ADVERTISEMENT

ಬೆಂಗಳೂರು | ನೀರಜ್ ಚೋಪ್ರಾ ಕ್ಲಾಸಿಕ್‌ ಚಾರಿತ್ರಿಕ ಉತ್ಸವಕ್ಕೆ ಕಂಠೀರವ ಸಜ್ಜು

ಜಾವೆಲಿನ್ ಥ್ರೋ ದಿಗ್ಗಜರ ಸಾಮರ್ಥ್ಯ ಪ್ರದರ್ಶನ ಇಂದು: ಭಾರತದ ಕ್ರೀಡಾ ಇತಿಹಾಸದಲ್ಲಿ ಹೊಸ ಅಧ್ಯಾಯ

ಗಿರೀಶ ದೊಡ್ಡಮನಿ
Published 5 ಜುಲೈ 2025, 0:33 IST
Last Updated 5 ಜುಲೈ 2025, 0:33 IST
<div class="paragraphs"><p>ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಶನಿವಾರ ನಡೆಯಲಿರುವ ನೀರಜ್‌ ಚೋಪ್ರಾ ಕ್ಲಾಸಿಕ್ 2025 ಟೂರ್ನಿಯ ಮುನ್ನಾದಿನ ಭಾರತದ ಒಲಿಂಪಿಕ್ಸ್ ಪದಕ ವಿಜೇತ, ವಿಶ್ವದ ನಂಬರ್ ಒನ್ ಜಾವೆಲಿನ್ ಎಸೆತಗಾರರಾದ ನೀರಜ್ ಚೋಪ್ರಾ ಅವರು ಅಭ್ಯಾಸದ ಸಂದರ್ಭ ಕ್ರೀಡಾಂಗಣದಲ್ಲಿ ಕೆಲಸ ಮಾಡುವ ಮಹಿಳೆಯರ ಜೊತೆ ಫೋಟೋ ಕ್ಲಿಕ್ಕಿಸಿ ಕೊಂಡರು </p></div>

ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಶನಿವಾರ ನಡೆಯಲಿರುವ ನೀರಜ್‌ ಚೋಪ್ರಾ ಕ್ಲಾಸಿಕ್ 2025 ಟೂರ್ನಿಯ ಮುನ್ನಾದಿನ ಭಾರತದ ಒಲಿಂಪಿಕ್ಸ್ ಪದಕ ವಿಜೇತ, ವಿಶ್ವದ ನಂಬರ್ ಒನ್ ಜಾವೆಲಿನ್ ಎಸೆತಗಾರರಾದ ನೀರಜ್ ಚೋಪ್ರಾ ಅವರು ಅಭ್ಯಾಸದ ಸಂದರ್ಭ ಕ್ರೀಡಾಂಗಣದಲ್ಲಿ ಕೆಲಸ ಮಾಡುವ ಮಹಿಳೆಯರ ಜೊತೆ ಫೋಟೋ ಕ್ಲಿಕ್ಕಿಸಿ ಕೊಂಡರು

   

ಪ್ರಜಾವಾಣಿ ಚಿತ್ರ ಕಿಶೋರ್ ಕುಮಾರ್ ಬೋಳಾರ್

ಬೆಂಗಳೂರು: ಶನಿವಾರ ಸಂಜೆಯ ಸೂರ್ಯ ಪಶ್ಚಿಮದತ್ತ ಜಾರುವ ಹೊತ್ತಿಗೆ ಕಂಠೀರವ ಕ್ರೀಡಾಂಗಣದಲ್ಲಿ ಬೆಳಗಲಿರುವ ಹೊನಲು ಬೆಳಕಿನಲ್ಲಿ ಭಾರತ ಕ್ರೀಡಾರಂಗದ ಇತಿಹಾಸದ ಪುಸ್ತಕಕ್ಕೆ ಹೊಸ ಅಧ್ಯಾಯವೊಂದು ಸೇರ್ಪಡೆಯಾಗಲಿದೆ. ಆ ಅಧ್ಯಾಯದ ಹೆಸರು ‘ನೀರಜ್ ಚೋಪ್ರಾ ಕ್ಲಾಸಿಕ್’.

