ADVERTISEMENT

National Sports Board:ರಾಷ್ಟ್ರೀಯ ಕ್ರೀಡಾ ಮಂಡಳಿ ಸ್ಥಾಪನೆಗೆ ಕೇಂದ್ರ ನಿರ್ಧಾರ‌

ನೂತನ ಕ್ರೀಡಾ ಆಡಳಿತ ಮಸೂದೆ ಮಂಡನೆ ನಾಳೆ

​ಪ್ರಜಾವಾಣಿ ವಾರ್ತೆ
Published 20 ಜುಲೈ 2025, 0:30 IST
Last Updated 20 ಜುಲೈ 2025, 0:30 IST
   

ನವದೆಹಲಿ: ನೂತನ ಕ್ರೀಡಾ ಆಡಳಿತ ಮಸೂದೆಯನ್ನು ಮಂಡಿಸಲು ಸಜ್ಜಾಗಿರುವ ಕೇಂದ್ರ ಸರ್ಕಾರವು ರಾಷ್ಟ್ರೀಯ ಕ್ರೀಡಾ ಮಂಡಳಿ (ಎನ್‌ಎಸ್‌ಬಿ)ಯನ್ನು ಸ್ಥಾಪಿಸಲಿದೆ. ಈ ಮಂಡಳಿಗೆ ಹಲವು ಮಹತ್ವದ ಅಧಿಕಾರಗಳನ್ನು ನೀಡಲಿದೆ. ಆ ಮೂಲಕ ಮಸೂದೆಗೆ ಸಾಂಸ್ಥಿಕ ರೂಪ ನೀಡಲಿದೆ.

ಮಸೂದೆಯಲ್ಲಿ ‘ನಿಯಂತ್ರಣ’ ಎಂಬ ಪದವನ್ನು ಕೈಬಿಡಲಾಗಿದೆ. ಆದರೆ ಈ ಮಂಡಳಿಯು ಕ್ರೀಡಾ ಫೆಡರೇಷನ್‌ಗಳ ಮೇಲೆ ‘ಹತೋಟಿ’ಸಾಧಿಸುವ ಅಧಿಕಾರವನ್ನು ಹೊಂದಲಿದೆ ಎನ್ನಲಾಗಿದೆ. ದೂರುಗಳನ್ನು ಆಧರಿಸಿ ಫೆಡರೇಷನ್‌ಗಳ ಮಾನ್ಯತೆಯನ್ನು  ಅಮನಾತು ಮಾಡುವ, ಚುನಾವಣೆ ಪ್ರಕ್ರಿಯೆಗಳಲ್ಲಿ ಲೋಪ, ಚುನಾವಣೆ ಅವ್ಯವಹಾರ  ಮತ್ತು ಹಣದ ದುರ್ಬಳಕೆ ಮತ್ತಿತರ ಪ್ರಕರಣಗಳಲ್ಲಿ ಕ್ರಮ ಜರುಗಿಸುವ ಅಧಿಕಾರ ಈ ಮಂಡಳಿಗೆ ಲಭಿಸಲಿದೆ. 

ಸೋಮವಾರ ಆರಂಭವಾಗಲಿರುವ ಮುಂಗಾರು ಸಂಸತ್ ಅಧಿವೇಶನದಲ್ಲಿ ಈ ಮಸೂದೆಯನ್ನು ಮಂಡಿಸಲಾಗುತ್ತಿದೆ. 

ADVERTISEMENT

ಈ ಮಸೂದೆಯ ಪ್ರಕಾರ ಕ್ರೀಡಾ ಫೆಡರೇಷನ್‌ಗಳ ಪದಾಧಿಕಾರಿಗಳ ನಿವೃತ್ತಿಯ ವಯೋಮಿತಿಯನ್ನು 70 ರಿಂದ 75 ವರ್ಷಕ್ಕೆ ಹೆಚ್ಚಿಸುವ ಸಾಧ್ಯತೆ ಇದೆ. ಒಂದೊಮ್ಮೆ ಆಯಾ ಕ್ರೀಡೆಯ ಅಂತರರಾಷ್ಟ್ರೀಯ ಫೆಡರೇಷನ್‌ಗಳು ಸಮ್ಮತಿಸಿದರೆ ಅವರು ಚುನಾವಣೆಗೂ ಸ್ಪರ್ಧಿಸಲು ಅವಕಾಶ ನೀಡಬಹುದಾಗಿದೆ. 

