ADVERTISEMENT

ಚಾಂಪಿಯನ್ಸ್ ಟ್ರೋಫಿ ಹಾಕಿ: ಮರುಜೀವ ನೀಡಲು ಆಸಕ್ತಿ

ಪಿಟಿಐ
Published 1 ಜನವರಿ 2025, 23:30 IST
Last Updated 1 ಜನವರಿ 2025, 23:30 IST
<div class="paragraphs"><p> ಹಾಕಿ </p></div>

ಹಾಕಿ

   

ಪ್ರಾತಿನಿಧಿಕ ಚಿತ್ರ

ರೂರ್ಕೆಲಾ: ಕೆಲವು ವರ್ಷಗಳಿಂದ ಸ್ಥಗಿತಗೊಂಡಿರುವ ಪ್ರತಿಷ್ಠಿತ ಚಾಂಪಿಯನ್ಸ್ ಟ್ರೋಫಿ ಹಾಕಿ ಟೂರ್ನಿಗೆ ಮರುಜೀವ ನೀಡಲು ಉತ್ಸುಕರಾಗಿರುವುದಾಗಿ ಅಂತರರಾಷ್ಟ್ರೀಯ ಹಾಕಿ ಫೆಡರೇಷನ್‌  (ಎಫ್‌ಐಎಚ್‌) ಅಧ್ಯಕ್ಷ ದಾತೊ ತಯ್ಯಬ್ ಇಕ್ರಂ ಬುಧವಾರ ಇಂಗಿತ ವ್ಯಕ್ತಪಡಿಸಿದ್ದಾರೆ. ಆದರೆ ಬಿಡುವಿಲ್ಲದ ಕಾರ್ಯಕ್ರಮಪಟ್ಟಿಯ ಮಧ್ಯೆ ಇದಕ್ಕೆ ಸಮಯ ನೀಡಲು ಕಷ್ಟವಾಗಬಹುದೆಂಬ ಅಂಶದ ಕಡೆಯೂ ಅವರು ಗಮನ ಸೆಳೆದಿದ್ದಾರೆ.

ADVERTISEMENT

1978ರಲ್ಲಿ ಆರಂಭವಾದ ಚಾಂಪಿಯನ್ಸ್ ಟ್ರೋಫಿ ಟೂರ್ನಿ ವರ್ಷಂಪ್ರತಿ ನಡೆಯುತ್ತಿತ್ತು. 2014ರ ನಂತರ ಇದು ಎರಡು ವರ್ಷಗಳಿಗೊಮ್ಮೆ ನಿಗದಿಯಾಯಿತು. 2018ರ ನಂತರ ಈ ಟೂರ್ನಿಯನ್ನು ಎಫ್‌ಐಎಚ್‌ ನಡೆಸಿಲ್ಲ. ಒಂದು ಕಾಲದಲ್ಲಿ ಈ ಟೂರ್ನಿಯು ವಿಶ್ವಕಪ್, ಒಲಿಂಪಿಕ್ಸ್‌ ನಂತರದ ಸ್ಥಾನ ಪಡೆದಿತ್ತು.

‘ಚಾಂಪಿಯನ್ಸ್ ಟ್ರೋಫಿ ಅಥವಾ ಅದೇ ರೀತಿಯ ದೊಡ್ಡ ಮಟ್ಟದ ಟೂರ್ನಿಯನ್ನು ನಡೆಸುವ ಸಾಧ್ಯತೆಯನ್ನು ನಾವು ತಳ್ಳಿಹಾಕುವುದಿಲ್ಲ. ಆದರೆ ನಾವು ಅದಕ್ಕೆ ಸಮಯ ಹೊಂದಿಸುವ (ವರ್ಷದ ವೇಳಾಪಟ್ಟಿಯಲ್ಲಿ) ಕಡೆ ಗಮನಹರಿಸಬೇಕಿದೆ’ ಎಂದು ಇಕ್ರಂ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ಜಾಗತಿಕವಾಗಿ ಹಾಕಿ ಆಟ ಇನ್ನಷ್ಟು ದೇಶಗಳನ್ನು ತಲುಪಬೇಕಾಗಿದೆ. ಈಗ 9 ಅಗ್ರ ದೇಶಗಳನ್ನು ಬಿಟ್ಟರೆ  ನೆಲೆಕಾಣುತ್ತಿರುವ ಎರಡನೇ ಹಂತದ ದೇಶಗಳಲ್ಲಿ ಈ ಆಟ ಬೆಳೆಯಬೇಕಾದರೆ ಹೆಚ್ಚು ಅವಕಾಶಗಳನ್ನು ಕಲ್ಪಿಸಬೇಕಾಗಿದೆ’ ಎಂದು ಅಭಿಪ್ರಾಯಪಟ್ಟರು.

‘ಪ್ರೊ ಲೀಗ್‌ ಕನೆಕ್ಟ್‌’: 2019ರಿಂದ ನಡೆಯುತ್ತಿರುವ ಎಫ್‌ಐಎಚ್‌ನ ಪ್ರಮುಖ ಟೂರ್ನಿಯಾದ ಪ್ರೊ ಲೀಗ್‌ ಬಗ್ಗೆ ಪ್ರಸ್ತಾಪಿಸಿದ ಅವರು, ಹಾಕಿ ಆಡುತ್ತಿರುವ ಅಗ್ರ ರಾಷ್ಟ್ರಗಳನ್ನು ಬಿಟ್ಟು ಉಳಿದ ದೇಶದ ತಂಡಗಳನ್ನು ಒಳಗೊಳ್ಳುವ ‘ಪ್ರೊ ಲೀಗ್ ಕನೆಕ್ಟ್‌’ ಆರಂಭಿಸುವ ಯೋಜನೆ ಘೋಷಿಸಿದರು.

ಹಾಕಿ ಆಡುವ ಅಗ್ರ ರಾಷ್ಟ್ರಗಳ ಜೊತೆ ವಿಶ್ವದ ಇತರ ರಾಷ್ಟ್ರಗಳೂ ಹಾಕಿ ಕುಟುಂಬದಲ್ಲಿರಬೇಕು. ಆಗ ಪ್ರೊ ಲೀಗ್‌ ಹೆಚ್ಚು ಮೌಲಿಕವಾಗುತ್ತದೆ ಎಂದು ಇಕ್ರಂ ಹೇಳಿದರು.

ಹಾಕಿ ಇಂಡಿಯಾ ಲೀಗ್ ಮತ್ತೆ ಆರಂಭಿಸಿರುವುದಕ್ಕೆ ಅವರು ಹರ್ಷ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.