ADVERTISEMENT

World Championships: ನೀರಜ್ ಫೈನಲ್‌ಗೆ ಲಗ್ಗೆ, ಒಲಿಂಪಿಕ್ಸ್‌ಗೆ ಅರ್ಹತೆ

ಪಿಟಿಐ
Published 25 ಆಗಸ್ಟ್ 2023, 10:35 IST
Last Updated 25 ಆಗಸ್ಟ್ 2023, 10:35 IST
ನೀರಜ್ ಚೋಪ್ರಾ
ನೀರಜ್ ಚೋಪ್ರಾ   (ಪಿಟಿಐ ಚಿತ್ರ)

ಬುಡಾಪೆಸ್ಟ್‌ (ಪಿಟಿಐ): ಮೊದಲ ಯತ್ನದಲ್ಲೆ ಜಾವೆಲಿನ್‌ಅನ್ನು ಅಮೋಘವಾಗಿ 88.77 ಮೀ. ದೂರಕ್ಕೆಸೆದ ನೀರಜ್‌ ಜೋಪ್ರಾ ನಿರೀಕ್ಷೆಯಂತೆ ಶುಕ್ರವಾರ ವಿಶ್ವ ಅಥ್ಲೆಟಿಕ್ಸ್‌ ಚಾಂಪಿಯನ್‌ಷಿಪ್ಸ್‌ ಫೈನಲ್‌ ತಲುಪಿದರು, ಮಾತ್ರವಲ್ಲ ಮುಂದಿನ ವರ್ಷದ ಪ್ಯಾರಿಸ್‌ ಒಲಿಂಪಿಕ್ಸ್‌ಗೂ ಅರ್ಹತೆ ಪಡೆದರು. ಭಾರತದ ಇನ್ನಿಬ್ಬರು– ಕನ್ನಡಿಗ ಡಿ.ಪಿ. ಮನು ಮತ್ತು ಕಿಶೋರ್‌ ಜೇನಾ ಅವರೂ ಫೈನಲ್‌ಗೆ ರಹದಾರಿ ಪಡೆದರು.

ಜಾವೆಲಿನ್‌ ಫೈನಲ್‌ ಭಾನುವಾರ ನಡೆಯಲಿದೆ.

ಮನು 81.31 ಮೀ. ದೂರ ಎಸೆದರೆ, ಕಿಶೋರ್‌ ಜೇನಾ 80.55 ಮೀ. ಸಾಧನೆ ದಾಖಲಿಸಿದರು. ಇದೇ ಮೊದಲ ಬಾರಿ ಭಾರತದ ಮೂವರು ವಿಶ್ವ ಚಾಂಪಿಯನ್‌ಷಿಪ್‌ನ ಒಂದೇ ಸ್ಪರ್ಧೆಯಲ್ಲಿ ಫೈನಲ್ ತಲುಪಿದಂತಾಗಿದೆ. ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯಲು 85.50 ಮೀ. ಮಾನದಂಡ ನಿಗದಿಪಡಿಸಲಾಗಿದೆ. ಜುಲೈ 1 ರಿಂದ ಮುಂದಿನ ಒಲಿಂಪಿಕ್ಸ್‌ ಅರ್ಹತೆಗೆ ಅಥ್ಲೀಟುಗಳ ಸಾಧನೆ ಪರಿಗಣಿಸಲಾಗುತ್ತಿದೆ.

ADVERTISEMENT

25 ವರ್ಷದ ಚೋಪ್ರಾ ಅವರ ಅರ್ಹತಾ ಸುತ್ತು ಕೆಲವೇ ನಿಮಿಷಗಳಲ್ಲಿ ಮುಕ್ತಾಯ ಕಂಡಿತು. ಅವರು ‘ಎ’ ಗುಂಪಿನ ಕ್ವಾಲಿಫಿಕೇಷನ್‌ ರೌಂಡ್‌ನ ಮೊದಲ ಯತ್ನದಲ್ಲೇ ಉತ್ತಮ ಸಾಧನೆ ತೋರಿ ಅರ್ಹತೆ ಖಚಿತವಾದ ನಂತರ ಕ್ರೀಡಾಂಗಣದಿಂದ ನಿರ್ಗಮಿಸಿದರು. 2022ರ ಚಾಂಪಿಯನ್‌ಷಿಪ್‌ನಲ್ಲಿ (ಅಮೆರಿಕದ ಯುಜೀನ್) ಭಾರತದ ಜಾವೆಲಿನ್‌ ತಾರೆ ಬೆಳ್ಳಿಯ ಪದಕ ಗೆದ್ದುಕೊಂಡಿದ್ದರು. ಚೋಪ್ರಾ ಅವರ ಶ್ರೇಷ್ಠ ಸಾಧನೆ 89.94 ಮೀ. ಆಗಿದೆ.