ಎನ್‌.ಎಸ್‌.ಬಿ.ಯ ಮುಖ್ಯಸ್ಥರು ಮತ್ತು ಸದಸ್ಯರನ್ನು ಕೇಂದ್ರ ಸರ್ಕಾರವು ನೇಮಕ ಮಾಡಲಿದೆ. ‘ಸಾಮರ್ಥ್ಯ, ಸಮಗ್ರತೆ ಮತ್ತು ಪ್ರತಿಷ್ಠಿತ’ ವ್ಯಕ್ತಿಗಳನ್ನು ಈ ಆಯ್ಕೆಗೆ ಪರಿಗಣಿಸಲಾಗುವುದು. 

ಮಂಡಳಿಯ ಅಂಗಸಂಸ್ಥೆಗಳಲ್ಲಿ ‘ಸಾರ್ವಜನಿಕ ಆಡಳಿತ, ಕ್ರೀಡಾ ಆಡಳಿತ, ಕ್ರೀಡಾ ಕಾನೂನು ಮತ್ತು ಇತರ ಸಂಬಂಧಿತ ಕ್ಷೇತ್ರಗಳಲ್ಲಿ ವಿಶೇಷ ಜ್ಞಾನ ಅಥವಾ ಪ್ರಾಯೋಗಿಕ ಅನುಭವವನ್ನು ಹೊಂದಿದ ಪದಾಧಿಕಾರಿಗಳು ಇರಬೇಕು‘  ಎಂದು ಮಸೂದೆಯಲ್ಲಿ ಹೇಳಲಾಗಿದೆ. 

ಈ ಎಲ್ಲ ನೇಮಕಗಳನ್ನು ಶೋಧ ಮತ್ತು ಆಯ್ಕೆ ಸಮಿತಿಯು ನಡೆಸಲಿದೆ. ಈ ಸಮಿತಿಯಲ್ಲಿ ಸಂಪುಟ ಕಾರ್ಯದರ್ಶಿ ಅಥವಾ ಕ್ರೀಡಾ ಕಾರ್ಯದರ್ಶಿಯು ಮುಖ್ಯಸ್ಥರಾಗಿರುತ್ತಾರೆ. ಭಾರತ ಕ್ರೀಡಾ ಪ್ರಾಧಿಕಾರದ (ಎಸ್‌ಎಐ) ಮಹಾನಿರ್ದೇಶಕ, ರಾಷ್ಟ್ರೀಯ ಕ್ರೀಡಾ ಸಂಸ್ಥೆಯ ಅಧ್ಯಕ್ಷ ಅಥವಾ ಪ್ರಧಾನ ಕಾರ್ಯದರ್ಶಿ ಅಥವಾ ಖಜಾಂಚಿಯಾಗಿ ಸೇವೆ ಸಲ್ಲಿಸಿದ ಇಬ್ಬರು ಕ್ರೀಡಾ ಆಡಳಿತಾಧಿಕಾರಿಗಳು ಮತ್ತು ದ್ರೋಣಾಚಾರ್ಯ ಅಥವಾ ಖೇಲ್ ರತ್ನ ಅಥವಾ ಅರ್ಜುನ ಪ್ರಶಸ್ತಿ ಪುರಸ್ಕೃತರಾಗಿರುವ ಒಬ್ಬ ಶ್ರೇಷ್ಠ ಕ್ರೀಡಾಪಟುವನ್ನು ಒಳಗೊಂಡಿರುತ್ತದೆ.

ಇದುವರೆಗೆ ಭಾರತ ಒಲಿಂಪಿಕ್ಸ್ ಸಮಿತಿ (ಐಒಎ) ನಿರ್ವಹಿಸುತ್ತಿದ್ದ ಎಲ್ಲ ಕಾರ್ಯಗಳೇ ಈಗ ಎನ್‌ಎಸ್‌ಬಿ ವ್ಯಾಪ್ತಿಗೆ ಬರಲಿವೆ. ಎಲ್ಲ ರಾಷ್ಟ್ರೀಯ ಕ್ರೀಡಾ ಫೆಡರೇಷನ್‌ಗಳ (ಎನ್‌ಎಸ್‌ಎಫ್‌)  ನೋಡೆಲ್ ಸಂಸ್ಥೆಯಾಗಿತ್ತು.   

ಕಳೆದ ಕೆಲವು ದಿನಗಳಿಂದ ಐಒಎಯಲ್ಲಿ ಆಂತರಿಕ ಕಲಹ, ಭಿನ್ನಾಭಿಪ್ರಾಯ ಮತ್ತಿತರ ಲೋಪಗಳು ಹೆಚ್ಚು ಸುದ್ದಿಯಾಗುತ್ತಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.