ADVERTISEMENT

ಚೆಸ್‌ನ ಅರಳು ಪ್ರತಿಭೆ ಆದ್ಯಾ

ಬಸವರಾಜ ದಳವಾಯಿ
Published 29 ಸೆಪ್ಟೆಂಬರ್ 2019, 19:30 IST
Last Updated 29 ಸೆಪ್ಟೆಂಬರ್ 2019, 19:30 IST
ಪಶ್ಚಿಮ ಏಷ್ಯನ್‌ ಚಾಂಪಿಯನ್‌ಷಿಪ್‌ನಲ್ಲಿ ಬೆಳ್ಳಿ ಪದಕ ಗೆದ್ದ ಸಂಭ್ರಮದಲ್ಲಿ ಆಧ್ಯಾ
ಪಶ್ಚಿಮ ಏಷ್ಯನ್‌ ಚಾಂಪಿಯನ್‌ಷಿಪ್‌ನಲ್ಲಿ ಬೆಳ್ಳಿ ಪದಕ ಗೆದ್ದ ಸಂಭ್ರಮದಲ್ಲಿ ಆಧ್ಯಾ   

ಅದು ಪಶ್ಚಿಮ ಏಷ್ಯನ್‌ ಯೂತ್‌ ಮತ್ತು ಜೂನಿಯರ್‌ ಚೆಸ್‌ ಚಾಂಪಿಯನ್‌ಷಿಪ್‌.ಬೆಂಗಳೂರಿನ ಆರು ವರ್ಷದ ಬಾಲೆಯೊಬ್ಬಳು ‘ಬೆಳ್ಳಿ’ ನಗು ಬೀರಿದ್ದು ಕಣ್ಣಿಗೆ ಕಟ್ಟಿದಂತಿತ್ತು. ಆದ್ಯಾ ರಂಗನಾಥ... ಎಳವೆಯಲ್ಲೇ ಚೆಸ್‌ನಲ್ಲಿ ಅಪರಿಮಿತ ಆಸಕ್ತಿ ಬೆಳೆಸಿಕೊಂಡಿರುವ ಹುಡುಗಿ. ಸೆಪ್ಟೆಂಬರ್‌ 4ರಿಂದ 11ರವೆರೆಗೆ ದೆಹಲಿಯಲ್ಲಿ ನಡೆದ ಈ ಚಾಂಪಿಯನ್‌ಷಿಪ್‌ ಆದ್ಯಾ ಮೊದಲ ಅಂತರರಾಷ್ಟ್ರೀಯ ಮಟ್ಟದ ಸ್ಪರ್ಧೆ. ಇಲ್ಲಿ ಬ್ಲಿಟ್ಜ್‌ ಹಾಗೂ ಕ್ಲಾಸಿಕ್‌ ವಿಭಾಗದಲ್ಲಿ ಬೆಳ್ಳಿ ಗೆದ್ದು ಹೊಸ ಭರವಸೆ ಮೂಡಿಸಿದ್ದಾಳೆ.

ಆದ್ಯಾಳ ಪೋಷಕರು ವರ್ಷದ ಹಿಂದೆ ನೃತ್ಯ ತರಬೇತಿ ತರಗತಿಗೆ ಸೇರಿಸಿದ್ದರು. ಅಲ್ಲಿ ಚೆಸ್‌ ಆಟವನ್ನು ಗಮನಿಸಿದ ಆಧ್ಯಾಳ ಆಸಕ್ತಿಗೆ ರೆಕ್ಕೆ ಮೂಡಿತು. ನೃತ್ಯ ತರಗತಿಯಿಂದ ಮನೆಗೆ ಮರಳಿದ ನಂತರ ತಂದೆ–ತಾಯಿಯ ಬಳಿ ಚೆಸ್‌ ಆಡಲು ದುಂಬಾಲು ಬೀಳತೊಡಗಿದಳು. ವೃತ್ತಿಯಲ್ಲಿ ದಂತವೈದ್ಯರಾಗಿರುವ ಡಾ. ರಂಗನಾಥಅವಳ ಆಸೆಯ ಸಸಿಗೆ ನೀರೆರೆಯತೊಡಗಿದರು.

