ನವದೆಹಲಿ:ಒಲಿಂಪಿಕ್ಸ್ ವೇಟ್‌ಲಿಪ್ಟಿಂಗ್ ಟೂರ್ನಿಗಳನ್ನು ಕೊರೊನಾ ವೈರಸ್ ಆತಂಕದಿಂದಾಗಿ ರದ್ದುಗೊಳಿಸಿರುವ ಕಾರಣ ಭಾರತದ ಮೀರಾಬಾಯಿ ಚಾನು ಮತ್ತು ಜೆರೆಮಿ ಲಾಲ್ರಿನ್ನುವಾಂಗ ಅವರ ಟೋಕಿಯೊ ಹಾದಿ ಸುಗಮವಾಗುವ ಸಾಧ್ಯತೆ ಇದೆ.
ಟೋಕಿಯೊ ಒಲಿಂಪಿಕ್ಸ್ ಕೂಟದ ಮೇಲೆಯೂ ಆಂತಕದ ಮೋಡ ಕವಿದಿದೆ. ಆದರೆ ಒಂದು ವೇಳೆ ಕೂಟ ನಡೆದರೆ ಮೀರಾಬಾಯಿ ಮತ್ತು ಜೆರೆಮಿ ಅವರಿಗೆ ಯಾವುದೇ ಅಡ್ಡಿ ಇಲ್ಲದೆ ಪಾಲ್ಗೊಳ್ಳಬಹುದಾಗಿದೆ.
ಈ ತಿಂಗಳ 17 ಮತ್ತು 18ರಂದು ವಿಡಿಯೊ ಕಾನ್ಫರೆನ್ಸ್ ಮೂಲಕ ಅಂತರರಾಷ್ಟ್ರೀಯ ವೇಟ್ ಲಿಫ್ಟಿಂಗ್ ಫೆಡರೇಷನ್ ಕಾರ್ಯಕಾರಿ ಮಂಡಳಿ ಸಭೆ ನಡೆಸಿತ್ತು. ಕೊರೊನಾ ಆತಂಕದ ಹಿನ್ನೆಲೆಯಲ್ಲಿ ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿಗೆ (ಐಒಸಿ) ಕೆಲವು ಶಿಫಾರಸುಗಳನ್ನು ಮಾಡಲು ಸಭೆಯಲ್ಲಿ ನಿರ್ಧರಿಲಾಗಿತ್ತು. ಎಲ್ಲ ಐದು ಖಂಡಗಳ ಅರ್ಹತಾ ಹಂತದ ಟೂರ್ನಿಗಳನ್ನು ರದ್ದು ಮಾಡಿರುವ ಕಾರಣ ಸದ್ಯದ ರ್‍ಯಾಂಕಿಂಗ್ ಪರಿಗಣಿಸಿ ಒಲಿಂಪಿಕ್ಸ್‌ಗೆ ಅರ್ಹತೆ ನೀಡಬೇಕು ಎಂಬುದು ಸಲಹೆಗಳಲ್ಲಿ ಪ್ರಮುಖವಾಗಿದ್ದ ಅಂಶ. ಶಿಫಾರಸುಗಳ ಬಗ್ಗೆ ಒಲಿಂಪಿಕ್ ಸಮಿತಿ ನಿರ್ಧಾರವನ್ನು ಇನ್ನೂ ಪ್ರಕಟಿಸಿಲ್ಲ. ಆದರೂ ಇದಕ್ಕೆ ಒಪ್ಪಿಗೆ ಸಿಗುವ ಭರವಸೆ ಫೆಡರೇಷನ್‌ಗೆ ಇದೆ.
ಮಹಿಳೆಯರ 49 ಕೆಜಿ ವಿಭಾಗದಲ್ಲಿ ಮೀರಾಬಾಯಿ ಚಾನು ಈಗ ಮೂರನೇ ಸ್ಥಾನದಲ್ಲಿದ್ದಾರೆ. ಈ ವರ್ಷದ ಆರು ಕೂಟಗಳ ಪೈಕಿ ಐದರಲ್ಲಿ ಪಾಲ್ಗೊಂಡಿರುವ ಅವರು ಫೆಡರೇಷನ್ ನಿಗದಿಗೊಳಿಸಿರುವ ಗರಿಷ್ಠ ಟೂರ್ನಿಗಳಲ್ಲಿ ಪಾಲ್ಗೊಳ್ಳುವ ಪ್ರಕ್ರಿಯೆಯನ್ನೂ ಬಹುತೇಕ ಪೂರೈಸಿದಂತಾಗಿದೆ.
ಪುರುಷರ 67 ಕೆಜಿ ವಿಭಾಗದ ಸ್ಪರ್ಧಿಯಾದ ಜೆರೆಮಿ ಏಷ್ಯನ್ ರ್‍ಯಾಂಕಿಂಗ್‌ನಲ್ಲಿ ಮೊದಲ ಸ್ಥಾನ ಗಳಿಸಿದ್ದಾರೆ. ಎರಡನೇ ಸ್ಥಾನದಲ್ಲಿರುವ ಲಿಫ್ಟರ್‌ಗಿಂತ ಅವರು ತುಂಬಾ ಅಂತರ ಕಾಯ್ದುಕೊಂಡಿದ್ದಾರೆ.ಪ್ರತಿ ಖಂಡದ ಅಗ್ರ ಕ್ರಮಾಂಕದ ಲಿಫ್ಟರ್ ಸಹಜವಾಗಿ ಆಯ್ಕೆಯಾಗುವುದರಿಂದ ಜೆರೆಮಿಗೂ ಅವಕಾಶದ ಬಾಗಿಲು ತೆರೆಯಲಿದೆ.
‘ವಿಶ್ವ ಕ್ರಮಾಂಕದ ಎಂಟು ಮಂದಿಗೆ ಅವಕಾಶ ನೀಡುವುದಾದರೆ ಮೀರಾಬಾಯಿ ಅವರಿಗೆ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳುವ ಅವಕಾಶ ಸಿಗುವ ಎಲ್ಲ ಸಾಧ್ಯತೆಯೂ ಇದೆ’ ಎಂದು ಭಾರತ ವೇಟ್‌ಲಿಫ್ಟಿಂಗ್ ಫೆಡರೇಷನ್ ಪ್ರಧಾನ ಕಾರ್ಯದರ್ಶಿ ಸಹದೇವ್ ಯಾದವ್ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.