ಮೈಸೂರು: ಚಂಡೀಗಢದ ಯುವರಾಜ್ ಸಂಧು ಅವರು ಶುಕ್ರವಾರ ಮೈಸೂರು ಓಪನ್ ಗಾಲ್ಫ್ ಟೂರ್ನಿಯಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದರು. ಇದರೊಂದಿಗೆ ಹಾಲಿ ಋತುವಿನಲ್ಲಿ ಮೂರನೇ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡು, ಪಿಜಿಟಿಐ (ಪ್ರೊಫೆಷನಲ್ ಗಾಲ್ಫ್ ಟೂರ್ ಆಫ್ ಇಂಡಿಯಾ) ಆರ್ಡರ್ ಆಫ್ ಮೆರಿಟ್‌ನಲ್ಲಿ ಮುನ್ನಡೆಯನ್ನು ಬಲಪಡಿಸಿಕೊಂಡರು.
28 ವರ್ಷದ ಯುವರಾಜ್ ಅವರು ಒಟ್ಟು 31 ಅಂಡರ್ 249 (61-65-62-61) ಪಾಯಿಂಟ್ಸ್ ಗಳಿಸಿ ಅಗ್ರಸ್ಥಾನ ಪಡೆದರು. ಮೊದಲ ಸುತ್ತಿನಿಂದಲೇ ಮುನ್ನಡೆಯನ್ನು ಕಾಯ್ದುಕೊಂಡ ಅವರು ಕೊನೆಯ ಮತ್ತು ನಾಲ್ಕನೇ ಸುತ್ತಿನಲ್ಲಿ ಅಮೋಘ ಆಟ ಪ್ರದರ್ಶಿಸಿದರು. ಒಂಬತ್ತು ಅಂಡರ್‌ಗಳಲ್ಲಿ 61 ಅಂಕ ಕಲೆಹಾಕಿ ಪ್ರಶಸ್ತಿಗೆ ಮುತ್ತಿಕ್ಕಿದರು.
ಯುವರಾಜ್ ಅವರು ಇಲ್ಲಿ ₹ 15 ಲಕ್ಷ ಬಹುಮಾನವನ್ನು ಜೇಬಿಗಿಳಿಸಿಕೊಂಡರು. ಇದರೊಂದಿಗೆ ಅವರು ಋತುವಿನ ಗಳಿಕೆ ₹73.67 ಲಕ್ಷಕ್ಕೆ ಏರಿಕೆಯಾಯಿತು. ಯುವರಾಜ್ ಗಳಿಸಿದ ಪಾಯಿಂಟ್ಸ್ (249) ಪಿಜಿಟಿಎ ಟೂರ್ನಿಗಳಲ್ಲೇ ಅತ್ಯಂತ ಕಡಿಮೆಯಾಗಿದೆ. ಆದರೆ, ಟೂರ್ನಿಯ ವೇಳೆ ಮಳೆ ಬಂದ ಕಾರಣ ನಿಯಮದಲ್ಲಿ ಪರಿಷ್ಕರಣೆ ಮಾಡಲಾಗಿತ್ತು. ಹೀಗಾಗಿ, ಅದನ್ನು ದಾಖಲೆಗೆ ಪರಿಗಣಿಸಿಲ್ಲ.
ಬಾಂಗ್ಲಾದೇಶದ ಜಮಾಲ್ ಹುಸೇನ್ 23 ಅಂಡರ್‌ಗಳಲ್ಲಿ 257 (62-65-64-66) ಅಂಕ ಕಲೆಹಾಕಿ ಎರಡನೇ ಸ್ಥಾನ ಪಡೆದರು. ದೇಹಲಿಯ ಅರ್ಜುನ್ ಪ್ರಸಾದ್ 22 ಅಂಡರ್‌ಗಳಲ್ಲಿ 258 (66-62-64-66) ಪಾಯಿಂಟ್‌ನೊಂದಿಗೆ ಮೂರನೇ ಸ್ಥಾನ ಗಳಿಸಿದರು.
ಸ್ಥಳೀಯ ವೃತ್ತಿಪರರ ಪೈಕಿ ಮೈಸೂರಿನ ಧ್ರುವ ಬೋಪಣ್ಣ ಜಂಟಿ 53ನೇ ಸ್ಥಾನ ಪಡೆದರು. ಅವರು ಒಟ್ಟು 277 ಅಂಕ ಗಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.