ADVERTISEMENT

ಮಹಿಳಾ ಕುಸ್ತಿಪಟುಗಳು ಮುಂದೆಯೂ ಶೋಷಣೆ ಅನುಭವಿಸಲಿದ್ದಾರೆ: ವಿನೇಶಾ ಪೋಗಟ್

ಪಿಟಿಐ
Published 21 ಡಿಸೆಂಬರ್ 2023, 14:44 IST
Last Updated 21 ಡಿಸೆಂಬರ್ 2023, 14:44 IST
<div class="paragraphs"><p>ಮಾಧ್ಯಮಗೋಷ್ಠಿಯಲ್ಲಿ&nbsp;ವಿನೇಶಾ ಪೋಗಟ್</p></div>

ಮಾಧ್ಯಮಗೋಷ್ಠಿಯಲ್ಲಿ ವಿನೇಶಾ ಪೋಗಟ್

   

ಪಿಟಿಐ ಚಿತ್ರ

ನವದೆಹಲಿ: ಬಿಜೆಪಿ ಸಂಸದ ಬ್ರಿಜ್‌ಭೂಷಣ್‌ ಶರಣ್‌ ಸಿಂಗ್‌ ಅವರ ಆಪ್ತ ಸಂಜಯ್‌ ಸಿಂಗ್‌ ಅವರು ಭಾರತೀಯ ಕುಸ್ತಿ ಫೆಡರೇಷನ್‌ನ (ಡಬ್ಲ್ಯುಎಫ್‌ಐ) ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವುದಕ್ಕೆ ಪ್ರತಿಕ್ರಿಯಿಸಿರುವ ಕುಸ್ತಿಪಟು ವಿನೇಶಾ ಪೋಗಟ್, ಮಹಿಳಾ ಕುಸ್ತಿಪಟುಗಳು ಮುಂದೆಯೂ ಶೋಷಣೆ ಅನುಭವಿಸಲಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ADVERTISEMENT

ಡಬ್ಲ್ಯುಎಫ್‌ಐನ ವಿವಿಧ ಸ್ಥಾನಗಳಿಗೆ ಇಂದು ನಡೆದ ಚುನಾವಣೆಯ ಫಲಿತಾಂಶ ಹೊರಬಿದ್ದಿದೆ.

ಮಹಿಳಾ ಕುಸ್ತಿಪಟುಗಳ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣದ ಆರೋಪಿ ಬ್ರಿಜ್‌ಭೂಷಣ್‌ ಶರಣ್‌ ಸಿಂಗ್‌ ಅವರ ಆಪ್ತ ಹಾಗೂ ಉತ್ತರ ಪ್ರದೇಶ ಕುಸ್ತಿ ಸಂಸ್ಥೆಯ ಉಪಾಧ್ಯಕ್ಷ ಸಂಜಯ್‌ ಸಿಂಗ್‌ ಅವರು ಡಬ್ಲ್ಯುಎಫ್‌ಐ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಜೊತೆಗೆ, ಸಂಸ್ಥೆಯ 15 ವಿವಿಧ ಸ್ಥಾನಗಳ ಪೈಕಿ 13ಕ್ಕೆ ಸಂಜಯ್‌ ಬಣದವರೇ ಚುನಾಯಿತರಾಗಿದ್ದಾರೆ.

ಬ್ರಿಜ್‌ಭೂಷಣ್‌ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ ಮಾಡಿದ್ದ ಹಾಗೂ ಕ್ರಮಕ್ಕೆ ಆಗ್ರಹಿಸಿ ಮೇ ತಿಂಗಳಲ್ಲಿ ಜಂತರ್‌ ಮಂತರ್‌ನಲ್ಲಿ ಪ್ರತಿಭಟನೆ ನಡೆಸಿದ್ದ ಕುಸ್ತಿಪಟುಗಳು ಚುನಾವಣೆ ಫಲಿತಾಂಶದ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ.