83 ಮೀ. ದೂರ ಎಸೆದವರನ್ನು ಅಥವಾ ‘ಎ’ ಮತ್ತು ‘ಬಿ’ ಗುಂಪಿನಿಂದ ಉತ್ತಮ ಸಾಧನೆ ದಾಖಲಿಸಿದ ಒಟ್ಟು 12 ಅಥ್ಲೀಟುಗಳು ಫೈನಲ್‌ಗೆ ಅರ್ಹತೆ ಪಡೆಯುತ್ತಾರೆ.

‘ವಾರ್ಮ್‌ ಅಪ್‌ನಲ್ಲಿ (ಸ್ಪರ್ಧೆ ಪೂರ್ವ ತಾಲೀಮು) ತೊಡಗಿದಾಗಲೇ ನಾನು ಒಂದೇ ಯತ್ನದಲ್ಲಿ ಅರ್ಹತೆ ಪಡೆಯಬಲ್ಲೆನೆಂಬ ವಿಶ್ವಾಸ ಮೂಡಿತು. ಜಾವೆಲಿನ್‌ ಕೈಯಿಂದ ಹೊರಟಾಗಲೇ ನನಗೆ ಧೈರ್ಯವಾಗಿತ್ತು. ಫಲಿತಾಂಶದಿಂದ ತೃಪ್ತನಾಗಿದ್ದೇನೆ. ಫೈನಲ್‌ಗೆ ನನ್ನ ಪೂರ್ಣ ಸಾಮರ್ಥ್ಯ ಬಳಸಲು ಅವಕಾಶವಾಗಿದೆ. ಇಲ್ಲಿ ಶೇ 90ರಷ್ಟು ಶಕ್ತಿ ಮಾತ್ರ ವ್ಯಯಿಸಿದ್ದೆ’ ಎಂದು ಚೋಪ್ರಾ ಪ್ರತಿಕ್ರಿಯಿಸಿದರು.

‘ಫೈನಲ್‌ನಲ್ಲಿ ನನ್ನೆಲ್ಲಾ ಸಾಮರ್ಥ್ಯ ತೊಡಗಿಸಿಕೊಂಡು ವಿಶ್ವ ಚಾಂಪಿಯನ್‌ಷಿಪ್‌ನಲ್ಲೂ ಚಿನ್ನ ಗೆಲ್ಲಬಯಸುವೆ’ ಎಂದು ಒಲಿಂಪಿಕ್ ಚಾಂಪಿಯನ್‌ ಕೂಡ ಆಗಿರುವ ನೀರಜ್ ಹೇಳಿದರು.‌

ಮಿಂಚಿದ ಮನು:

ಚೋಪ್ರಾ ಅವರ ಗುಂಪಿನಲ್ಲೇ ಇದ್ದ ಕರ್ನಾಟಕದ ಡಿ.ಪಿ. ಮನು ಎರಡನೇ ಯತ್ನದಲ್ಲಿ 81.31 ಮೀ. ಸಾಧನೆಯೊಡನೆ ಗುಂಪಿನಲ್ಲಿ ಮೂರನೇ ಹಾಗೂ ಒಟ್ಟಾರೆ ಆರನೇ ಸ್ಥಾನ ಪಡೆದರು. ಇದು ಅವರಿಗೆ ಮೊದಲ ವಿಶ್ವ ಚಾಂಪಿಯನ್‌ಷಿಪ್‌. ಅವರು ಜುಲೈನಲ್ಲಿ ಏಷ್ಯನ್‌ ಕೂಟದಲ್ಲಿ ಬೆಳ್ಳಿಯ ಪದಕ ಗೆದ್ದುಕೊಂಡಿದ್ದರು.

ಹಂಗೆರಿ ವೀಸಾ ತಿರಸ್ಕೃತಗೊಂಡು ಕೊನೆಗಳಿಗೆಯಲ್ಲಿ ಮತ್ತೆ ಪಡೆದ ಕಿಶೋರ್ ಜೇನಾ 80.55 ಮೀ. ಎಸೆತದೊಡನೆ ‘ಬಿ’ ಗುಂಪಿನಲ್ಲಿ 5ನೇ ಸ್ಥಾನ ಹಾಗೂ ಒಟ್ಟಾರೆ 9ನೇ ಸ್ಥಾನ ಪಡೆದರು. ಅವರಿಗೂ ಇದು ಮೊದಲ ವಿಶ್ವಕೂಟ.