ADVERTISEMENT

ಭಾರತದಲ್ಲಿ ನಡೆಯುತ್ತಿರುವ ಮೊಟ್ಟಮೊದಲ ವಿಶ್ವ ಅಥ್ಲೆಟಿಕ್‌ ಕಾಂಟಿನೆಂಟಲ್‌ ಟೂರ್‌ ಗೋಲ್ಡ್‌ ಲೆವೆಲ್ ಅಥವಾ ವಿಶ್ವ ಅಥ್ಲೆಟಿಕ್ಸ್ (ಡಬ್ಲ್ಯುಎ) ಕೆಟಗರಿ ಎ ಸ್ಪರ್ಧೆ ಇದಾಗಿದೆ. 

2020ರ ಟೋಕಿಯೊ ಒಲಿಂಪಿಕ್ ಕೂಟದಲ್ಲಿ ಚಿನ್ನ, 2024ರ ಪ್ಯಾರಿಸ್‌  ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಮತ್ತು ವಿಶ್ವ ಅಥ್ಲೆಟಿಕ್ಸ್‌ನಲ್ಲಿ ಚಿನ್ನದ ಸಾಧನೆ ಮಾಡಿರುವ ನೀರಜ್  ಅವರೇ ಕಳೆದ ಒಂದು ವಾರದಿಂದ ಕೂಟದ ಸಿದ್ಧತೆಗಳ ಉಸ್ತುವಾರಿಯನ್ನು ನೋಡಿಕೊಳ್ಳುತ್ತಿದ್ದಾರೆ. ಅದರೊಂದಿಗೆ ತಮ್ಮ ಅಭ್ಯಾಸವನ್ನೂ ಮಾಡುತ್ತಿದ್ದಾರೆ. ಅವರಿಗೆ ಸ್ಪರ್ಧೆಯೊಡ್ಡಲು ಪೋಲೆಂಡ್‌ನ ಸೈಪ್ರಿಯಾನ್ ಮ್ರೈಜಿಗ್ಲಾಡ್, ಬ್ರೆಜಿಲ್‌ನ ಲೂಯಿಸ್ ಮಾರಿಸಿಯೊ ಡಿಸಿಲ್ವಾ, ಜರ್ಮನಿಯ ಥಾಮಸ್ ರೊಲೆ, ಅಮೆರಿಕದ ಕರ್ಟಿಸ್ ಥಾಮ್ಸನ್‌ ಮತ್ತು ಕೆನ್ಯಾದ ಜೂಲಿಯಸ್ ಯೆಗೊ, ಶ್ರೀಲಂಕೆಯ ರುಮೇಶ್ ಪತಿರಾಗೆ ಅವರೂ ಸಿದ್ಧರಾಗಿದ್ದಾರೆ. 

ನೀರಜ್ ಯಶೋಗಾಥೆಯ ಪ್ರಭಾವಳಿಯಿಂದಾಗಿ ಭಾರತದಲ್ಲಿ ಜಾವೆಲಿನ್ ಥ್ರೋ ಕ್ರೀಡೆಯತ್ತ ಒಲವು ಹೆಚ್ಚುತ್ತಿರುವುದರ ನಿದರ್ಶನ ಈ ಕೂಟದಲ್ಲಿ ಕಾಣಸಿಗುತ್ತಿದೆ. ಯುವ ಅಥ್ಲೀಟ್‌ಗಳಾದ ಸಚಿನ್ ಯಾದವ್, ರೋಹಿತ್ ಯಾದವ್, ಸಾಹಿಲ್ ಸಿಲವಾಲ್ ಮತ್ತು ಯಶ್ ವೀರ್ ಸಿಂಗ್ ಕೂಡ ದಿಗ್ಗಜರೊಂದಿಗೆ ಕಣಕ್ಕಿಳಿದು ತಮ್ಮ ಭುಜಬಲ ಪರೀಕ್ಷೆಗೊಡ್ಡಲು ಕಾತುರರಾಗಿದ್ದಾರೆ. ಕಿಶೋರ್ ಕುಮಾರ್ ಜೇನಾ ಕೂಡ ಈ ಮೊದಲು ಕಣದಲ್ಲಿದ್ದರು. ಆದರೆ ಈಚೆಗೆ ಗಾಯವಾಗಿದ್ದರಿಂದ ಹಿಂದೆ ಸರಿದರು. 

