ADVERTISEMENT

ರಾಷ್ಟ್ರೀಯ ಕ್ರೀಡಾಡಳಿತ ಕಾಯ್ದೆ ಜಾರಿಗೆ ಕರಡು ನಿಯಮ: ಅರ್ಹತಾ ಮಾನದಂಡಗಳ ನಿಗದಿ

ಪಿಟಿಐ
Published 15 ಅಕ್ಟೋಬರ್ 2025, 13:27 IST
Last Updated 15 ಅಕ್ಟೋಬರ್ 2025, 13:27 IST
   

ನವದೆಹಲಿ: ನೂತನ ರಾಷ್ಟ್ರೀಯ ಕ್ರೀಡಾ ಆಡಳಿತ ಕಾಯ್ದೆಗೆ ಕೇಂದ್ರ ಕ್ರೀಡಾ ಸಚಿವಾಲಯವು ಕರಡು ನಿಯಮಗಳನ್ನು ರೂಪಿಸಿದೆ. ಈ ಕಾಯ್ದೆಯಡಿ ಮೂವರು ಸದಸ್ಯರ ರಾಷ್ಟ್ರೀಯ ಕ್ರೀಡಾ ಮಂಡಳಿ (ಎನ್‌ಎಸ್‌ಬಿ) ಅಸ್ತಿತ್ವಕ್ಕೆ ಬರಲಿದೆ.

ಕ್ರೀಡಾ ಮಂಡಳಿಯ ರಾಷ್ಟ್ರೀಯ ಕ್ರೀಡಾ ಫೆಡರೇಷನ್‌ಗಳಿಗೆ ಮಾನ್ಯತೆ ನೀಡುವ ಮತ್ತು ಅವುಗಳ ಮಾನ್ಯತೆ ರದ್ದುಗೊಳಿಸುವ ಅಧಿಕಾರ ಹೊಂದಿದೆ. ಆಡಳಿತಾತ್ಮಕ ವ್ಯವಸ್ಥೆಯಲ್ಲಿ ಅರ್ಹತೆ ಹೊಂದಿರುವ ಕ್ರೀಡಾಪಟುಗಳನ್ನು ಒಳಗೊಳಿಸಲು ಅರ್ಹತಾ ಮಾನದಂಡ ನಿಗದಿಪಡಿಸಲಿದೆ. 

ನೂತನ ರಾಷ್ಟ್ರೀಯ ಕ್ರೀಡಾ ಆಡಳಿತ ಕಾಯ್ದೆಯ (2025) ಅಡಿ ಸಚಿವಾಲಯವು ರಾಷ್ಟ್ರೀಯ ಕ್ರೀಡಾ ಮಂಡಳಿ, ರಾಷ್ಟ್ರೀಯ ಕ್ರೀಡಾ ನ್ಯಾಯಮಂಡಳಿ (ಎನ್‌ಎಸ್‌ಟಿ) ಮತ್ತು ರಾಷ್ಟ್ರೀಯ ಕ್ರೀಡಾ ಚುನಾವಣಾ ಸಮಿತಿ (ಎನ್‌ಎಸ್‌ಇಪಿ) ಸ್ಥಾಪನೆಗೆ ಸಂಬಂಧಿಸಿ ಕರಡು ನಿಯಮಗಳನ್ನು ತನ್ನ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದೆ. ಸಾರ್ವಜನಿಕರ ಅಭಿಪ್ರಾಯ, ಸಲಹೆ ಸಲ್ಲಿಕೆಗೆ 30 ದಿನಗಳ ಅವಕಾಶ ನೀಡಿದೆ.

ADVERTISEMENT

ರಾಷ್ಟ್ರೀಯ ಕ್ರೀಡಾ ಆಡಳಿತ ಕಾಯ್ದೆಯನ್ನು ಜಾರಿಗೊಳಿಸಲು ಈ ನಿಯಮಗಳನ್ನು ರೂಪಿಸಲಾಗುತ್ತಿದೆ ಎಂದು ಸಚಿವಾಲಯವು ತಿಳಿಸಿದೆ. ನೀತಿ ಸಂಹಿತೆ, ಪ್ರಾಥಮಿಕ ಭಾಗೀದಾರರಾದ ಕ್ರೀಡಾಪಟುಗಳ ಹಿತಾಸಕ್ತಿ ರಕ್ಷಣೆ, ಎಲ್ಲ ಹಂತಗಳ ಆಯ್ಕೆಯಲ್ಲಿ ನಿಷ್ಪಕ್ಷಪಾತವಾಗಿರುವಂತೆ ಖಾತರಿಪಡಿಸುವಂತೆ ನಿಯಮಗಳನ್ನು ರೂಪಿಸಲಾಗಿದೆ.