ಡಬ್ಲ್ಯುಎಫ್‌ಐ ನೂತನ ಅಧ್ಯಕ್ಷ ಸಂಜಯ್‌ ಸಿಂಗ್‌ (ಎಡ) ಅವರೊಂದಿಗೆ ಬ್ರಿಜ್‌ಭೂಷಣ್‌ ಶರಣ್‌ ಸಿಂಗ್‌

ತನ್ನ ಮಾತಿನಂತೆ ನಡೆದುಕೊಳ್ಳದ ಸರ್ಕಾರ
ಚುನಾವಣೆ ಫಲಿತಾಂಶ‌ ಪ್ರಕಟವಾದ ಬಳಿಕ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿರುವ ಬಜರಂಗ್‌ ಪೂನಿಯಾ, 'ಬ್ರಿಜ್‌ ಭೂಷಣ್‌ ಬೆಂಬಲಿಗರು ಡಬ್ಲ್ಯುಎಫ್‌ಐ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಹೇಳಿದ್ದ ಸರ್ಕಾರ ತನ್ನ ಮಾತಿನಂತೆ ನಡೆದುಕೊಳ್ಳದಿರುವುದು ದುರದೃಷ್ಟಕರ' ಎಂದಿದ್ದಾರೆ.

'ಸಂಜಯ್ ಸಿಂಗ್‌ ಅಧ್ಯಕ್ಷರಾಗಿರುವುದರಿಂದ ಮಹಿಳಾ ಕುಸ್ತಿಪಟುಗಳಿಗೆ ನ್ಯಾಯ ಸಿಗುತ್ತದೆ ಎಂಬ ನಂಬಿಕೆ ಇಲ್ಲ. ಬ್ರಿಜ್‌ಭೂಷಣ್‌ ವಿರುದ್ಧದ ಆರೋಪಗಳ ಬಗ್ಗೆ ಹಿಂಬಾಗಿಲಿನ ರಾಜಕೀಯ ನಡಯುತ್ತಲೇ ಇದೆ. ಕ್ರೀಡಾ ಸಚಿವರನ್ನು ಭೇಟಿ ಮಾಡಿ ದೌರ್ಜನ್ಯದ ಬಗ್ಗೆ ಮಾಹಿತಿ ನೀಡಿದ್ದಾಗ ನಮ್ಮೊಂದಿಗೆ 15–20 ಹೆಣ್ಣುಮಕ್ಕಳು ಇದ್ದರು. ಈಗ ಆ ಸಂಖ್ಯೆ ಕೇವಲ ಆರಕ್ಕೆ ಕುಸಿದಿದೆ. ಆರೋಪದಿಂದ ಹಿಂದೆ ಸರಿಯುವಂತೆ ಅವರನ್ನೂ ಒತ್ತಾಯ ಮಾಡಲಾಗುತ್ತಿದೆ' ಎಂದು ಬಜರಂಗ್ ದೂರಿದ್ದಾರೆ.

'ಜನವರಿಯಲ್ಲಿ ಪ್ರತಿಭಟನೆ ನಡೆಸಿದ್ದ ಸಂದರ್ಭದಲ್ಲಿ ಸಚಿವಾಲಯವು ಉಸ್ತುವಾರಿ ಸಮಿತಿ ನೇಮಿಸಿತ್ತು. ಹಲವು ಮಹಿಳಾ ಕುಸ್ತಿಪಟುಗಳು ಸಮಿತಿ ಎದುರು ಹೇಳಿಕೆ ನೀಡಿದ್ದರು. ಅದರಂತೆ ಕ್ರೀಡಾ ಸಚಿವರು, ಬ್ರಿಜ್‌ಭೂಷಣ್‌ ಜೊತೆ ನಂಟು ಇರುವ ಯಾರೂ ಡಬ್ಲ್ಯುಎಫ್‌ಐ ಪ್ರವೇಶಿಸುವುದಿಲ್ಲ ಎಂದು ಮಾಧ್ಯಮದವರ ಎದುರು ಹೇಳಿದ್ದರು. ನಾವು ಮತ್ತೊಮ್ಮೆ ಪ್ರತಿಭಟನೆ ಆರಂಭಿಸುವ ಮುನ್ನ, ಸಮಿತಿಯ ವರದಿಗಾಗಿ ಮೂರು ತಿಂಗಳು ಕಾದಿದ್ದೆವು. ನಮ್ಮ ಸಹೋದರಿಯರು ಮತ್ತು ಹೆಣ್ಣುಮಕ್ಕಳ ಸತ್ಯ ಮತ್ತು ಘನತೆಗಾಗಿ ಹೋರಾಟ ನಡೆಸುತ್ತಿದ್ದೇವೆ' ಎಂದು ಹೇಳಿದ್ದಾರೆ.