‘ಇಂತಹದೊಂದು ದೊಡ್ಡ ಮಟ್ಟದ ಜಾವೆಲಿನ್ ಕೂಟ ನಡೆಯುತ್ತದೆ ಎಂದೂ ನಾನು ಕನಸಿನಲ್ಲಿಯೂ ಅಂದುಕೊಂಡಿರಲಿಲ್ಲ. ಇದೀಗ ಅದು ನಡೆಯಲಿದೆ ಎಂಬುದೇ ನನಗೆ ಪುಳಕ ಮೂಡಿಸುತ್ತಿದೆ. ಇಲ್ಲಿ ಭಾಗವಹಿಸುವ ಅಥ್ಲೀಟ್‌ಗಳು ಎಷ್ಟು ದೂರ ಥ್ರೋ ಮಾಡಲಿದ್ದಾರೆ, ಯಾವ ಪದಕ ಜಯಿಸುವರು ಎಂಬಿತ್ಯಾದಿ ವಿಷಯಗಳನ್ನು ಪಕ್ಕಕ್ಕಿಟ್ಟುಬಿಡಿ. ಈ ಆಟದ ಸೊಬಗನ್ನು ಮನದುಂಬಿ ಆಸ್ವಾದಿಸಿಕೊಳ್ಳಿ. ಏಕೆಂದರೆ;  ಈ ಕೂಟವು ಭಾರತದ ಕ್ರೀಡಾಕ್ಷೇತ್ರಕ್ಕೆ ಹೊಸ ದಿಕ್ಸೂಚಿಯಾಗುವ ನಿರೀಕ್ಷೆ ಇದೆ’ ಎಂದು ನೀರಜ್  ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಹೇಳಿದರು. 

ಕಳೆದ ನಾಲ್ಕು ವರ್ಷಗಳಿಂದ ನೀರಜ್ ಅವರು 90 ಮೀಟರ್ಸ್‌ ದೂರ ಥ್ರೋ ಮಾಡುವ ಪ್ರಯತ್ನದಲ್ಲಿದ್ದರು. ಆದರೆ ಇತ್ತೀಚೆಗಷ್ಟೇ ದೋಹಾದಲ್ಲಿ ನಡೆದಿದ್ದ ಡೈಮಂಡ್ ಲೀಗ್‌ನಲ್ಲಿ ಅವರು 90.23 ಮೀಟರ್ ದೂರ ಥ್ರೋ ಸಾಧನೆ ಮಾಡಿದ್ದರು. 