ಅರ್ಹತಾ ಸುತ್ತಿನಲ್ಲಿ ಪ್ರತಿ ಸ್ಪರ್ಧಿಗೆ ಮೂರು ಪ್ರಯತ್ನಕ್ಕೆ ಅವಕಾಶ ಇದೆ.

ಕಾಮನ್ವೆಲ್ತ್‌ ಕೂಟದ ಹಾಲಿ ಚಾಂಪಿಯನ್‌, ಪಾಕಿಸ್ತಾನದ ಅರ್ಷದ್‌ ನದೀಮ್ 86.79 ಮೀ. ಎಸೆದು ಋತುವಿನ ಅತ್ಯುತ್ತಮ ಎಸೆತದೊಡನೆ ಫೈನಲ್‌ಗೆ ಮತ್ತು ಒಲಿಂಪಿಕ್ಸ್‌ಗೆ ಅರ್ಹತೆ ಪಡೆದರು. ‘ಬಿ’ ಗುಂಪಿನಲ್ಲಿ ಮೊದಲಿಗರಾದ ಅವರು ಒಟ್ಟಾರೆ ಎರಡನೇ ಸ್ಥಾನ ಪಡೆದರು. ಏಷ್ಯನ್‌ ಕೂಟದಲ್ಲಿ ಚೋಪ್ರಾ ಚಿನ್ನ ಗೆದ್ದಾಗ ನದೀಮ್ ಕಂಚಿನ ಪದಕ ಗಳಿಸಿದ್ದರು.

ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಗೆದ್ದಿದ್ದ ಯಾಕುಬ್‌ ವಡ್ಲೇಯ್ಚ್‌ (ಝೆಕ್‌ ರಿಪಬ್ಲಿಕ್‌) 83.50 ಮೀ. ಎಸೆತದೊಡನೆ ‘ಬಿ’ ಗುಂಪಿನಲ್ಲಿ ಎರಡನೇ ಮತ್ತು ಒಟ್ಟಾರೆ ಮೂರನೇ ಸ್ಥಾನ ಪಡೆದರು. ಜರ್ಮನಿಯ ಜೂಲಿಯನ್ ವೇಬರ್ (82.39 ಮೀ.) ಒಟ್ಟಾರೆ ನಾಲ್ಕನೇಯವರಾದರು.

ಹಾಲಿ ಚಾಂಪಿಯನ್‌ ನಿರ್ಗಮನ:

ಲಯ ಕಂಡುಕೊಳ್ಳಲು ಪರದಾಡುತ್ತಿದ್ದ ಹಾಲಿ ಚಾಂಪಿಯನ್‌ ಗ್ರೆನೆಡಾದ ಆ್ಯಂಡರ್ಸನ್‌ ಪೀಟರ್ಸ್‌ ಹೊರಬಿದ್ದರು. ಅವರು ಉತ್ತಮ ಎಸೆತ  78.49 ಮೀ. ಆಗಿದ್ದು ಒಟ್ಟಾರೆ 16ನೇ (ಎ ಗುಂಪಿನಲ್ಲಿ ಏಳನೇ) ಸ್ಥಾನಕ್ಕೆ ಸರಿದರು.

ಚೋಪ್ರಾ ಈಗಾಗಲೇ ಒಲಿಂಪಿಕ್ಸ್‌ (ಟೋಕಿಯೊ 2021), ಏಷ್ಯನ್‌ ಗೇಮ್ಸ್‌ (2018) ಮತ್ತು ಕಾಮನ್‌ವೆಲ್ತ್‌ ಕ್ರೀಡೆ (2018)ಗಳಲ್ಲಿ ಚಿನ್ನದ ಪದಕದ ಜೊತೆಗೆ, ಕಳೆದ ವರ್ಷ ಡೈಮಂಡ್‌ ಲೀಗ್‌ ಚಾಂಪಿಯನ್ ಕೂಡ ಆಗಿದ್ದಾರೆ. ಅವರಿಗೆ ವಿಶ್ವ ಚಾಂಪಿಯನ್‌ ಚಿನ್ನ ಮಾತ್ರ ಗೆಲ್ಲಲು ಉಳಿದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.