2020 ಟೊಕಿಯೊ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಗೆದ್ದಿರುವ ಪೂನಿಯಾ, ಇದು ದೀರ್ಘ ಯುದ್ಧವಾಗಿದೆ. ನ್ಯಾಯ ಪಡೆಯುವುದಕ್ಕಾಗಿ 2–3 ತಲೆಮಾರು ಸಂಕಷ್ಟ ಅನುಭವಿಸಬೇಕಾಗಬಹುದು ಎಂದಿದ್ದಾರೆ. ಆ ಮೂಲಕ, ಬ್ರಿಜ್‌ಭೂಷಣ್‌ ವಿರುದ್ಧದ ಹೋರಾಟ ಮುಂದುವರಿಸುವ ಸೂಚನೆ ನೀಡಿದ್ದಾರೆ.

ಮಾಧ್ಯಮಗೋಷ್ಠಿಯಲ್ಲಿ ವಿನೇಶಾ ಪೋಗಟ್, ಬಜರಂಗ್‌ ಪೂನಿಯಾ ಮತ್ತು ಸಾಕ್ಷಿ ಮಲಿಕ್‌

ಬ್ರಿಜ್‌ಭೂಷಣ್‌ ವಿರುದ್ಧ ಕ್ರಮಕ್ಕೆ ಮತ್ತು ಡಬ್ಲ್ಯುಎಫ್‌ಐ ಚುನಾವಣೆಯಲ್ಲಿ ಅವರ ಕುಟುಂಬದವರು ಅಥವಾ ಆಪ್ತರು ಭಾಗವಹಿಸಲು ಅವಕಾಶ ನೀಡಬಾರದು ಎಂದು ಒತ್ತಾಯಿಸಿ ಕುಸ್ತಿಪಟುಗಳು ಪ್ರತಿಭಟಿಸಿದ್ದರು. ಅದರಂತೆ ಕ್ರೀಡಾ ಸಚಿವ ಅನುರಾಗ್‌ ಠಾಕೂರ್‌ ಅವರು ಭರವಸೆ ನೀಡಿದ್ದರಿಂದ ಜೂನ್‌ 7ರಂದು ಪ್ರತಿಭಟನೆಯನ್ನು ಕೈಬಿಡಲಾಗಿತ್ತು.

'ಶೋಷಣೆ ಬಹಿರಂಗವಾಗಿ ನಡೆಯಲಿದೆ'
ಬಜರಂಗ್‌ ಅವರೊಂದಿಗೆ ಮಾಧ್ಯಮಗೋಷ್ಟಿಯಲ್ಲಿ ಇದ್ದ ವಿನೇಶಾ ಪೋಗಟ್‌, 'ಮುಂಬರುವ ಮಹಿಳಾ ಕುಸ್ತಿಪಟುಗಳೂ ದೌರ್ಜನ್ಯ ಅನುಭವಿಸಲಿದ್ದಾರೆ' ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

'ಜಂತರ್‌ ಮಂತರ್‌ನಲ್ಲಿ ಪ್ರತಿಭಟನೆ ನಡೆಸುವುದಕ್ಕೂ 3–4 ತಿಂಗಳ ಮೊದಲೇ, ನಾನು ಹಾಗೂ ಬಜರಂಗ್‌ ಗೃಹ ಸಚಿವರನ್ನು ಭೇಟಿಯಾಗಿದ್ದೆವು. ಯಾವೆಲ್ಲ ಮಹಿಳಾ ಕ್ರೀಡಾಪಟುಗಳು ಕಿರುಕುಳ ಅನುಭವಿಸಿದ್ದಾರೆ ಎಂಬುದನ್ನು ಸ್ಪಷ್ಟವಾಗಿ ಹೇಳಿದ್ದೆವು. ಗಮನ ಹರಿಸುವಂತೆ ಒತ್ತಾಯಿಸಿದ್ದೆವು. ಅವರು ಭರವಸೆಯನ್ನೂ ನೀಡಿದ್ದರು' ಎಂದು ಪೋಗಟ್‌ ಹೇಳಿದ್ದಾರೆ.

