ನೀರಜ್ ಚೋಪ್ರಾ... ಬುಡಾಪೆಸ್ಟ್‌ನಲ್ಲಿ ವಿಜೇತರಾಗಿದ್ದಾಗ
ಟೋಕಿಯೊ: ಹಾಲಿ ಚಾಂಪಿಯನ್, ಭಾರತದ ಚಿನ್ನದ ಹುಡುಗ ಎಂದೇ ಖ್ಯಾತಿ ಪಡೆದಿರುವ ನೀರಜ್ ಚೋಪ್ರಾ ಬುಧವಾರ ಟೋಕಿಯೊದಲ್ಲಿ ನಡೆದ ವಿಶ್ವ ಚಾಂಪಿಯನ್‌ಶಿಪ್ ಪುರುಷರ ಜಾವೆಲಿನ್ ಥ್ರೋನಲ್ಲಿ ಫೈನಲ್‌ಗೆ ಲಗ್ಗೆ ಇಟ್ಟಿದ್ದಾರೆ. ಅವರು ತಮ್ಮ ಮೊದಲ ಎಸೆತದಲ್ಲೆ 84.85 ಮೀಟರ್ ಎಸೆಯುವ ಮೂಲಕ ಫೈನಲ್‌ಗೆ ನೇರ ಪ್ರವೇಶ ಪಡೆದುಕೊಂಡರು.
ಎರಡು ಬಾರಿಯ ಒಲಿಂಪಿಕ್ ಪದಕ ವಿಜೇತ 27 ವರ್ಷದ ನೀರಜ್, ಅರ್ಹತಾ ಸುತ್ತಿನ ಗ್ರೂಪ್ ಎ ನಲ್ಲಿ ತಮ್ಮ ಮೊದಲ ಈಟಿಯನ್ನು 84.85 ಮೀಟರ್ ದೂರಕ್ಕೆ ಎಸೆಯುವ ಮೂಲಕ ಗಮನ ಸೆಳೆದರು. ನೇರವಾಗಿ ಫೈನಲ್ ಪ್ರವೇಶ ಪಡೆಯಲು ಅವರು ಕನಿಷ್ಠ 84.50 ಮೀಟರ್ ಎಸೆಯಬೇಕಿತ್ತು. ಆದರೆ, ಅವರು ತಮ್ಮ ಮೊದಲ ಎಸೆತದಲ್ಲಿ 84.85 ಮೀಟರ್ ಎಸೆದು ಫೈನಲ್‌ಗೆ ನೇರ ಅರ್ಹತೆ ಪಡೆದುಕೊಂಡರು.
ನೀರಜ್ ಚೋಪ್ರಾ ಮೊದಲಿಗರಾಗಿ ಫೈನಲ್ ಪ್ರವೇಶ ಪಡೆದುಕೊಂಡಿದ್ದಾರೆ. ಈ ಸುತ್ತಿನಲ್ಲಿ ಅತ್ಯುತ್ತಮ ಪ್ರದರ್ಶನ ನೀಡುವ ಅಥವಾ 84.50 ಮೀಟರ್‌ಗಿಂತ ದೂರ ಎಸೆಯುವ 12 ಮಂದಿ ಜಾವೆಲಿನ್ ಎಸೆತಗಾರರು ಗುರುವಾರ ನಡೆಯಲಿರುವ ಫೈನಲ್‌ಗೆ ಅರ್ಹತೆ ಪಡೆಯಲಿದ್ದಾರೆ.
ಬುಧವಾರ ನಡೆದ 19 ಜನರ ಗ್ರೂಪ್ ಎ ಅರ್ಹತಾ ಸುತ್ತಿನಲ್ಲಿ ನೀರಜ್ ಚೋಪ್ರಾ, ಜರ್ಮನ್ ಸ್ಟಾರ್ ಜೂಲಿಯನ್ ವೆಬರ್ ಅವರೊಂದಿಗೆ ಸ್ಥಾನ ಪಡೆದಿದ್ದಾರೆ. ಜೂಲಿಯನ್ ವೆಬರ್ 87.21 ಮೀಟರ್ ದೂರ ಎಸೆದು ಫೈನಲ್‌ಗೆ ಸ್ಥಾನ ಪಡೆದುಕೊಂಡಿದ್ದಾರೆ. ಇವರ ಜೊತೆಗೆ ಕೆಶೋರ್ನ್ ವಾಲ್ಕಾಟ್, ಜಕುಬ್ ವಾಡ್ಲೆಜ್ ಮತ್ತು ಸಚಿನ್ ಯಾದವ್ ಕೂಡ ಫೈನಲ್‌ಗೆ ಲಗ್ಗೆ ಇಟ್ಟಿದ್ದಾರೆ.
