ADVERTISEMENT

ವೆಲ್ ಸ್ಪೋರ್ಟ್ಸ್ ಮೂಲಕ ಹೊಸ ಅಧ್ಯಾಯ ಆರಂಭಿಸಿದ ‘ಚಿನ್ನದ ಹುಡುಗ’ ನೀರಜ್ ಚೋಪ್ರಾ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 5 ಜನವರಿ 2026, 11:05 IST
Last Updated 5 ಜನವರಿ 2026, 11:05 IST
<div class="paragraphs"><p>ನೀರಜ್ ಚೋಪ್ರಾ</p></div>

ನೀರಜ್ ಚೋಪ್ರಾ

   

ಬೆಂಗಳೂರು: ಭಾರತದ ತಾರಾ ಜಾವೆಲಿನ್ ಥ್ರೋ ಎಸೆತಗಾರ ನೀರಜ್ ಚೋಪ್ರಾ ಅವರು ಜೆಎಸ್‌ಡಬ್ಲ್ಯೂ (JSW) ಸ್ಪೋರ್ಟ್ಸ್ ಜೊತೆಗಿನ ಪಾಲುದಾರಿಕೆಯನ್ನು ಕೊನೆಗೊಳಿಸಿರುವುದಾಗಿ ಅಧಿಕೃತವಾಗಿ ಘೋಷಿಸಿದ್ದಾರೆ.

ನೀರಜ್ ಚೋಪ್ರಾ ಅವರು ತಮ್ಮದೇ ಕ್ರೀಡಾಪಟುಗಳ ನಿರ್ವಹಣಾ ಸಂಸ್ಥೆ ‘ವೆಲ್ ಸ್ಪೋರ್ಟ್ಸ್’ ಅನ್ನು ಪ್ರಾರಂಭಿಸುವ ಮೂಲಕ ಹೊಸ ಅಧ್ಯಾಯವನ್ನು ಆರಂಭಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ 10 ವರ್ಷಗಳ JSW ಜೊತೆಗಿನ ಒಡಬಂಡಿಕೆಯನ್ನು ಕೊನೆಗೊಳಿಸಿದ್ದಾರೆ.

ADVERTISEMENT

JSW ಸ್ಪೋರ್ಟ್ಸ್ ಜೊತೆಗಿನ ನೀರಜ್ ಚೋಪ್ರಾ ಅವರ ಸಂಪರ್ಕ ಪ್ರಾರಂಭವಾಗಿದ್ದು 2016ರಲ್ಲಿ. JSW ಸ್ಪೋರ್ಟ್ಸ್ ಎಕ್ಸಲೆನ್ಸ್ ಪ್ರೋಗ್ರಾಂ (SEP) ಮೂಲಕ ಅವರನ್ನು ಮೊದಲ ಬಾರಿಗೆ ಪರಿಚಯಿಸಿತ್ತು.

ನೀರಜ್ ಚೋಪ್ರಾ ಅವರು, ಟೋಕಿಯೋ ಒಲಿಂಪಿಕ್ಸ್‌ 2020ರಲ್ಲಿ ಟ್ರ್ಯಾಕ್ ಮತ್ತು ಫೀಲ್ಡ್ ವಿಭಾಗದಲ್ಲಿ ಚಿನ್ನದ ಪದಕ ಗೆದ್ದ ಮೊದಲ ಭಾರತೀಯ ಎನಿಸಿಕೊಂಡಿದ್ದಾರೆ. 2023ರಲ್ಲಿ ನಡೆದ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನದ ಪದಕ ಹಾಗೂ 2024ರ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ಗೆದ್ದಿದ್ದಾರೆ. ಇಷ್ಟು ಮಾತ್ರವಲ್ಲ, ಅನೇಕ ಜಾಗತಿಕ ವೇದಿಕೆಗಳಲ್ಲಿ ಪದಕ ಗಳಿಸಿದ್ದಾರೆ. ಹೀಗಾಗಿ ಅವರಿಗೆ ಭಾರತದ ‘ಚಿನ್ನದ ಹುಡುಗ’ ಎಂದು ಕರೆಯಲಾಗುತ್ತದೆ.

ನೀರಜ್ ಚೋಪ್ರಾ ಅವರು, ತಮ್ಮದೇ ಸ್ವಂತ ಉದ್ಯಮ ‘ವೆಲ್ ಸ್ಪೋರ್ಟ್ಸ್’ ಸ್ಥಾಪಿಸಲು ಮುಂದಾಗಿದ್ದಾರೆ. ಹಾಗಾಗಿ JSW ಸ್ಪೋರ್ಟ್ಸ್ ಜೊತೆ ಹೊಂದಿದ್ದ ಪಾಲುದಾರಿಕೆಯಿಂದ ಹೊರಬಂದಿದ್ದಾರೆ. ಇದಕ್ಕೆ ಜೆಎಸ್‌ಡಬ್ಲ್ಯೂ ಕೂಡ ಒಪ್ಪಿಗೆ ಸೂಚಿಸಿದೆ.

ಈ ಕುರಿತು ಮಾತನಾಡಿದ JSW ಸ್ಪೋರ್ಟ್ಸ್‌ನ ಸಿಇಒ ದಿವ್ಯಾಂಶು ಸಿಂಗ್, ‘ನೀರಜ್ ಅವರೊಂದಿಗೆ ಕೆಲಸ ಮಾಡಿರುವುದು JSW ಸ್ಪೋರ್ಟ್ಸ್‌ನ ಎಲ್ಲರಿಗೂ ಅದ್ಭುತ ಅನುಭವವಾಗಿತ್ತು. ಅವರ ಮುಂದಿನ ಎಲ್ಲಾ ಕೆಲಸಗಳಿಗೆ ನಾವು ಶುಭಾಶಯಗಳನ್ನು ಕೋರುತ್ತೇವೆ’ ಎಂದು ತಿಳಿಸಿದ್ದಾರೆ.

ನೀರಜ್ ಚೋಪ್ರಾ ಮಾತನಾಡಿ, ‘ನನ್ನ ವೃತ್ತಿಜೀವನದಲ್ಲಿ JSW ಸ್ಪೋರ್ಟ್ಸ್ ನಿರ್ಣಾಯಕ ಪಾತ್ರವಹಿಸಿದೆ. ಅವರ ಬೆಂಬಲ ಮತ್ತು ಸಹಕಾರಕ್ಕೆ ನಾನು ಸದಾ ಕೃತಜ್ಞನಾಗಿರುತ್ತೇನೆ’ ಎಂದು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.