ADVERTISEMENT

ವಿಶ್ವ ಮಹಿಳಾ ಬಾಕ್ಸಿಂಗ್‌: ನಿಖತ್ ಜರೀನ್‌ಗೆ ವಿಶ್ವ ಕಿರೀಟ

ವಿಶ್ವ ಮಹಿಳಾ ಬಾಕ್ಸಿಂಗ್‌ನಲ್ಲಿ ಚಿನ್ನ ಗೆದ್ದ ಭಾರತದ ಐದನೇ ಬಾಕ್ಸರ್

ಪಿಟಿಐ
Published 19 ಮೇ 2022, 18:09 IST
Last Updated 19 ಮೇ 2022, 18:09 IST
ನಿಖತ್ ಜರೀನ್‌
ನಿಖತ್ ಜರೀನ್‌   

ನವದೆಹಲಿ: ಭಾರತದ ನಿಖತ್ ಜರೀನ್ ಅವರು ಗುರುವಾರ ಬಾಕ್ಸಿಂಗ್ ಕ್ರೀಡಾಪ್ರಿಯರ ನಿರೀಕ್ಷೆಗೆ ತಕ್ಕಂತೆ ಚಿನ್ನದ ಸಾಧನೆ ಮಾಡಿದರು.

ಇಸ್ತಾಂಬುಲ್‌ನಲ್ಲಿ ನಡೆದ ವಿಶ್ವ ಮಹಿಳಾ ಬಾಕ್ಸಿಂಗ್ ಚಾಂಪಿಯನ್‌ಷಿಪ್‌ನ ಫ್ಲೈವೇಟ್ (52ಕೆಜಿ) ವಿಭಾಗದಲ್ಲಿ ಚಿನ್ನದ ಪದಕ ಗೆದ್ದರು. ಈ ಸಾಧನೆ ಮಾಡಿದ ಭಾರತದ ಐದನೇ ಮಹಿಳಾ ಬಾಕ್ಸರ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

ಫೈನಲ್‌ನಲ್ಲಿ ಅವರು 5–0 ಯಿಂದ ಥಾಯ್ಲೆಂಡ್‌ನ ಜಿಟ್‌ಪಾಂಗ್ ಜೂಟಾಮಸ್‌ ವಿರುದ್ಧ ಗೆದ್ದು ಪದಕಕ್ಕೆ ಕೊರಳೊಡ್ಡಿದರು. ಈ ಟೂರ್ನಿಯುದ್ದಕ್ಕೂ ಅವರು ತಮ್ಮ ಎಲ್ಲ ಎದುರಾಳಿಗಳನ್ನು ಹಿಮ್ಮೆಟ್ಟಿಸಿ ಫೈನಲ್ ತಲುಪಿದ್ದರು.

ADVERTISEMENT

ಪ್ರಶಸ್ತಿ ಸುತ್ತಿನಲ್ಲಿ ಅವರು30-27, 29-28, 29-28, 30-27, 29-28 ರಿಂದ ಥಾಯ್ಲೆಂಡ್ ಬಾಕ್ಸರ್‌ ಎದುರು ಮೇಲುಗೈ ಸಾಧಿಸಿದರು.

ಮೇರಿ ಕೋಮ್ ಆರು ಸಲ (2002, 2005, 2006, 2008, 2010 ಮತ್ತು 2018) ಚಿನ್ನದ ಜಯಿಸಿದ್ದರು. ಸರಿತಾ ದೇವಿ (2006), ಆರ್‌.ಎಲ್. ಜೆನಿ (2006) ಮತ್ತು ಕೆ.ಸಿ. ಲೇಖಾ (2006) ತಲಾ ಒಂದು ಬಾರಿ ಈ ಟೂರ್ನಿಯಲ್ಲಿ ಚಿನ್ನದ ಸಾಧನೆ ಮಾಡಿದ್ದರು. ಇದೀಗ ನಿಖತ್ ಅವರ ಸಾಲಿಗೆ ಸೇರಿದ್ದಾರೆ.

ಭಾರತಕ್ಕೆ ಈ ಚಾಂಪಿಯನ್‌ಷಿಪ್‌ನಲ್ಲಿ ನಾಲ್ಕು ವರ್ಷಗಳ ನಂತರ ಒಲಿದ ಚಿನ್ನ ಇದಾಗಿದೆ. 2018ರಲ್ಲಿ ಮೇರಿ ಕೋಮ್ (48ಕೆಜಿ) ಚಿನ್ನ ಗೆದ್ದ ನಂತರ ಯಾರೂ ಜಯಿಸಿರಲಿಲ್ಲ.

ತೆಲಂಗಾಣದ ನಿಜಾಮಾಬಾದ್‌ನ ನಿಖತ್ ಫೈನಲ್‌ ಬೌಟ್‌ನಲ್ಲಿ ಎದುರಾಳಿಗೆ ಬಲಶಾಲಿ ಪಂಚ್‌ಗಳನ್ನು ಕೊಟ್ಟರು. ಇದರಿಂದ ಒತ್ತಡಕ್ಕೊಳಗಾದ ಥಾಯ್ಲೆಂಡ್ ಬಾಕ್ಸಿಂಗ್‌ಪಟು ಸೋಲಿನತ್ತ ಸಾಗಿದರು. ರೆಫರಿಯು ಜಯಶಾಲಿಯೆಂದು ಘೋಷಿಸಿದ ನಂತರ ನಿಖತ್ ಸಂಭ್ರಮದ ಕಟ್ಟೆಯೊಡೆಯಿತು. ಮೇಲಕ್ಕೆ ಜಿಗಿದು ಸಂಭ್ರಮಿಸಿದರು. ಭಾವುಕರಾದ ಅವರ ಕಂಗಳಲ್ಲಿ ಆನಂದಭಾಷ್ಪ ತುಳುಕಿತು. ನೆರವು ಸಿಬ್ಬಂದಿ ಬಂದು ಆಲಂಗಿಸಿ ಅಭಿನಂದಿಸಿದರು.

2019ರ ಏಷ್ಯನ್ ಚಾಂಪಿಯನ್‌ಷಿಪ್‌ನಲ್ಲಿ ಕಂಚು, ಹೋದ ಫೆಬ್ರುವರಿಯಲ್ಲಿ ಸ್ಟ್ರಾಂಡ್ಜಾ ಸ್ಮಾರಕ ಟೂರ್ನಿಯಲ್ಲಿ ಎರಡು ಚಿನ್ನದ ಪದಕಗಳನ್ನು ಜಯಿಸಿದ ದಾಖಲೆ ಮಾಡಿದ್ದರು.

ಮನೀಷಾಗೆ ಕಂಚು:ಈ ಚಾಂಪಿಯನ್‌ಷಿಪ್‌ನಲ್ಲಿ ಮನೀಷಾ ಮೌನ್ (57ಕೆಜಿ) ಮತ್ತು ಪರ್ವೀನ್ ಹೂಡಾ (63ಕೆಜಿ) ಕಂಚಿನ ಪದಕ ಗಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.