'ಸಂಜಯ್‌ ಸಿಂಗ್‌ ಅವರಂತಹ ವ್ಯಕ್ತಿಗಳು ಉನ್ನತ ಸ್ಥಾನಕ್ಕೇರಿರುವುದು ನೋವನ್ನುಂಟು ಮಾಡುತ್ತಿದೆ. ಅವರನ್ನು ಅಧ್ಯಕ್ಷರನ್ನಾಗಿಸಿರುವುದರಿಂದ ಮುಂದಿನ ತಲೆಮಾರಿನ ಮಹಿಳೆಯರೂ ಶೋಷಣೆ ಅನುಭವಿಸಲಿದ್ದಾರೆ. ಪರದೆಯ ಹಿಂದೆ ಏನೆಲ್ಲಾ ನಡೆಯಿತೋ, ಅದು ಇನ್ನುಮುಂದೆ ಬಹಿರಂಗವಾಗಿ ನಡೆಯಲಿದೆ. ನಮ್ಮ ದೇಶದಲ್ಲಿ ನಾವು ಹೇಗೆ ನ್ಯಾಯ ಪಡೆಯಬೇಕು ಎಂಬುದೇ ಗೊತ್ತಾಗುತ್ತಿಲ್ಲ. ಈ ದೇಶದಲ್ಲಿ ಕುಸ್ತಿ ಭವಿಷ್ಯಕ್ಕೆ ಕತ್ತಲು ಕವಿದಿದೆ' ಎಂದು ನೊಂದುಕೊಂಡಿದ್ದಾರೆ.

ಕಣ್ಣೀರು ಹಾಕಿದ ಸಾಕ್ಷಿ ಮಲಿಕ್‌

ಕುಸ್ತಿಗೆ ಸಾಕ್ಷಿ ವಿದಾಯ
2016ರ ರಿಯೊ ಒಲಿಂಪಿಕ್‌ನಲ್ಲಿ ಕಂಚಿನ ಪದಕ ವಿಜೇತ ಕುಸ್ತಿಪಟು ಸಾಕ್ಷಿ ಮಲಿಕ್‌ ಅವರು ಇದೇ ವೇಳೆ ಕುಸ್ತಿಗೆ ವಿದಾಯ ಘೋಷಿಸಿದ್ದಾರೆ.

ಮಾತನಾಡುತ್ತಲೇ ತಮ್ಮ ಶೂಗಳನ್ನು ಟೇಬಲ್‌ ಮೇಲಿಟ್ಟ ಸಾಕ್ಷಿ ಮಲಿಕ್‌, 'ನಾವು ನಮ್ಮ ಹೃದಯದಿಂದ ಹೋರಾಟ ನಡೆಸಿದ್ದೇವೆ. ಬ್ರಿಜ್‌ಭೂಷಣ್‌ ಅವರಂತಹ ವ್ಯಕ್ತಿಯ ಉದ್ಯಮ ಪಾಲುದಾರ ಮತ್ತು ಆಪ್ತ ಡಬ್ಲ್ಯುಎಫ್‌ಐನ ಅಧ್ಯಕ್ಷರಾಗಿ ಆಯ್ಕೆಯಾಗಿರುವುದರಿಂದ ನಾನು ಕುಸ್ತಿ ತೊರೆಯುತ್ತಿದ್ದೇನೆ. ಇಂದಿನಿಂದ ನನ್ನನ್ನು ಕುಸ್ತಿ ಮ್ಯಾಟ್ ಮೇಲೆ ನೋಡಲಾರಿರಿ' ಎಂದು ಕಣ್ಣೀರು ಹಾಕಿದ್ದಾರೆ.

'ನಾವು ಮಹಿಳಾ ಅಧ್ಯಕ್ಷರ ಆಯ್ಕೆಯನ್ನು ಬಯಸಿದ್ದೆವು. ಆದರೆ ಅದು ಸಾಧ್ಯವಾಗಲಿಲ್ಲ' ಎಂದೂ ಬೇಸರ ವ್ಯಕ್ತಪಡಿಸಿದ್ದಾರೆ.

ಸಂಜಯ್ ಸಿಂಗ್‌ ಸ್ಪರ್ಧೆಗೆ ಆಕ್ಷೇಪ ವ್ಯಕ್ತಪಡಿಸಿದ್ದ ಕುಸ್ತಿಪಟುಗಳು
ಬ್ರಿಜ್‌ಭೂಷಣ್‌ ಅವರ ಆಪ್ತರಾದ ಸಂಜಯ್ ಸಿಂಗ್ ಅವರು ಚುನಾವಣೆಯಲ್ಲಿ ಸ್ಪರ್ಧಿಸದಂತೆ ನೋಡಿಕೊಳ್ಳಬೇಕು ಎಂದು ಕೋರಿ ಬಜರಂಗ್‌ ಪೂನಿಯಾ ಮತ್ತು ಸಾಕ್ಷಿ ಮಲಿಕ್‌ ಅವರು ಡಿಸೆಂಬರ್ 11ರಂದು ಕ್ರೀಡಾ ಸಚಿವ ಅನುರಾಗ್‌ ಠಾಕೂರ್‌ ಅವರನ್ನು ಭೇಟಿಯಾಗಿ ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.