ಕುಸ್ತಿಪಟು ಬಜರಂಗ್ ಪೂನಿಯಾ
ಪಿಟಿಐ ಚಿತ್ರಗಳು
ನವದೆಹಲಿ: ಮಾರ್ಚ್ 10ರಂದು ರಾಷ್ಟ್ರೀಯ ತಂಡದ ಆಯ್ಕೆ ಟ್ರಯಲ್ಸ್ ವೇಳೆ ಉದ್ದೀಪನ ಮದ್ದು ಸೇವನೆ ಪರೀಕ್ಷೆಗೆ ಮಾದರಿ ನೀಡಲು ನಿರಾಕರಿಸಿದ್ದಕ್ಕೆ ಅಂತರರಾಷ್ಟ್ರೀಯ ಕುಸ್ತಿಪಟು ಬಜರಂಗ್ ಪೂನಿಯಾ ಅವರ ಮೇಲೆ ನಾಲ್ಕು ವರ್ಷಗಳ ಅಮಾನತು ಹೇರಲಾಗಿದೆ.
ಟೋಕಿಯೊ ಒಲಿಂಪಿಕ್ಸ್ ಕಂಚಿನ ಪದಕ ವಿಜೇತರಾದ ಬಜರಂಗ್ ಅವರ ಮೇಲೆ ರಾಷ್ಟ್ರೀಯ ಉದ್ದೀಪನ ಮದ್ದು ಸೇವನೆ ತಡೆ ಘಟಕ (ನಾಡಾ) ಈ ಹಿಂದೆ ಏಪ್ರಿಲ್‌ನಲ್ಲಿ ತಾತ್ಕಾಲಿಕವಾಗಿ ಅಮಾನತು ಹೇರಿತ್ತು. ವಿಶ್ವ ಕುಸ್ತಿ ಸಂಸ್ಥೆಯಾದ ಯುನೈಟೆಡ್ ವರ್ಲ್ಡ್ ರೆಸ್ಲಿಂಗ್ (ಯುಡಬ್ಲ್ಯುಡಬ್ಲ್ಯು) ಕೂಡ ಅಮಾನತು ಶಿಕ್ಷೆ ವಿಧಿಸಿತ್ತು.
ಇದರ ವಿರುದ್ಧ ಬಜರಂಗ್ ನಾಡಾದ ಶಿಸ್ತುಸಮಿತಿಗೆ ಮನವಿ ಸಲ್ಲಿಸಿದ್ದರು. ಮೇ 31ರಂದು ತಾತ್ಕಾಲಿಕ ಅಮಾನತನ್ನು ನಾಡಾ ಹಿಂಪಡೆದಿತ್ತು. ನಂತರ ಜೂನ್ 23ರಂದು ನಾಡಾ, ಬಜರಂಗ್ ಅವರಿಗೆ ಆರೋಪಗಳನ್ನು ಹೊಂದಿರುವ ನೋಟಿಸ್ ನೀಡಿತ್ತು.
ಬಜರಂಗ್ ಅವರು ಲಿಖಿತ ಪತ್ರದ ಮುಖೇನ ತಮ್ಮ ವಿರುದ್ಧದ ಆರೋಪಗಳನ್ನು ಅಲ್ಲಗೆಳೆದಿದ್ದರು. ಇದರ ಬೆನ್ನಲ್ಲೇ ಸೆಪ್ಟೆಂಬರ್ 20 ಮತ್ತು ಅಕ್ಟೋಬರ್ 4ರಂದು ವಿಚಾರಣೆ ನಡೆದಿತ್ತು.
‘ನಿಯಮ 10.3.1ರ ಪ್ರಕಾರ ಕ್ರೀಡಾಪಟುವು ನಾಲ್ಕು ವರ್ಷಗಳ ಕಾಲ ಯಾವುದೇ ಸ್ಪರ್ಧೆಯಲ್ಲಿ ಭಾಗವಹಿಸುವಂತಿಲ್ಲ’ ಎಂದು ನಾಡಾದ ಶಿಸ್ತು ಸಮಿತಿಯಾದ ಎಡಿಡಿಪಿ (ಆ್ಯಂಟಿ ಡಿಸಿಪ್ಲಿನರಿ ಡೋಪಿಂಗ್ ಪಾನೆಲ್) ತನ್ನ ಆದೇಶದಲ್ಲಿ ತಿಳಿಸಿದೆ.
2024ರ ಏಪ್ರಿಲ್ 23ರಿಂದ ಅಮಾನತು ಶಿಕ್ಷೆ ಅನ್ವಯವಾಗಿದೆ. 2028ರ ಏಪ್ರಿಲ್ 22ರವರೆಗೆ ಇರಲಿದೆ. ಹೀಗಾಗಿ ಅವರ ಕ್ರೀಡಾಜೀವನ ಬಹುತೇಕ ಮುಗಿದುಹೋದಂತಾಗಿದೆ.
ಬಜರಂಗ್ ಅವರು ನಾಲ್ಕು ವರ್ಷ ಸ್ಪರ್ಧಾತ್ಮಕ ಕುಸ್ತಿ ಸ್ಪರ್ಧೆಯಲ್ಲಿ ಪಾಲ್ಗೊಳ್ಳುವಂತಿಲ್ಲ. ಹೊರದೇಶದಲ್ಲಿ ಕೋಚಿಂಗ್ ಹೊಣೆ ವಹಿಸಿಕೊಳ್ಳುವಂತಿಲ್ಲ.
ಲೈಂಗಿಕ ಕಿರುಕುಳ ಆರೋಪ ಎದುರಿಸುತ್ತಿದ್ದ ಬ್ರಿಜ್‌ಭೂಷಣ್ ವಿರುದ್ಧ ಹೋರಾಟದ ನೇತೃತ್ವ ವಹಿಸಿದ್ದಕ್ಕೆ ತಮ್ಮ ವಿರುದ್ಧ ಈ ರೀತಿ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಬಜರಂಗ್ ದೂರಿದ್ದರು. ತಮ್ಮ ಮಾದರಿ ತೆಗೆದುಕೊಳ್ಳುವ ಸಂದರ್ಭದಲ್ಲಿ ನಾಡಾ ಅಧಿಕಾರಿಗಳು ಅವಧಿ ಮುಗಿದ (ಎಕ್ಸೈಪರಿ) ಕಿಟ್ ತಂದಿದ್ದರು ಎಂದೂ ಅವರು ದೂರಿದ್ದರು. ಆದರೆ ಪರೀಕ್ಷೆಗೆ ಬಜರಂಗ್ ಅವರು ಮಾತ್ರದ ಮಾದರಿ ನೀಡಲು ನಿರಾಕರಿಸಿದ್ದು ಉದ್ದೇಶಪೂರ್ವಕವಾಗಿತ್ತು ಎಂದು ನಾಡಾ ಹೇಳಿತ್ತು. ತಮ್ಮ ಕರ್ತವ್ಯ ಮತ್ತು ಹೊಣೆಗಾರಿಕೆಯ ಕಡೆ ಅವರು ಅಗೌರವ ತೋರಿದ್ದರು ಎಂದೂ ಹೇಳಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.