ADVERTISEMENT

ಇಂಡಿಯನ್ ಗ್ರ್ಯಾನ್ ಪ್ರಿ ಅಥ್ಲೆಟಿಕ್ಸ್: ಸ್ರಬನಿ, ಕಾರ್ತಿಕ್ ಆಕರ್ಷಣೆ

ಪಿಟಿಐ
Published 20 ಮೇ 2022, 15:46 IST
Last Updated 20 ಮೇ 2022, 15:46 IST
ಸ್ರಬನಿ ನಂದಾ –ಟ್ವಿಟರ್ ಚಿತ್ರ
ಸ್ರಬನಿ ನಂದಾ –ಟ್ವಿಟರ್ ಚಿತ್ರ   

ಭುವನೇಶ್ವರ: ಇಂಡಿಯನ್ ಗ್ರ್ಯಾನ್ ಪ್ರಿ–3 ಅಥ್ಲೆಟಿಕ್ಸ್‌ ಸ್ಪರ್ಧೆಗಳು ಶನಿವಾರ ಇಲ್ಲಿ ನಡೆಯಲಿದ್ದು ಪ್ರಮುಖ ಅಥ್ಲೀಟ್‌ಗಳ ಅನುಪಸ್ಥಿತಿಯಲ್ಲಿ ಪುರುಷರ ಟ್ರಿಪಲ್ ಜಂಪ್ ಮತ್ತು ಮಹಿಳೆಯರ ಥ್ರೋ ಸ್ಪರ್ಧೆಗಳು ಕುತೂಹಲ ಕೆರಳಿಸಿವೆ.

ಪ್ರಮುಖರು ವಿದೇಶದಲ್ಲಿ ಅಭ್ಯಾಸದಲ್ಲಿ ತೊಡಗಿದ್ದಾರೆ. ಹೀಗಾಗಿ ಶಾಟ್ ಪಟ್ ಪಟುಗಳಾದ ಅಭಾ ಖಾತುನ್‌ ಮತ್ತು ಮನಪ್ರೀತ್ ಕೌರ್, ಡಿಸ್ಕಸ್‌ ಥ್ರೋ ಪಟು ನವಜೀತ್ ಕೌರ್ ಧಿಲೋನ್ ಮತ್ತು ಹ್ಯಾಮರ್ ಥ್ರೋ ಪಟು ಸರಿತಾ ರಮಿತ್ ಸಿಂಗ್ ಮೇಲೆ ಕಣ್ಣು ನೆಟ್ಟಿದೆ.

ಪುರುಷರ ಟ್ರಿಪಲ್ ಜಂಪ್ ಪಿಟ್‌ನಲ್ಲಿ ಭಾರಿ ಪೈಪೋಟಿ ಕಂಡುಬರುವ ಸಾಧ್ಯತೆ ಇದೆ. ಎಲ್ದೋಸ್ ಪೌಲ್‌, ಅಬ್ದುಲ್ ಅಬೂಬಕ್ಕರ್, ಕಾರ್ತಿಕ್ ಉಣ್ಣಿಕೃಷ್ಣನ್ ಮತ್ತು ವೆನಿಸ್ಟರ್ ದೇವಸ್ಯಂ ಚಿನ್ನಕ್ಕಾಗಿ ಸೆಣಸಲಿದ್ದಾರೆ. 16.99 ಮೀಟರ್ ಸಾಧನೆ ಮಾಡಿರುವ ಎಲ್ದೋಸ್ ಪೌಲ್ ಮತ್ತು 16.81 ಮೀ ಸಾಧನೆ ಮಾಡಿರುವ ಕಾರ್ತಿಕ್ ಈಗಾಗಲೇ ಮಿಂಚಿದ್ದಾರೆ.

ADVERTISEMENT

ಕಳಿಂಗ ಕ್ರೀಡಾಂಗಣದಲ್ಲಿ ನಡೆಯಲಿರುವ ಕೂಟದಲ್ಲಿ ಸ್ಥಳೀಯ ಅಥ್ಲೀಟ್‌ಗಳಾದ ಸ್ರಬನಿ ನಂದಾ ಮತ್ತು ಆಮಿಯಾ ಮಲಿಕ್ ಮಹಿಳೆಯರ 200 ಮೀ ಓಟದಲ್ಲಿ ಗಮನ ಸೆಳೆಯಲಿದ್ದಾರೆ. 31 ವರ್ಷದ ಸ್ರಬನಿ ಅವರಿಗೆ 4 ವರ್ಷಗಳ ನಂತರ ಭಾರತದಲ್ಲಿ ಮೊದಲ ಪ್ರಮುಖ ಕೂಟ ಇದಾಗಿದೆ. ಜಮೈಕಾದ ಕಿಂಗ್ಸ್‌ಟನ್‌ನಲ್ಲಿ ತರಬೇತಿ ಪಡೆಯುತ್ತಿರುವ ಅವರು 23.68 ಸೆಕೆಂಡುಗಳ ಸಾಧನೆಯೊಂದಿಗೆ ಮಿಂಚಿದ್ದಾರೆ.

54.49 ಮೀ ಸಾಧನೆಯೊಂದಿಗೆ 2021ರ ರಾಷ್ಟ್ರೀಯ ಮುಕ್ತ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನ ಗೆದ್ದ ನಂತರ ರಾಷ್ಟ್ರೀಯ ಮಟ್ಟದ ಮೊದಲ ಕೂಟದಲ್ಲಿ ಪಾಲ್ಗೊಳ್ಳುತ್ತಿರುವ ನವನೀತ್ ಕೌರ್ ಕೂಡ ಚಿನ್ನದ ಮೇಲೆ ಕಣ್ಣಿಟ್ಟು ಕಣಕ್ಕೆ ಇಳಿಯಲಿದ್ದಾರೆ.

ಪುರುಷರ ಪೋಲ್‌ವಾಲ್ಟ್‌ನೊಂದಿಗೆ ಅರಂಭವಾಗಲಿರುವ ಸ್ಪರ್ಧೆಗಳು ಮಹಿಳೆಯರ 5000 ಮೀ ಓಟದೊಂದಿಗೆ ಮುಕ್ತಾಯಗೊಳ್ಳಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.