ADVERTISEMENT

ಹಾಕಿ ಇಂಡಿಯಾ ಅಧ್ಯಕ್ಷರಾಗಿ ಜ್ಞಾನೇಂದ್ರೊ ನಿಂಗೊಬಮ್ ಆಯ್ಕೆ

ಪಿಟಿಐ
Published 6 ನವೆಂಬರ್ 2020, 14:01 IST
Last Updated 6 ನವೆಂಬರ್ 2020, 14:01 IST
ಹಾಕಿ ಇಂಡಿಯಾ ಲೋಗೊ
ಹಾಕಿ ಇಂಡಿಯಾ ಲೋಗೊ   

ನವದೆಹಲಿ: ಹಾಕಿ ಇಂಡಿಯಾದ (ಎಚ್‌ಐ) ಅಧ್ಯಕ್ಷರಾಗಿ ಮಣಿಪುರದ ಜ್ಞಾನೇಂದ್ರೊ ನಿಂಗೊಂಬಮ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಎಚ್‌ಐನ ಅಧಿವೇಶನ ಹಾಗೂ ಚುನಾವಣೆಗಳು ಶುಕ್ರವಾರ ನಡೆದವು. ಈಶಾನ್ಯ ಪ್ರದೇಶದಿಂದ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾದ ಮೊದಲ ವ್ಯಕ್ತಿ ನಿಂಗೊಂಬಮ್‌ ಆಗಿದ್ದಾರೆ.

ಈ ಹಿಂದೆ ಹುದ್ದೆಯಲ್ಲಿದ್ದ ಮೊಹಮ್ಮದ್‌ ಮುಷ್ತಾಕ್ ಅಹಮದ್‌ ಅವರನ್ನು ರಾಷ್ಟ್ರೀಯ ಕ್ರೀಡಾ ಸಂಹಿತೆಯ ಮಾರ್ಗಸೂಚಿಗಳನ್ನು ಉಲ್ಲಂಘಿಸಿದ ಹಿನ್ನೆಲೆಯಲ್ಲಿ ಪದವಿ ತೊರೆಯುವಂತೆ ಕ್ರೀಡಾ ಸಚಿವಾಲಯ ಸೂಚಿಸಿತ್ತು. ಮೊಹಮ್ಮದ್‌ಮುಷ್ತಾಕ್ ಅವರು ಜುಲೈನಲ್ಲಿ ರಾಜೀನಾಮೆ ನೀಡಿದ್ದರು. ಆಗಿನಿಂದ ಜ್ಞಾನೇಂದ್ರೊ ಹಂಗಾಮಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು.

ಮೊಹಮ್ಮದ್‌ ಮುಷ್ತಾಕ್‌ ಅವರು ಸದ್ಯ ಫೆಡರೇಷನ್‌ನಲ್ಲೇ ಉಳಿದುಕೊಂಡಿದ್ದು, ಹಿರಿಯ ಉಪಾಧ್ಯಕ್ಷ ಸ್ಥಾನಕ್ಕೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ADVERTISEMENT

ಕೋವಿಡ್‌–19 ಪಿಡುಗು ನಿಯಂತ್ರಣದ ಭಾಗವಾಗಿ ಆಯಾ ರಾಜ್ಯ ಸರ್ಕಾರಗಳು ವಿಧಿಸಿರುವ ನಿರ್ಬಂಧಗಳಿಂದಾಗಿ ಸದಸ್ಯ ಘಟಕಗಳಿಗೆ ವಿಡಿಯೊ ಕಾನ್ಫರೆನ್ಸ್ ಸೌಲಭ್ಯದ ಮೂಲಕ ಸಭೆಯಲ್ಲಿ ಪಾಲ್ಗೊಳ್ಳಲು ಅವಕಾಶ ಕಲ್ಪಿಸಲಾಗಿತ್ತು.

2018ರ ಚುನಾವಣೆಯಲ್ಲಿ ರಾಷ್ಟ್ರೀಯ ಕ್ರೀಡಾ ಸಂಹಿತೆಯ ಅಧಿಕಾರವಧಿಯ ಮಾರ್ಗಸೂಚಿಗಳನ್ನು ಉಲ್ಲಂಘಿಸಲಾಗಿದ್ದು, ಮೊಹಮ್ಮದ್‌ ಅವರು ಹುದ್ದೆ ತ್ಯಜಿಸಬೇಕು ಹಾಗೂ ಅಧ್ಯಕ್ಷ ಸ್ಥಾನಕ್ಕೆ ಹೊಸದಾಗಿ ಚುನಾವಣೆ ನಡಸುವಂತೆ ಹಾಕಿ ಫೆಡರೇಷನ್‌ಗೆ ಕ್ರೀಡಾ ಸಚಿವಾಲಯ ನಿರ್ದೇಶನ ನೀಡಿತ್ತು.

ಹಾಕಿ ಇಂಡಿಯಾದ ಪದಾಧಿಕಾರಿಯಾಗಿ ವ್ಯಕ್ತಿಯೊಬ್ಬ ಸತತ ಮೂರು ಅವಧಿಗೆ ಮುಂದುವರಿಯುವಂತಿಲ್ಲ ಎಂಬುದು ಕ್ರೀಡಾ ಸಂಹಿತೆಯ ನಿಯಮ.

2010–14ರ ಅವಧಿಯಲ್ಲಿ ಎಚ್‌ಐನ ಖಜಾಂಚಿಯಾಗಿ, 2014ರಿಂದ ನಾಲ್ಕು ವರ್ಷಗಳ ಅವಧಿಗೆ ಪ್ರಧಾನ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದ್ದ ಮೊಹಮ್ಮದ್‌, 2018ರಲ್ಲಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.