ಸರ್ಕಾರದ ಅನುದಾನ ಪಡೆಯಲು ರಾಷ್ಟ್ರೀಯ ಕ್ರೀಡಾ ಫೆಡರೇಷನ್‌ಗಳು ರಾಷ್ಟ್ರೀಯ ಕ್ರೀಡಾ ಮಂಡಳಿಯ ಮಾನ್ಯತೆ ಪಡೆಯುವುದು ಕಡ್ಡಾಯ.

ಮಂಡಳಿಯು ಒಬ್ಬ ಅಧ್ಯಕ್ಷ, ಇಬ್ಬರು ಸದಸ್ಯರನ್ನು ಹೊಂದಿರಲಿದೆ. ಅವರು ಸಾಮರ್ಥ್ಯ, ವಿಶ್ವಾಸಾರ್ಹತೆ ಮತ್ತು ವಿಷಯದ ಬಗ್ಗೆ ಜ್ಞಾನ, ಅನುಭವ, ಸಾರ್ವಜನಿಕ ಆಡಳಿತ ಕ್ಷೇತ್ರದ ಅನುಭವ, ಕ್ರೀಡಾ ನಿಯಮಗಳ ತಿಳಿವಳಿಕೆ ಮತ್ತು ಸಂಬಂಧಿತ ಕ್ಷೇತ್ರಗಳ ಅರಿವು  ಹೊಂದಿರಬೇಕು ಎಂದು ಕರಡು ನಿಯಮಾವಳಿಯಲ್ಲಿ ತಿಳಿಸಲಾಗಿದೆ. ಮೂವರಿಗೂ ಗರಿಷ್ಠ 65 ವರ್ಷ ವಯೋಮಿತಿ ನಿಗದಿಪಡಿಸಲಾಗಿದೆ. ಅಧಿಕಾರ ವಹಿಸಿದ ದಿನದಿಂದ ಅವರು ಮೂರು ವರ್ಷಗಳ ಅವಧಿ ಅಥವಾ 65 ವರ್ಷದವರೆಗೆ ಕಾರ್ಯನಿರ್ವಹಿಸಬಹುದು.

ರಾಷ್ಟ್ರೀಯ ಕ್ರೀಡಾ ನ್ಯಾಯಮಂಡಳಿ ಸದಸ್ಯರಿಗೆ ನಾಲ್ಕು ವರ್ಷಗಳ ಅಧಿಕಾರಾವಧಿ ಇದ್ದು, 67 ವರ್ಷಗಳ ವಯೋಮಿತಿ ನಿಗದಿಪಡಿಸಲಾಗಿದೆ. ಅವರು ಈ ಹುದ್ದೆಗೆ ಬಂದ ಮೇಲೆ ಖಾಸಗಿಯಾಗಿ ವಕೀಲಿಕೆ  ಮುಂದುವರಿಸುವಂತಿಲ್ಲ.

ಚುನಾವಣಾ ಸಮಿತಿ: ರಾಷ್ಟ್ರೀಯ ಕ್ರೀಡಾ ಸಂಸ್ಥೆಗಳಿಗೆ ಸಾಂಗವಾಗಿ ಚುನಾವಣೆಗಳು ನಡೆಯುವಂತೆ ನೋಡಿಕೊಳ್ಳುವುದು ರಾಷ್ಟ್ರೀಯ ಕ್ರೀಡಾ ಚುನಾವಣಾ ಸಮಿತಿಯ ಹೊಣೆಯಾಗಿದೆ. ಎಲ್ಲ ಸಂದರ್ಭಗಳಲ್ಲಿ ಸಮಿತಿಯಲ್ಲಿ ಕನಿಷ್ಠ 20 ಸದಸ್ಯರಿರುವಂತೆ ನಿಯಮ ರೂಪಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.