ADVERTISEMENT

ಚೆಸ್‌ ಒಲಿಂಪಿಯಾಡ್‌ಗೆ ಭಾರತದ ಆತಿಥ್ಯ; ರಷ್ಯಾ ಕೈತಪ್ಪಿದ್ದ ಅವಕಾಶ

ಉಕ್ರೇನ್ ಮೇಲಿನ ದಾಳಿ: ರಷ್ಯಾ ಕೈತಪ್ಪಿದ್ದ ಅವಕಾಶ

ಪಿಟಿಐ
Published 16 ಮಾರ್ಚ್ 2022, 12:32 IST
Last Updated 16 ಮಾರ್ಚ್ 2022, 12:32 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಚೆನ್ನೈ: 44ನೇ ಚೆಸ್‌ ಒಲಿಂಪಿಯಾಡ್‌ ಟೂರ್ನಿಗೆ ಭಾರತ ಆತಿಥ್ಯ ವಹಿಸಲಿದೆ. ಈ ಮೊದಲು ಮಾಸ್ಕೊದಲ್ಲಿ ನಿಗದಿಯಾಗಿದ್ದ ಟೂರ್ನಿಯನ್ನು ಉಕ್ರೇನ್‌ ಮೇಲೆ ರಷ್ಯಾ ದಾಳಿಯ ಹಿನ್ನೆಲೆಯಲ್ಲಿ ಸ್ಥಳಾಂತರ ಮಾಡಲಾಗಿತ್ತು. ಚೆನ್ನೈನಲ್ಲಿ ಈ ವರ್ಷಾಂತ್ಯದಲ್ಲಿ ಟೂರ್ನಿ ನಡೆಯಲಿದೆ.

2013ರಲ್ಲಿ ವಿಶ್ವಚಾಂಪಿಯನ್‌ಷಿಪ್ ಬಳಿಕ ಮೊದಲ ಬಾರಿ ಜಾಗತಿಕ ಮಟ್ಟದ ಚೆಸ್‌ ಟೂರ್ನಿಯನ್ನು ಭಾರತ ಆಯೋಜಿಸಲಿದೆ.

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರು ಟ್ವಿಟರ್‌ ಮೂಲಕ ಮಂಗಳವಾರ ರಾತ್ರಿ ಈ ವಿಷಯ ಪ್ರಕಟಿಸಿದರು.

ADVERTISEMENT

‘ಭಾರತದ ಚೆಸ್‌ ರಾಜಧಾನಿಯಲ್ಲಿ 44ನೇ ಚೆಸ್‌ ಒಲಿಂಪಿಯಾಡ್‌ ನಡೆಯಲಿರುವುದು ಸಂತಸದ ಸಂಗತಿ. ತಮಿಳುನಾಡಿಗೆ ಹೆಮ್ಮೆಯ ವಿಷಯವಾಗಿದ್ದು, ವಿಶ್ವದಾದ್ಯಂತ ‘ಕಿಂಗ್ಸ್‌‘ ಮತ್ತು ‘ಕ್ವೀನ್ಸ್‌‘ಗಳನ್ನು ಚೆನ್ನೈ ಸ್ವಾಗತಿಸಲಿದೆ‘ ಎಂದು ಸ್ಟಾಲಿನ್ ಟ್ವೀಟ್ ಮಾಡಿದ್ದಾರೆ.

ಅಖಿಲ ಭಾರತ ಚೆಸ್‌ ಫೆಡರೇಷನ್ (ಎಐಸಿಎಫ್‌) ಕೂಡ ಈ ಟ್ವಿಟರ್‌ ಮೂಲಕ ವಿಷಯ ಖಚಿತಪಡಿಸಿದೆ.

ಒಲಿಂಪಿಯಾಡ್‌ ಆಯೋಜಿಸಲು ಎಐಸಿಎಫ್‌, ಅಂತರರಾಷ್ಟ್ರೀಯ ಚೆಸ್‌ ಫೆಡರೇಷನ್‌ಗೆ (ಫಿಡೆ) ₹ 70 ಕೋಟಿ ಖಾತರಿ ಮೊತ್ತವನ್ನು ನೀಡಿದೆ.

ಒಲಿಂಪಿಯಾಡ್‌ ಎರಡು ವರ್ಷಗಳಿಗೊಮ್ಮೆ ನಡೆಯುವ ತಂಡ ವಿಭಾಗದ ಟೂರ್ನಿಯಾಗಿದೆ. ಎರಡು ವಾರಗಳಗಿಂತ ಹೆಚ್ಚು ಅವಧಿಗೆ 190 ದೇಶಗಳ ಆಟಗಾರರು ಪಾಲ್ಗೊಳ್ಳುವರು. ಈ ವರ್ಷ ಜುಲೈ 26ರಿಂದ ಆಗಸ್ಟ್ 8ರವರೆಗೆ ಈ ಟೂರ್ನಿ ರಷ್ಯಾದಲ್ಲಿ ನಡೆಯಬೇಕಿತ್ತು.

ಮುಕ್ತ ಮತ್ತು ಮಹಿಳಾ ವಿಭಾಗಗಳಲ್ಲಿ 11 ಸುತ್ತುಗಳಲ್ಲಿ ಒಲಿಂಪಿಯಾಡ್ ನಡೆಯಲಿದೆ.ಎರಡೂ ವಿಭಾಗಗಳಲ್ಲಿ ಪ್ರತಿ ತಂಡಕ್ಕೆ ಐದು ಆಟಗಾರರು ಮತ್ತು ಒಬ್ಬ ತರಬೇತುದಾರ ಇರುತ್ತಾರೆ. 2000ಕ್ಕಿಂತ ಹೆಚ್ಚು ಆಟಗಾರರು ಪಾಲ್ಗೊಳ್ಳುವ ಸಾಧ್ಯತೆಯಿದೆ.

ಕಳೆದ ಬಾರಿ ಆನ್‌ಲೈನ್ ಮೂಲಕ ನಡೆದ ಒಲಿಂಪಿಯಾಡ್‌ನಲ್ಲಿ ಭಾರತ ತಂಡವು ರಷ್ಯಾದೊಡನೆ ಜಂಟಿಯಾಗಿ ಚಿನ್ನದ ಪದಕ ಗೆದ್ದುಕೊಂಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.