‘ಇದೆಲ್ಲವೂ ಬರೀ ಅಂಕಿ ಸಂಖ್ಯೆಯಷ್ಟೇ. ಒಬ್ಬರು ದಾಖಲೆ ಮಾಡುತ್ತಾರೆ. ಇನ್ನೊಬ್ಬರು ಅದನ್ನು ಮೀರಿ ಮತ್ತೊಂದು ದಾಖಲೆ ಬರೆಯುತ್ತಾರೆ. ದಶಕದ ಹಿಂದೆ ಜಾವೆಲಿನ್ ಥ್ರೋನಲ್ಲಿ 84 ಮೀಟರ್ಸ್‌ ಎಸೆದವರೂ ಚಾಂಪಿಯನ್ ಆಗಿದ್ದರು.  ಈಗ 90 ಮೀಟರ್ ದಾಟಬೇಕೆಂದು ಜನ ನಿರೀಕ್ಷಿಸುತ್ತಾರೆ. ಅದೆಲ್ಲಕ್ಕಿಂತ ಮುಖ್ಯ ಒಂದು ಕ್ರೀಡೆಯು ಬೆಳೆಯುತ್ತಿದೆ ಎನ್ನುವುದು ಸಂತಸದ ಸಂಗತಿ. ಟ್ರ್ಯಾಕ್‌ ಸ್ಪರ್ಧೆಗಳಲ್ಲಿ ಒಂದಾಗಿರುವ ಜಾವೆಲಿನ್ ಥ್ರೋಗೆ ಭಾರತದಲ್ಲಿ ದೊಡ್ಡ ಗೌರವ ಸಿಗುತ್ತಿರುವುದು ವಿಶೇಷ. ಅದಕ್ಕೆ ಚೋಪ್ರಾ ಅಭಿನಂದನಾರ್ಹರು’ ಎಂದು ಜರ್ಮನಿಯ ಥಾಮಸ್ ರೊಲೆ ಸುದ್ದಿಗೋಷ್ಠಿಯಲ್ಲಿ ಹೇಳಿದರು. ಅವರು 2016ರ ರಿಯೊ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಗೆದ್ದಿದ್ದರು. 2017ರಲ್ಲಿ ಅವರು 93.90 ಮೀ ದೂರ ಥ್ರೋ ಸಾಧನೆ ಮಾಡಿದ್ದರು. ಈ ಕೂಟದಲ್ಲಿ ಭಾಗವಹಿಸುತ್ತಿರುವ ಕೆನ್ಯಾದ ಜೂಲಿಯಸ್ ಕೂಡ 2015ರಲ್ಲಿ  92.72 ಮೀ. ಥ್ರೋ ಸಾಧಿಸಿದ್ದರು. 

ಇದರಿಂದಾಗಿ ‘ನೀರಜ್ ಚೋಪ್ರಾ ಕ್ಲಾಸಿಕ್’ ಕೂಟದಲ್ಲಿ ಪೈಪೋಟಿ ರಂಗೇರುವ ನಿರೀಕ್ಷೆ ಗರಿಗೆದರಿದೆ. 

ಸ್ಪರ್ಧಾ ಕಣದಲ್ಲಿರುವ ಅಥ್ಲೀಟ್‌ಗಳು

l ನೀರಜ್ ಚೋಪ್ರಾ (ಭಾರತ)

ಒಲಿಂಪಿಕ್ಸ್‌: 2020 (ಚಿನ್ನ), 2024 (ಬೆಳ್ಳಿ)

ವಿಶ್ವ ಅಥ್ಲೆಟಿಕ್ಸ್ : 2022 (ಬೆಳ್ಳಿ),
2023 (ಚಿನ್ನ)

ಡೈಮಂಡ್ ಲೀಗ್: 2022 (ಚಿನ್ನ), 2023 (ಬೆಳ್ಳಿ), 2024(ಬೆಳ್ಳಿ)

ಶ್ರೇಷ್ಠ ಥ್ರೋ: 90.23 ಮೀ (2025)

l ಥಾಮಸ್ ರೊಲೆ (ಜರ್ಮನಿ) 

ಒಲಿಂಪಿಕ್ಸ್: 2016 (ಚಿನ್ನ)

ಯುರೋಪಿಯನ್ ಚಾಂಪಿಯನ್‌ಷಿಪ್ 2018 (ಚಿನ್ನ)

ಕಾಂಟಿನೆಂಟಲ್ ಕಪ್ 2018 (ಚಿನ್ನ)