ಕೇವಲ ಒಂದು ವರ್ಷದ ಹಿಂದಷ್ಟೇ ಚೆಸ್‌ ಆಟದಲ್ಲಿ ತೊಡಗಿಸಿಕೊಂಡಿರುವ ಆದ್ಯಾ, ತಲಾ ಒಂದು ಬಾರಿ ರಾಷ್ಟ್ರ ಹಾಗೂ ರಾಜ್ಯಮಟ್ಟದ ಟೂರ್ನಿಯಲ್ಲಿ ಭಾಗವಹಿಸಿದ್ದಾಳೆ. 2018ರಲ್ಲಿ ಬೆಂಗಳೂರಿನಲ್ಲಿ ನಡೆದ ರಾಜ್ಯಮಟ್ಟದ ಟೂರ್ನಿಯಲ್ಲಿ ಆದ್ಯಾ ಏಳನೇ ಸ್ಥಾನ ಪಡೆದಳು. ಈ ವರ್ಷದ ಜೂನ್‌ ತಿಂಗಳಲ್ಲಿ ಕೋಲ್ಕತ್ತದಲ್ಲಿ ನಡೆದ ರಾಷ್ಟ್ರಮಟ್ಟದ ಟೂರ್ನಿಯಲ್ಲೂ ಕಾಣಿಸಿಕೊಂಡು ಸೈ ಎನಿಸಿಕೊಂಡಿದ್ದಳು.

ADVERTISEMENT

ಸದ್ಯಆದ್ಯಾ ಯುನೈಟೆಡ್‌ ಕರ್ನಾಟಕ ಚೆಸ್‌ ಅಸೋಸಿಯೇಷನ್‌ ಕಾರ್ಯದರ್ಶಿ ಹನುಮಂತ ಎಂಬವರ ಅಕಾಡೆಮಿಯಲ್ಲಿ ತರಬೇತಿ ಪಡೆಯುತ್ತಿದ್ದಾಳೆ.ವಾರಕ್ಕೆ ಮೂರು ದಿನ ಚೆಸ್‌ ತರಬೇತಿ ಪಡೆಯುತ್ತಾಳೆ. ಇನ್ನುಳಿದ ದಿನಗಳಲ್ಲಿ ನೃತ್ಯ ತರಬೇತಿ, ಬ್ಯಾಡ್ಮಿಂಟನ್‌ ಮತ್ತಿತರ ಹವ್ಯಾಸಗಳಲ್ಲಿ ವ್ಯಸ್ತ.ಬೆಂಗಳೂರಿನ ವಿದ್ಯಾನಿಕೇತನ ಶಾಲೆಯಲ್ಲಿ ಒಂದನೇ ತರಗತಿ ಓದುತ್ತಿರುವ ಆದ್ಯಾ ಓದಿನಲ್ಲೂ ಮುಂದು.

‘ನಾವು ಅವಳಯಾವ ಆಸೆಗೂ ಅಡ್ಡಿ ಮಾಡುವುದಿಲ್ಲ. ಅವಳ ಕಲಿಕೆಗೆವ್ಯವಸ್ಥಿತ ರೀತಿಯಲ್ಲಿ ಬೆಂಬಲವಾಗಿ ನಿಂತಿದ್ದೇವೆ. ನಾವಿಬ್ಬರೂ ಚೆಸ್‌ ಆಡುವುದಿಲ್ಲ. ನಮ್ಮ ಪ್ರೋತ್ಸಾಹದಿಂದ ಅವಳು ಉನ್ನತ ಮಟ್ಟಕ್ಕೆ ಸಾಗಿದರೆ ಅದಕ್ಕಿಂತ ಸಂತೋಷ ಮತ್ತೊಂದಿಲ್ಲ’ ಎಂಬುದು ಡಾ. ರಂಗನಾಥ ಅವರ ಮೆಚ್ಚು ನುಡಿ.

‘ಆದ್ಯಾ ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದ ಟೂರ್ನಿಗಳಲ್ಲಿ ಭಾಗವಹಿಸಿ ಯಶಸ್ಸು ಸಾಧಿಸಿದರೆ ಅದು ನಮ್ಮ ಶ್ರಮಕ್ಕೆ ಸಿಗುವ ಸಾರ್ಥಕತೆ’ ಎಂದು ಅವರು ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.