ನೀರಜ್ ಚೋಪ್ರಾ, ಅರ್ಷದ್ ನದೀಮ್
(ಪಿಟಿಐ ಚಿತ್ರ)
ಟೋಕಿಯೊ: ಏಷ್ಯಾ ಕಪ್ ಕ್ರಿಕೆಟ್ ಟೂರ್ನಿಯಲ್ಲಿ ಪಾಕಿಸ್ತಾನ ವಿರುದ್ಧ ಭಾರತ ಆಡುತ್ತಿರುವುದಕ್ಕೆ ಭಾರಿ ವಿರೋಧ ವ್ಯಕ್ತವಾಗುತ್ತಿರುವ ನಡುವೆಯೇ ಮತ್ತೊಂದೆಡೆ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್‌ನಲ್ಲೂ ಭಾರತ ಹಾಗೂ ಪಾಕಿಸ್ತಾನ ಸ್ಪರ್ಧಿಗಳ ನಡುವಣ ಪೈಪೋಟಿಗೆ ವೇದಿಕೆ ಸಜ್ಜುಗೊಂಡಿದೆ.
ಜಪಾನ್‌ನ ಟೋಕಿಯೊದಲ್ಲಿ ನಡೆಯುತ್ತಿರುವ ವಿಶ್ವ ಚಾಂಪಿಯನ್‌ಷಿಪ್‌ನ ಪುರುಷರ ವಿಭಾಗದ ಜಾವೆಲಿನ್ ಥ್ರೊ ಸ್ಪರ್ಧೆಯಲ್ಲಿ ಭಾರತದ ತಾರೆ ನೀರಜ್ ಚೋಪ್ರಾ ಹಾಗೂ ಪಾಕಿಸ್ತಾನದ ಅರ್ಷದ್ ನದೀಮ್ ಮುಖಾಮುಖಿಯಾಗಲಿದ್ದಾರೆ.
ಈ ಕೂಟದಲ್ಲಿ ಅತ್ಯಂತ ನಿಕಟವಾದ ಪೈಪೋಟಿ ಸಾಧ್ಯತೆಯಿದ್ದು, ಇಬ್ಬರು ಚಿನ್ನ ಗೆಲ್ಲುವ ನಿರೀಕ್ಷೆ ಹೊಂದಿದ್ದಾರೆ.
ಸೆಪ್ಟೆಂಬರ್ 18ರಂದು ನಡೆಯುವ ಜಾವೆಲಿನ್ ಥ್ರೊ ಫೈನಲ್‌ನಲ್ಲಿ ಚಿನ್ನ ಗೆದ್ದರೆ ನೀರಜ್ ಅವರು ಸತತ ಕೂಟಗಳಲ್ಲಿ ಚಿನ್ನ ಗೆದ್ದಂತಾಗಲಿದೆ.
ಇದೇ ಟೂರ್ನಿಯಲ್ಲಿ ಭಾರತದ ನಾಲ್ವರು ಕಣದಲ್ಲಿದ್ದಾರೆ. ಸಚಿನ್ ಯಾದವ್, ಯಶವೀರ್ ಸಿಂಗ್ ಮತ್ತು ರೋಹಿತ್ ಯಾದವ್ ಸಹ ತಮ್ಮ ಸಾಮರ್ಥ್ಯ ಪ್ರದರ್ಶನ ಮಾಡಲಿದ್ದಾರೆ.
2023ರ ಬುಡಾಪೆಸ್ಟ್ ಚಾಂಪಿಯನ್‌ಷಿಪ್‌ನಲ್ಲಿ ನೀರಜ್ 88.17 ಮೀ. ಎಸೆದು ಸ್ವರ್ಣ ವಿಜೇತರಾಗಿದ್ದರು. ಪಾಕಿಸ್ತಾನದ ಅರ್ಷದ್ ನದೀಮ್ (87.62 ಮೀ.) ಮತ್ತು ಝೆಕ್ ರಿಪಬ್ಲಿಕ್‌ನ ಯಾಕೂಬ್ ವಾಡ್ಲೆಚ್ (86.67 ಮೀ.) ಕ್ರಮವಾಗಿ ಬೆಳ್ಳಿ ಮತ್ತು ಕಂಚಿನ ಪದಕ ತಮ್ಮದಾಗಿಸಿಕೊಂಡಿದ್ದರು.
ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ನೀರಜ್ ಹಿಂದಿಕ್ಕಿದ ನದೀಮ್ ಚಿನ್ನ ಗೆದ್ದಿದ್ದರು. ಒಂದು ವರ್ಷದ ನಂತರ ಈಗ ನೀರಜ್ ಮತ್ತು ನದೀಮ್ ನಡುವೆ ಸ್ಪರ್ಧೆ ನಡೆಯಲಿದೆ. ಪ್ಯಾರಿಸ್‌ನಲ್ಲಿ ನೀರಜ್ ಬೆಳ್ಳಿ ಪದಕ ಗೆದ್ದಿದ್ದರು.
2021ರಲ್ಲಿ ಒಲಿಂಪಿಕ್ ಚಿನ್ನ ಗೆದ್ದು ನೀರಜ್ ಚೋಪ್ರಾ ಇತಿಹಾಸ ನಿರ್ಮಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.