ಭಾರತದ ಜಾವೆಲಿನ್ ತಾರೆ ನೀರಜ್ ಚೋಪ್ರಾ
ಜೂರಿಚ್: ಭಾರತದ ಜಾವೆಲಿನ್ ಥ್ರೋ ತಾರೆ ನೀರಜ್ ಚೋಪ್ರಾ ಅವರು ಗುರುವಾರ ರಾತ್ರಿ ಇಲ್ಲಿ ನಡೆದ ಡೈಮಂಡ್ ಲೀಗ್‌ನಲ್ಲಿ ಬೆಳ್ಳಿ ಪದಕ ಗೆದ್ದರು. ಲೀಗ್‌ನಲ್ಲಿ ಇದು ನಾಲ್ಕನೇ ಪದಕ ಮತ್ತು ಹ್ಯಾಟ್ರಿಕ್ ಬೆಳ್ಳಿ ಆಗಿದೆ.
2022ರಲ್ಲಿ ಚಿನ್ನ ಗೆದ್ದರೆ, 2023 ಮತ್ತು 24ರಲ್ಲಿ ತಲಾ ಬೆಳ್ಳಿ ಪದಕ ಜಯಿಸಿದ್ದರು. ಮೇ ತಿಂಗಳಿನಲ್ಲಿ ನಡೆದ ದೋಹಾ ಡೈಮಂಡ್ ಲೀಗ್ ಕೂಟದಲ್ಲಿ ಜೀವನಶ್ರೇಷ್ಠ 90.30 ಮೀಟರ್ ಸಾಧನೆ ಮೆರೆದಿದ್ದ ನೀರಜ್, ಇಲ್ಲಿ 85 ಮೀ. ಗಡಿ ದಾಟಲು ಪ್ರಯಾಸಪಟ್ಟರು.
ಹಾಲಿ ವಿಶ್ವ ಚಾಂಪಿಯನ್ ಆಗಿರುವ 27 ವರ್ಷದ ನೀರಜ್ ಮೊದಲೆರಡು ಪ್ರಯತ್ನದಲ್ಲಿ 84.35 ಮೀ, 82 ಮೀ. ದೂರ ಈಟಿ ಎಸೆದರು. ನಂತರದ ಮೂರು ಪ್ರಯತ್ನಗಳು ಫೌಲ್ ಆದವು. ಕೊನೆಯ ಪ್ರಯತ್ನದಲ್ಲಿ 85.01 ಮೀ. ಸಾಧನೆಯೊಂದಿಗೆ ಬೆಳ್ಳಿ ಖಚಿತ ಪಡಿಸಿಕೊಂಡರು.
ಜರ್ಮನಿಯ ತಾರೆ ಜೂನಿಯನ್ ವೆಬರ್ ವೈಯಕ್ತಿಕ ಶ್ರೇಷ್ಠ ಸಾಧನೆಯೊಂದಿಗೆ ಚಿನ್ನದ ಪದಕ ಕೊರಳಿಗೇರಿಸಿಕೊಂಡರು. ಅವರು ಮೊದಲೆರಡು ಪ್ರಯತ್ನದಲ್ಲಿ ಕ್ರಮವಾಗಿ 91.37 ಮೀ, 91.51 ಮೀ. ಸಾಧನೆ ಮಾಡಿ, ಆರಂಭದಲ್ಲೇ ಅಗ್ರಸ್ಥಾನಿಯಾದರು. ಮೊದಲ ಪ್ರಯತ್ನದಲ್ಲಿ 84.95 ಮೀ. ಈಟಿ ಎಸೆದ ಟ್ರಿನಿಡಾದ ಕೆಶಾರ್ನ್ ವಾಲ್ಕಾಟ್ ಬೆಳ್ಳಿ ತಮ್ಮದಾಗಿಸಿಕೊಂಡರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.