ಶ್ರೇಷ್ಠ : 93.90ಮೀ

ವಯಸ್ಸು: 33

l ಜೂಲಿಯಸ್ ಯೆಗೊ (ಕೆನ್ಯಾ)

ಒಲಿಂಪಿಕ್ಸ್: 2016 (ಬೆಳ್ಳಿ)

ವಿಶ್ವ ಚಾಂಪಿಯನ್‌ಷಿಪ್: 2015 (ಚಿನ್ನ)

ಶ್ರೇಷ್ಠ: 92.72 ಮೀ

ವಯಸ್ಸು: 36

l ಲೂಯಿಸ್ ಮಾರಿಸಿಯೊ ಡಿ ಸಿಲ್ವಾ (ಬ್ರೆಜಿಲ್)

ಸೌತ್‌ ಅಮೆರಿಕ 20 ವರ್ಷದೊಳಗಿನವರ ಚಾಂಪಿಯನ್‌ಷಿಪ್ (ಚಿನ್ನ)

ಪ್ಯಾರಿಸ್ ಒಲಿಂಪಿಕ್ಸ್ –2024 (11ನೇ ಸ್ಥಾನ), ಶ್ರೇಷ್ಠ: 85.91 ಮೀ

ವಯಸ್ಸು: 25

ಶ್ರೇಷ್ಠ: 85.91 ಮೀ 

l ಸೈಪ್ರಿಯಾನ್ ಮ್ರಝೈಗ್ಲಾಡ್ (ಪೊಲೆಂಡ್)

ಯುರೋಪಿಯನ್ 23 ವರ್ಷ ದೊಳಗಿನವರ ಚಾಂಪಿಯನ್‌ಷಿಪ್ 2019 (ಚಿನ್ನ),

ಜಾಗತಿಕ ವಿಶ್ವವಿದ್ಯಾಲಯ ಗೇಮ್ಸ್‌ : 2021 (ಬೆಳ್ಳಿ)

ಯುರೋಪಿಯನ್ ಥ್ರೋಯಿಂಗ್ ಕಪ್ 2025 (ಕಂಚು), ಶ್ರೇಷ್ಠ: 85.92 ಮೀ

l ಕರ್ಟಿಸ್ ಥಾಮ್ಸನ್ (ಅಮೆರಿಕ)

ಪ್ಯಾನ್ ಅಮೆರಿಕ ಗೇಮ್ಸ್ 2023 (ಚಿನ್ನ)

ಶ್ರೇಷ್ಠ: 87.76 ಮೀ 

ವಯಸ್ಸು: 29

l ಮಾರ್ಟಿನ್ ಕೊನೆಸ್ನಿ (ಜೆಕ್ ಗಣರಾಜ್ಯ)

ರಾಷ್ಟ್ರೀಯ ಚಾಂಪಿಯನ್‌ಷಿಪ್ ಹೊಡೊನಿನ್ 2022 (ಕಂಚು)

ಕ್ಲಾಡ್ನೊ ಹಾಜಿ ಕ್ಲಾಡ್ನೊ ಕೂಟ –2022 (ಕಂಚು)

ಶ್ರೇಷ್ಠ: 79.86 ಮೀ

ವಯಸ್ಸು:25

l ರುಮೇಶ್ ಪತಿರಾಗೆ (ಶ್ರೀಲಂಕಾ)

ವಿಶ್ವ 20 ವರ್ಷದೊಳಗಿನವರ ಚಾಂಪಿಯನ್‌ಷಿಪ್‌ನಲ್ಲಿ ಸ್ಪರ್ಧೆ

ಶ್ರೇಷ್ಠ: 85.41 ಮೀ

ವಯಸ್ಸು: 22

l ಸಚಿನ್ ಯಾದವ್ (ಭಾರತ)

ಏಷ್ಯನ್ ಚಾಂಪಿಯನ್‌ಷಿಪ್‌: ಬೆಳ್ಳಿ

ಶ್ರೇಷ್ಠ: 85.16 ಮೀ

ವಯಸ್ಸು 25

l ರೋಹಿತ್ ಯಾದವ್ (ಭಾರತ)

