಿ ದುಃಸ್ವಪ್ನದಂತಾಯಿತು.

ಹಿಂಸಾಪೀಡಿತ ಬಾಂಗ್ಲಾದೇಶದ ರಾಜಧಾನಿಯಲ್ಲಿ ಅನ್ಯಮಾರ್ಗವಿಲ್ಲದೇ ‘ಧರ್ಮಶಾಲೆ’ಯಂತೆ ಇದ್ದ ಕಳಪೆ ವಸತಿಗೃಹದಲ್ಲಿ ತಂಡ ತಂಗಬೇಕಾಯಿತು. ಇಬ್ಬರು ಬಾಲಕರು, ಏಳು ಮಹಿಳಾ ಸ್ಪರ್ಧಿಗಳು ಸೇರಿದಂತೆ 11 ಮಂದಿ ಪ್ರಯಾಣಿಸಬೇಕಿದ್ದ ವಿಮಾನ ರದ್ದಾಯಿತು.

23 ಮಂದಿಯ ತಂಡ ಮೂರು ಗುಂಪುಗಳಲ್ಲಿ ತವರಿಗೆ ಮರಳಬೇಕಿತ್ತು. ಏಳು ಮಂದಿಯನ್ನು ಹೊಂದಿದ್ದ ಒಂದು ಗಂಪು ಸಕಾಲದಲ್ಲಿ ಕೋಲ್ಕತ್ತ ತಲುಪಿತು. ಮಹಾರಾಷ್ಟ್ರದ ಸ್ಪರ್ಧಿಗಳಿದ್ದ ತಂಡವೂ ಸಮಯಕ್ಕೆ ಸರಿಯಾಗಿ ಮುಂಬೈ ತಲುಪಿತು. ಆದರೆ ರಾತ್ರಿ 9.30ಕ್ಕೆ ಡೆಲ್ಲಿಗೆ ಹೊರಡಬೇಕಿದ್ದ ವಿಮಾನ ರದ್ದಾಯಿತು.

ADVERTISEMENT

ಬುಕ್‌ ಮಾಡಿದ್ದ ವಿಮಾನಯಾನ ಸಂಸ್ಥೆ ಬದಲಿ ವ್ಯವಸ್ಥೆ ಅಥವಾ ಯಾವುದೇ ರೀತಿಯ ಬೆಂಬಲ ನೀಡಲಿಲ್ಲ. ಅಭಿಷೇಕ್ ವರ್ಮಾ, ಜ್ಯೋತಿ ಸುರೇಖಾ ವೆನ್ನಂ, ಒಲಿಂಪಿಯನ್ ಧೀರಜ್ ಬೊಮ್ಮದೇವರ ಅವರು ದೆಹಲಿಗೆ ತೆರಳಬೇಕಾದ ತಂಡದಲ್ಲಿದ್ದರು. ಆದರೆ ತಾಂತ್ರಿಕ ದೋಷ ಕಾಣಿಸಿಕೊಂಡು ವಿಮಾನ ಸಕಾಲಕ್ಕೆ ಹೊರಡಲಿಲ್ಲ.

ಬಾಂಗ್ಲಾದೇಶದ ಅಂತರರಾಷ್ಟ್ರೀಯ ಅಪರಾಧ ನ್ಯಾಯಮಂಡಳಿ ಮಾಜಿ ಪ್ರಧಾನಿ ಶೇಖ್ ಹಸೀನಾ  ಮರಣ ದಂಡನೆ ಶಿಕ್ಷೆ ಪ್ರಕಟಿಸಿದ್ದು, ಜನ ಬೀದಿಗಿಳಿದಿದ್ದರು. ಮುಂದಿನ ವ್ಯವಸ್ಥೆ ಬಗ್ಗೆ ಸ್ಪಷ್ಟತೆಯಿಲ್ಲದೇ ರಾತ್ರಿ 2 ಗಂಟೆಯವರೆಗೆ ಟರ್ಮಿನಲ್‌ನಲ್ಲೇ ಇದ್ದ ಸ್ಪರ್ಧಿಗಳು, ವಿಮಾನ ರದ್ದಾಗಿರುವುದನ್ನು ಮತ್ತು ರಾತ್ರಿ ಬದಲಿ ವಿಮಾನ ವ್ಯವಸ್ಥೆ ಇಲ್ಲ ಎಂದು ಪ್ರಕಟಿಸಿದ ಬಳಿಕ ತಂಡ ಅನ್ಯಮಾರ್ಗವಿಲ್ಲದೇ ನಿಲ್ದಾಣದಿಂದ ನಿರ್ಗಮಿಸಬೇಕಾಯಿತು.

ಹೊರಟ ‘ಸ್ಥಳೀಯ ಬಸ್‌’ನಲ್ಲೂ ಕಿಟಕಿಗಳಿರಲಿಲ್ಲ. ಅರ್ಧ ಗಂಟೆ ಪ್ರಯಾಣಿಸಿದ ಬಳಿಕ  ‘ಧರ್ಮಶಾಲೆ’ಯಂತಿದ್ದ ತಾತ್ಕಾಲಿಕ ಲಾಡ್ಜ್‌ನಲ್ಲಿ ತಂಡ ಉಳಿದುಕೊಳ್ಳಬೇಕಾಯಿತು.

‘ಇದು ಡಾರ್ಮಿಟರಿ ಮಾದರಿಯಲ್ಲಿದ್ದು, ಆರು ಡಬಲ್‌ಬೆಡ್‌ಗಳಿದ್ದವು. ಒಂದೇ ಶೌಚಾಲಯವಿತ್ತು. ಅದೂ ಸುಸ್ಥಿತಿಯಲ್ಲಿರಲಿಲ್ಲ’ ಎಂದು 36 ವರ್ಷದ ಅನುಭವಿ ಸ್ಪರ್ಧಿ ಅಭಿಷೇಕ್ ವರ್ಮಾ ಆರೋಪಿಸಿದರು. ಅಲ್ಲಿ ಸ್ನಾನ ಮಾಡುವಂತೇ ಇರಲಿಲ್ಲ ಎಂದು ಎರಡು ಏಷ್ಯನ್ ಗೇಮ್ಸ್‌ನಲ್ಲಿ (2018, 2022) ಬೆಳ್ಳಿ ಗೆದ್ದಿದ್ದ ವರ್ಮಾ ಹೇಳಿದರು.

ಹಾಗೂ ಹೀಗೂ, ಬೆಳಿಗ್ಗೆ 7 ಗಂಟೆಗೆ ಬಿಲ್ಗಾರರ ಗುಂಪು ವಿಮಾನ ನಿಲ್ದಾಣಕ್ಕೆ ಮರಳಿತು. ಆದರೆ ಪ್ರಯಾಣ ಮತ್ತಷ್ಟು ವಿಳಂಬವಾಯಿತು. ಡೆಲ್ಲಿಗೆ ತಲುಪಿದ ಬಳಿಕವೂ ಸಂಪರ್ಕ ವಿಮಾನಗಳು ವಿಳಂಬವಾದವು.

ಭಾರತದ ಸ್ಪರ್ಧಿಗಳು ಆರು ಚಿನ್ನ ಸೇರಿ 10 ಪದಕಗಳನ್ನು ಗೆದ್ದು ಪದಕ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.