ADVERTISEMENT

ವಿಶ್ವ ಅಥ್ಲೆಟಿಕ್‌ ಚಾಂಪಿಯನ್‌ಷಿಪ್‌: ಜಾವೆಲಿನ್‌ ಫೈನಲ್‌ಗೆ ನೀರಜ್‌ ಚೋಪ್ರಾ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 22 ಜುಲೈ 2022, 13:15 IST
Last Updated 22 ಜುಲೈ 2022, 13:15 IST
ನೀರಜ್‌ ಚೋಪ್ರಾ
ನೀರಜ್‌ ಚೋಪ್ರಾ   

ಯೂಜೀನ್, ಅಮೆರಿಕ: ವಿಶ್ವ ಅಥ್ಲೆಟಿಕ್‌ ಚಾಂಪಿಯನ್‌ಷಿಪ್‌ನಲ್ಲಿ ಭಾರತದ ಪದಕದ ಭರವಸೆ ಎನಿಸಿರುವ ಜಾವೆಲಿನ್‌ ಥ್ರೋ ಸ್ಪರ್ಧಿ ನೀರಜ್‌ ಚೋಪ್ರಾ ನಿರೀಕ್ಷೆಯಂತೆಯೇ ಫೈನಲ್‌ಗೆ ಲಗ್ಗೆಯಿಟ್ಟರು.

ಇನ್ನೊಬ್ಬ ಜಾವೆಲಿನ್‌ ಥ್ರೋ ಸ್ಪರ್ಧಿ ರೋಹಿತ್‌ ಯಾದವ್‌ ಮತ್ತು ಟ್ರಿಪಲ್‌ ಜಂಪ್‌ ಅಥ್ಲೀಟ್ ಎಲ್ದೋಸ್‌ ಪೌಲ್‌ ಅವರೂ ಫೈನಲ್‌ಗೆ ಲಗ್ಗೆಯಿಟ್ಟಿದ್ದು, ಭಾರತದ ಪಾಳೆಯದಲ್ಲಿ ಹರ್ಷಕ್ಕೆ ಕಾರಣರಾದರು.

ಗುರುವಾರ ನಡೆದ ಪುರುಷರ ವಿಭಾಗದ ಅರ್ಹತಾ ಹಂತದ ‘ಎ’ ಗುಂಪಿನಲ್ಲಿ ಸ್ಪರ್ಧಿಸಿದ ಒಲಿಂಪಿಕ್‌ ಚಾಂಪಿಯನ್‌ ನೀರಜ್‌, 88.39 ಮೀ. ಸಾಧನೆಯೊಂದಿಗೆ ಫೈನಲ್‌ ಪ್ರವೇಶಿಸಿದರು. ತಮ್ಮ ಗುಂಪಿನಲ್ಲಿ ಅಗ್ರಸ್ಥಾನ ಪಡೆದ ಅವರು, ಒಟ್ಟಾರೆಯಾಗಿ ಎರಡನೇ ಸ್ಥಾನ ಗಳಿಸಿದರು. ‘ಎ’ ಗುಂಪಿನಲ್ಲಿ ಸ್ಪರ್ಧಿಸಿದ ಹಾಲಿ ಚಾಂಪಿಯನ್‌ ಗ್ರೆನಾಡದ ಆ್ಯಂಡರ್ಸನ್‌ ಪೀಟರ್ಸ್‌ 89.91 ಮೀ. ಸಾಧನೆಯೊಂದಿಗೆ ಅಗ್ರಸ್ಥಾನ ಗಳಿಸಿದರು.

ADVERTISEMENT

ರೋಹಿತ್‌ ಅವರು 80.54 ಮೀ. ಸಾಧನೆಯೊಂದಿಗೆ ‘ಬಿ’ ಗುಂಪಿನಲ್ಲಿ ಆರನೇ ಹಾಗೂ ಒಟ್ಟಾರೆಯಾಗಿ 11ನೇ ಸ್ಥಾನ ಪಡೆದು ಫೈನಲ್‌ ಪ್ರವೇಶಿಸಿದರು. ತಮ್ಮ ಮೊದಲ ಥ್ರೋನಲ್ಲಿ ಅವರು ಈ ದೂರ ದಾಖಲಿಸಿದರು. ಎರಡನೇ ಥ್ರೋ ಫೌಲ್‌ ಆದರೆ, ಕೊನೆಯ ಅವಕಾಶದಲ್ಲಿ 77.32 ಮೀ. ಸಾಧನೆ ಮಾಡಿದರು.

ಎಲ್ದೋಸ್‌ ಐತಿಹಾಸಿಕ ಸಾಧನೆ: ಕೇರಳದ ಎಲ್ದೋಸ್‌ ಪೌಲ್‌ ಅವರು ಟ್ರಿಪಲ್‌ ಜಂಪ್‌ನಲ್ಲಿ ಫೈನಲ್‌ ಪ್ರವೇಶಿಸಿ, ಈ ಸಾಧನೆ ಮಾಡಿದ ಭಾರತದ ಮೊದಲ ಅಥ್ಲೀಟ್‌ ಎನಿಸಿಕೊಂಡರು. ಅರ್ಹತಾ ಸುತ್ತಿನಲ್ಲಿ16.68 ಮೀ. ದೂರ ಜಿಗಿದ ಅವರು ‘ಎ’ ಗುಂಪಿನಲ್ಲಿ ಆರನೇ ಹಾಗೂ ಒಟ್ಟಾರೆಯಾಗಿ 12ನೇ ಸ್ಥಾನ ಗಳಿಸಿದರು.

ಜಾವೆಲಿನ್‌ ಫೈನಲ್‌ಗೆ ಅನುರಾಣಿ
ಭಾರತದ ಅನುರಾಣಿ ಅವರು ವಿಶ್ವ ಅಥ್ಲೆಟಿಕ್ ಚಾಂಪಿ ಯನ್‌ಷಿಪ್‌ನ ಮಹಿಳಾ ಜಾವೆಲಿನ್‌ ಥ್ರೊ ಸ್ಪರ್ಧೆಯ ಫೈನಲ್‌ಗೆ ಲಗ್ಗೆಯಿಟ್ಟಿದ್ದಾರೆ.

ಚಾಂಪಿಯನ್‌ಷಿಪ್‌ನ ಅರ್ಹತಾ ಸುತ್ತಿನಲ್ಲಿ ಗುರುವಾರ 59.60 ಮೀಟರ್ಸ್ ಸಾಧನೆ ಮಾಡಿದ ಅವರು, ವಿಶ್ವ ಅಥ್ಲೆಟಿಕ್ಸ್‌ನಲ್ಲಿ ಎರಡನೇ ಬಾರಿ ಫೈನಲ್‌ ತಲುಪಿದ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.