ಶ್ರೇಷ್ಠ: 83.4 ಮೀ

2023ರ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್‌ಗೆ ಆಯ್ಕೆಯಾಗಿದ್ದರು. ಆದರೆ ಗಾಯಗೊಂಡಿದ್ದರಿಂದ ಹಿಂದೆ ಸರಿದಿದ್ದರು.

l ಸಾಹಿಲ್ ಸಿಲ್ವಾಲ್ (ಭಾರತ)

ವಯಸ್ಸು: 24

ಶ್ರೇಷ್ಠ: 81.81 ಮೀ

ರಾಷ್ಟ್ರೀಯ ಚಾಂಪಿಯನ್

ಅಂತರರಾಷ್ಟ್ರೀಯ ಕೂಟಗಳಲ್ಲಿ ಸ್ಪರ್ಧೆ

l ಯಶ್‌ ವೀರ್‌ ಸಿಂಗ್ (ಭಾರತ)

ವಯಸ್ಸು: 23

ಶ್ರೇಷ್ಠ: 82.57 ಮೀ

ಭಾರತದ ಕ್ರೀಡೆಗೆ ಶಕ್ತಿ ತುಂಬುವ ನಿರೀಕ್ಷೆ

ಬೆಂಗಳೂರಿನಲ್ಲಿ ನೀರಜ್ ಚೋಪ್ರಾ ಕ್ಲಾಸಿಕ್ ನಡೆಯುತ್ತಿರುವುದು ಬಹಳ ಖುಷಿಯ ವಿಷಯ. ಇದೊಂದು ಐತಿಹಾಸಿಕ ಕೂಟವಾಗಲಿದೆ. ಜಾವೆಲಿನ್ ಥ್ರೋ ಕ್ರೀಡೆಗೆ ಭವಿಷ್ಯದಲ್ಲಿ ಬಹಳಷ್ಟು ಪ್ರೋತ್ಸಾಹ ಸಿಗಲು ಕಾರಣವಾಗಲಿದೆ. ಈ ಕೂಟಕ್ಕೆ ಈಗ ಬಹಳಷ್ಟು ಖ್ಯಾತನಾಮ ಸಂಸ್ಥೆಗಳು ಪ್ರಾಯೋಜಕತ್ವ ನೀಡುತ್ತಿವೆ. ಅದರಿಂದಾಗಿ ಮುಂದಿನ ದಿನಗಳಲ್ಲಿ ಜಾವೆಲಿನ್ ಅಥ್ಲೀಟ್‌ಗಳಿಗೂ ಉತ್ತಮ ಮೊತ್ತ ಪ್ರಾಯೋಜಕತ್ವ ದೊರೆಯುವ ನಿರೀಕ್ಷೆ ಮೂಡಿದೆ. ನೀರಜ್ ಸಾಧನೆಯಿಂದಾಗಿ ಬಹಳಷ್ಟು ಮಕ್ಕಳು ಈ ಕ್ರೀಡೆಯತ್ತ ಒಲವು ತೋರುತ್ತಿದ್ದಾರೆ. ಆದ್ದರಿಂದ ಈ ಕೂಟ ಮಹತ್ವ ಪಡೆದಿದೆ.  ಈ ಕ್ರೀಡೆಯಲ್ಲಿ ಬಳಕೆಯಾಗುವ ಸಲಕರಣೆಗಳು ಬಹಳಷ್ಟು ದುಬಾರಿಯಾಗಿವೆ. ಆದ್ದರಿಂದ ಆರ್ಥಿಕ ಬೆಂಬಲ ಅಗತ್ಯವಾಗಿದೆ. ಮಕ್ಕಳಿಗೆ ಉತ್ತಮ ಪ್ರೋತ್ಸಾಹ ದೊರೆತರೆ ಕ್ರೀಡೆ ಬೆಳೆಯಲಿದೆ.