18 ಸದಸ್ಯರ ಗ್ರೂಪ್ ಬಿ ತಂಡದಲ್ಲಿ ಒಲಿಂಪಿಕ್ ಚಾಂಪಿಯನ್ ಅರ್ಷದ್ ನದೀಮ್, ಆಂಡರ್ಸನ್ ಪೀಟರ್ಸ್, ಜೂಲಿಯಸ್ ಯೆಗೊ, ಲೂಯಿಜ್ ಡಾ ಸಿಲ್ವಾ, ರೋಹಿತ್ ಯಾದವ್, ಯಶ್ವೀರ್ ಸಿಂಗ್ ಮತ್ತು ಶ್ರೀಲಂಕಾದ ಉದಯೋನ್ಮುಖ ಆಟಗಾರರಾದ ರುಮೇಶ್ ತರಂಗ ಪತಿರಾಜ್ ಇತರರು ಇದ್ದಾರೆ.
ಬುಡಾಪೆಸ್ಟ್‌ನಲ್ಲಿ ನಡೆದಿದ್ದ ಕಳೆದ ಆವೃತ್ತಿಯಲ್ಲಿ ನೀರಜ್ 88.17 ಮೀಟರ್ ಎಸೆದು ಚಿನ್ನ ಗೆದ್ದಿದ್ದರು. ನದೀಮ್ (87.82 ಮೀ) ಮತ್ತು ವಾಡ್ಲೆಜ್ಚ್ (86.67 ಮೀ) ಕ್ರಮವಾಗಿ ಬೆಳ್ಳಿ ಮತ್ತು ಕಂಚಿನ ಪದಕವನ್ನು ತಮ್ಮದಾಗಿಸಿಕೊಂಡಿದ್ದರು.
ಸತತ ಎರಡು ಬಾರಿ ವಿಶ್ವ ಚಾಂಪಿಯನ್‌ಶಿಪ್ ಚಿನ್ನ ಗೆದ್ದ ವಿಶ್ವದ ಮೂರನೇ ಪುರುಷ ಜಾವೆಲಿನ್ ಎಸೆತಗಾರ ಎಂದ ಇತಿಹಾಸ ಸೃಷ್ಟಿಸುವ ಅವಕಾಶ ಚೋಪ್ರಾ ಅವರಿಗಿದೆ. ಈ ಸಾಧನೆಯನ್ನು, ಚೋಪ್ರಾ ತರಬೇತುದಾರರಾಗಿರುವ ದಂತಕಥೆ ಜಾನ್ ಝೆಲೆಜ್ನಿ (1993, 1995) ಮತ್ತು ಪೀಟರ್ಸ್ (2019, 2022) ಮಾತ್ರ ಸತತ ಎರಡು ಬಾರಿ ವಿಶ್ವ ಚಾಂಪಿಯನ್‌ಶಿಪ್ ಕಿರೀಟ ಗೆದ್ದ ಸಾಧನೆ ಮಾಡಿದ್ದಾರೆ.
2024 ರ ಪ್ಯಾರಿಸ್ ಒಲಿಂಪಿಕ್ಸ್ ನಂತರ ಚೋಪ್ರಾ ಮೊದಲ ಬಾರಿಗೆ ನದೀಮ್ ಅವರನ್ನು ಎದುರಿಸಲಿದ್ದಾರೆ. ಈ ಬಾರಿ ಫ್ರೆಂಚ್ ರಾಜಧಾನಿಯಲ್ಲಿ ತನ್ನನ್ನು ಸೋಲಿಸಿದ್ದ ನದೀಮ್ ವಿರುದ್ಧ ಸೇಡು ತೀರಿಸಿಕೊಳ್ಳುವ ಅವಕಾಶ ಅವರಿಗಿದೆ. ಪ್ಯಾರಿಸ್ ಒಲಿಂಪಿಕ್‌ನಲ್ಲಿ ನದೀಮ್ 92.97 ಮೀಟರ್ ಎಸೆದರೆ, ಚೋಪ್ರಾ 89.45 ಮೀಟರ್ ಎಸೆದು ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟುಕೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.