ADVERTISEMENT

Norway Chess: ಕೊನೆಯಲ್ಲಿ ಎಡವಿದ ಗುಕೇಶ್; ಕಾರ್ಲ್‌ಸನ್‌ಗೆ 7ನೇ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 7 ಜೂನ್ 2025, 3:01 IST
Last Updated 7 ಜೂನ್ 2025, 3:01 IST
<div class="paragraphs"><p>ಡಿ.ಗುಕೇಶ್ ಹಾಗೂ&nbsp;ಮ್ಯಾಗ್ನಸ್ ಕಾರ್ಲ್‌ಸನ್</p></div>

ಡಿ.ಗುಕೇಶ್ ಹಾಗೂ ಮ್ಯಾಗ್ನಸ್ ಕಾರ್ಲ್‌ಸನ್

   

ಚಿತ್ರ: ಪಿಟಿಐ, ರಾಯಿಟರ್ಸ್‌

ಸ್ಟಾವೆಂಜರ್‌ (ನಾರ್ವೆ): ಅಮೆರಿಕದ ಗ್ರ್ಯಾಂಡ್‌ಮಾಸ್ಟರ್‌ ಫ್ಯಾಬಿಯಾನೊ ಕರುವಾನ ಎದುರಿನ ಅಂತಿಮ ಸುತ್ತಿನ ಪಂದ್ಯದಲ್ಲಿ ಪ್ರಮಾದ ಎಸಗಿದ್ದು ವಿಶ್ವ ಚಾಂಪಿಯನ್ ಡಿ.ಗುಕೇಶ್ ಅವರಿಗೆ ದುಬಾರಿಯಾಯಿತು. ಇದರ ಲಾಭ ಪಡೆದ ಐದು ಬಾರಿಯ ವಿಶ್ವ ಚಾಂಪಿಯನ್ ಮ್ಯಾಗ್ನಸ್‌ ಕಾರ್ಲ್‌ಸನ್‌ ನಾರ್ವೆ ಚೆಸ್‌ ಟೂರ್ನಿಯಲ್ಲಿ ಏಳನೇ ಬಾರಿ ಪ್ರಶಸ್ತಿ ಗೆದ್ದುಕೊಂಡರು.

ADVERTISEMENT

2018ರಲ್ಲಿ ಇಲ್ಲಿ ಚಾಂಪಿಯನ್ ಆಗಿದ್ದ ಕರುವಾನ ವಿರುದ್ಧದ ಪಂದ್ಯದಲ್ಲಿ ಗುಕೇಶ್ ಸ್ಥಿತಿ ಉತ್ತಮವಾಗಿ ಏನೂ ಇರಲಿಲ್ಲ. ಕೊನೆಯಲ್ಲಿ ಚೇತರಿಕೆಯ ಆಟವಾಡಿದರೂ ಸಮಯದ ಒತ್ತಡಕ್ಕೆ ಸಿಲುಕಿ ತಪ್ಪು ಮಾಡಿದ್ದರಿಂದ ಕರುವಾನ ಗೆದ್ದು ಮೂರು ಪಾಯಿಂಟ್‌ ಸಂಪಾದಿಸಿದರು.

ಇನ್ನೊಂದು ಕಡೆ ಕಾರ್ಲ್‌ಸನ್‌ ಕೊನೆಯ ಸುತ್ತಿನಲ್ಲಿ ಭಾರತದ ಅರ್ಜುನ್ ಇರಿಗೇಶಿ ಎದುರು ಕ್ಲಾಸಿಕಲ್ ಪಂದ್ಯ ಡ್ರಾ ಮಾಡಿಕೊಂಡರು. ‘ಆರ್ಮ್‌ಗೆಡನ್‌’ನಲ್ಲಿ ಇರಿಗೇಶಿ ಗೆದ್ದರೂ ಟೂರ್ನಿಯಲ್ಲಿ ಒಟ್ಟಾರೆ 16 ಪಾಯಿಂಟ್ಸ್‌ ಕಲೆಹಾಕಿದ ಕಾರ್ಲ್‌ಸನ್‌ ಅಗ್ರಸ್ಥಾನ ಪಡೆಯುವಲ್ಲಿ ಯಶಸ್ವಿ ಆದರು.