– ಕಾಶಿನಾಥ್ ನಾಯ್ಕ (ಮೂಲತಃ ಉತ್ತರ ಕನ್ನಡ ಜಿಲ್ಲೆಯವರು. 2010ರ ಕಾಮನ್‌ವೆಲ್ತ್‌ ಗೇಮ್ಸ್‌ನಲ್ಲಿ ಕಂಚುಗೆದ್ದ ಜಾವೆಲಿನ್ ಥ್ರೋಪಟು. ಪುಣೆ ಡಿಫೆನ್ಸ್ ಅಕಾಡೆಮಿಯಲ್ಲಿ ಕೋಚ್ ಆಗಿದ್ದಾಗ ನೀರಜ್ ಅವರಿಗೆ ಕೆಲಕಾಲ ಮಾರ್ಗದರ್ಶನ ನೀಡಿದ್ದರು. ಸದ್ಯ ಕುವೈತ್ ತಂಡದ ಕೋಚ್ ಆಗಿದ್ದಾರೆ)

ಮೊಂಡೊ ಕ್ಲಾಸಿಕ್ ಪೋಲ್‌ವಾಲ್ಟ್‌ 

ಜಾವೆಲಿನ್ ಥ್ರೋ ಟ್ರ್ಯಾಕ್ ಮತ್ತು ಫೀಲ್ಡ್‌ ಕ್ರೀಡೆಗಳಲ್ಲಿ ಒಂದು ವಿಭಾಗವಷ್ಟೇ.  ಈ ಸ್ಪರ್ಧೆಯು ಯಾವಾಗಲೂ ಟ್ರ್ಯಾಕ್‌ ಮತ್ತು ಫೀಲ್ಡ್‌ನಲ್ಲಿ ಆಗುತ್ತದೆ. ಆದರೆ ಇದೀಗ ಇದೊಂದೇ ಕ್ರೀಡೆಯನ್ನು ಉನ್ನತ ದರ್ಜೆಯ ಆಹ್ವಾನಿತ ಸ್ಪರ್ಧೆಯಾಗಿ ನಡೆಸಲಾಗುತ್ತಿದೆ. ಭಾರತದಲ್ಲಿ ಇಂತಹ ಪ್ರಯತ್ನ ಇದೇ ಮೊದಲು.  ಸ್ವೀಡನ್‌ನಲ್ಲಿ ಪೋಲ್‌ವಾಲ್ಟ್‌ನಲ್ಲಿ ಇದೇ ರೀತಿಯ ಪ್ರಯತ್ನ ಯಶಸ್ವಿಯಾಗಿದೆ. ಮೊಂಡೊ ಕ್ಲಾಸಿಕ್‌ ನಡೆಸಲಾಗುತ್ತದೆ. ವಿಶ್ವದಾಖಲೆ ವೀರ ಮತ್ತು ಒಲಿಂಪಿಕ್ ಚಾಂಪಿಯನ್ ಅರ್ಮಾಂಡೊ ಡುಪ್ಲಾಂಟೀಸ್ ಅವರ ತವರೂರು ಉಪ್ಪಸಲಾದಲ್ಲಿ ‘ಮೊಂಡೊ ಕ್ಲಾಸಿಕ್’ ಆಯೋಜನೆಯಾಗುತ್ತದೆ. ಡುಪ್ಲಾಂಟೀಸ್ ಅವರು ತಮ್ಮ ದಾಖಲೆಯನ್ನೇ 15 ಬಾರಿ ಮುರಿದಿರುವ ದಿಗ್ಗಜ. 

ಸ್ಪರ್ಧೆಯ ಆರಂಭ: ಸಂಜೆ 6ರಿಂದ

ನೇರಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್‌ ನೆಟ್‌ವರ್ಕ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.