ಕರುವಾನ (15.5) ಅವರು ಎರಡನೇ ಸ್ಥಾನ ಪಡೆದರೆ, ಗುಕೇಶ್‌ (14.5) ಮೂರನೇ ಸ್ಥಾನಕ್ಕೆ ಸರಿದರು. ಕಳೆದ ಸಲವೂ ಗುಕೇಶ್‌ ಮೂರನೇ ಸ್ಥಾನ ಪಡೆದಿದ್ದರು. ಕಾರ್ಲ್‌ಸನ್ ಆರ್ಮ್‌ಗೆಡನ್‌ನಲ್ಲಿ ಸೋತ ಕಾರಣ ಗುಕೇಶ್‌ ಕ್ಲಾಸಿಕಲ್ ಪಂದ್ಯ ಡ್ರಾ ಮಾಡಿಕೊಂಡಿದ್ದರೂ, ಪ್ರಶಸ್ತಿ ಅವಕಾಶ ಹೊಂದುತ್ತಿದ್ದರು.

ಕರುವಾನ ಅವರಿಗೆ ಸೋತ ತಕ್ಷಣ ಗುಕೇಶ್‌, ಕೆಲಕ್ಷಣ ಕಣ್ಣು ಮುಚ್ಚಿ, ಹತಾಶೆಯಿಂದ ಎರಡೂ ಕೈಗಳಿಂದ ಮುಖ ಮುಚ್ಚಿಕೊಂಡರು. 

ಇರಿಗೇಶಿ ವಿರುದ್ಧ ಕ್ಲಾಸಿಕಲ್ ಪಂದ್ಯದಲ್ಲಿ ಕಾರ್ಲ್‌ಸನ್‌ ತೊಂದರೆಗೆ ಸಿಲುಕಿಕೊಂಡರೂ ಅಮೋಘ ರೀತಿ ಚೇತರಿಸಿ ಡ್ರಾ ಮಾಡಿಕೊಂಡಿದ್ದರು. ಇದರಿಂದ ಅವರಿಗೆ ಒಂದು ಪಾಯಿಂಟ್‌ ಹಾಗೂ ಅದರ ಜೊತೆ ಪ್ರಶಸ್ತಿಯೂ ಖಚಿತವಾಯಿತು. 

‘ತಮ್ಮ ಗಮನ ಗುಕೇಶ್‌– ಕರುವಾನ ಪಂದ್ಯದ ಕಡೆಯೂ ಇತ್ತು’ ಎಂದೂ ಕಾರ್ಲ್‌ಸನ್ ಅವರು ಒಪ್ಪಿಕೊಂಡರು.

ಮುಝಿಚುಕ್‌ಗೆ ಪ್ರಶಸ್ತಿ: ಮಹಿಳಾ ವಿಭಾಗದಲ್ಲಿ ಗುರುವಾರ ಮುನ್ನಡೆಯಲ್ಲಿದ್ದ ಉಕ್ರೇನ್‌ನ ಅನ್ನಾ ಮುಝಿಚುಕ್‌ ಅವರು 16.5 ಪಾಯಿಂಟ್‌ ಸಂಗ್ರಹಿಸಿ ಚಾಂಪಿಯನ್ ಆದರು. ಅವರು ಭಾರತದ ಆರ್‌.ವೈಶಾಲಿ ವಿರುದ್ಧ ಕೊನೆಯ ಸುತ್ತಿನ ಕ್ಲಾಸಿಕಲ್‌ ಪಂದ್ಯ ಡ್ರಾ ಮಾಡಿಕೊಂಡು, ಆರ್ಮ್‌ಗೆಡನ್‌ನಲ್ಲಿ ಸೋತರೂ ಉಕ್ರೇನ್‌ ಆಟಗಾರ್ತಿಯ ಪ್ರಶಸ್ತಿ ಗೆಲುವಿಗೆ ಅಡ್ಡಿಯಾಗಲಿಲ್ಲ.

ಕೋನೇರು ಹಂಪಿ ಇನ್ನೊಂದು ಪಂದ್ಯದಲ್ಲಿ ಚೀನಾದ ವಿಶ್ವ ಚಾಂಪಿಯನ್ ಮಾ ವೆನ್ಜುನ್ ಜೊತೆ ಡ್ರಾ ಮಾಡಿಕೊಂಡರೂ, ಆರ್ಮ್‌ಗೆಡನ್‌ನಲ್ಲಿ ಗೆದ್ದರೂ ಒಟ್ಟು 15 ಪಾಯಿಂಟ್‌ಗಳೊಡನೆ ಮೂರನೇ ಸ್ಥಾನಕ್ಕೆ ಸರಿಯಬೇಕಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.